ಸಾರಾಂಶ
-ಅಧಿಕಾರಿಗಳು ರೈತರ ಬೆಳೆ ಕ್ಷೇತ್ರಗಳಿಗೆ ಭೇಟಿ ನೀಡಿ ಸಮಸ್ಯೆ ಆಲಿಸಿ: ಅಜಮುದ್ದೀನ್
-----ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದಲ್ಲಿ ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ ಬಾಗಲಕೋಟೆ ಅಡಿಯಲ್ಲಿ ಬರುವ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಿಂದ ಈರುಳ್ಳಿ ಹಾಗೂ ಮಾವಿನ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.ಈ ವೇಳೆ ಜಿಲ್ಲಾ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಅಜಮುದ್ದೀನ್ ಮಾತನಾಡಿ, ರೈತರು ನಿಗದಿತ ಮಟ್ಟದ ಲಾಭ ಪಡೆಯಲು ತೋಟಗಾರಿಕೆ ಬೆಳೆಗಳನ್ನ ಹೆಚ್ಚು ಬೆಳೆಯಬೇಕು. ವೈಜ್ಞಾನಿಕವಾಗಿ ವಿಜ್ಞಾನಿಗಳ ಸಲಹೆಯಿಂದ ಬೆಳೆಯುವುದು ಸೂಕ್ತ. ಅಲ್ಲದೆ ಅಧಿಕಾರಿಗಳು ಬರೀ ಕಚೇರಿಯಲ್ಲಿ ತರಬೇತಿ ಕೈಗೊಳ್ಳುವುದಕ್ಕಿಂತ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ ಅವರ ಸಮಸ್ಯೆಗಳಿಗೆ ಅನುಗುಣವಾಗಿ ಕಾರ್ಯಕ್ರಮ ಕೈಗೊಳ್ಳುವುದು ಸೂಕ್ತ ಎಂದು ಸೂಚಿಸಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಇಲಾಖೆ ಉಪನಿರ್ದೇಶಕ ಸಿದ್ದಣ್ಣ ಅಣಬಿ ಮಾತನಾಡಿ, ಈ ತರಬೇತಿಯು ರೈತರಿಗೆ ಸೂಕ್ತ ಸಮಯಕ್ಕೆ ಕೈಗೊಂಡಿದ್ದು, ರೈತರು ತಾಂತ್ರಿಕ ಮಾಹಿತಿಯನ್ನು ವಿಜ್ಞಾನಿಗಳಿಂದ ಪಡೆದು ಇಲಾಖೆಯಲ್ಲಿ ಸಿಗುವ ಸೌಲಭ್ಯಗಳನ್ನು ಸರಿಯಾಗಿ ಬಳಸಿಕೊಂಡು ಹೆಚ್ಚಿನ ಇಳುವರಿ ಮತ್ತು ಆದಾಯವನ್ನು ಪಡೆಯಬೇಕೆಂದು ತಿಳಿಸಿದರು.ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥರಾದ ಡಾ. ರಾಜಕುಮಾರ್ ಎಂ. ಮಾತನಾಡಿ, ಸದ್ಯ ಈರುಳ್ಳಿ ಮತ್ತು ಮಾವು ಬೇಸಾಯ ಮಾಡಲು ಸೂಕ್ತ ಸಮಯವಾಗಿದ್ದು, ಸಾಕಷ್ಟು ರೈತರ ಬೇಡಿಕೆಯ ಮೇರೆಗೆ ಈ ತರಬೇತಿಯನ್ನು ಹಮ್ಮಿಕೊಂಡಿದ್ದು ಸರಿಯಾದ ಬೀಜ ಹಾಗೂ ಸಸಿಗಳ ಆಯ್ಕೆ ಮತ್ತು ರೋಗ-ಕೀಟಗಳ ಬಾಧೆಯನ್ನು ಹೇಗೆ ನಿರ್ವಹಣೆ ಮಾಡಬೇಕೆಂಬುದರ ಬಗ್ಗೆ ರೈತರಿಗೆ ತಿಳಿಸಿದರು.
ಕೃಷಿ ವಿಜ್ಞಾನ ಕೇಂದ್ರ ಕಲಬುರಗಿಯ ತೋಟಗಾರಿಕೆ ವಿಜ್ಞಾನಿ ಡಾ. ಸನ್ಮತಿ ಮಾತನಾಡಿ, ಈರುಳ್ಳಿ ಹಾಗೂ ಮಾವು ಬೆಳೆಯನ್ನು ಬೆಳೆಯುವ ಎಲ್ಲಾ ಹೊಸ ತಂತ್ರಜ್ಞಾನಗಳ ಬಗ್ಗೆ ಹಾಗೂ ಸಮಯಕ್ಕನುಸಾರವಾಗಿ ಬೇಸಾಯ ಮಾಡುವುದರ ಬಗ್ಗೆ ತಿಳಿಸಿದರು.ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ವಿಷಯ ತಜ್ಞರಾದ ಡಾ. ಶಶಿಕಲಾ ಎಸ್. ರುಳಿ ಅವರು, ಈರುಳ್ಳಿ ಮತ್ತು ಮಾವಿನ ಬೆಳೆಗಳ ಶೇಖರಣೆ ಹಾಗೂ ಮೌಲ್ಯವರ್ಧನೆಯ ಮಹತ್ವ ಮತ್ತು ವಿಧಾನಗಳ ಬಗ್ಗೆ ತಿಳಿಸಿದರು.
ಕೇಂದ್ರದ ಹಿರಿಯ ಸಹಾಯಕರಾದ ಮಹಾದೇವಪ್ಪ ವಂದಿಸಿದರು. ಈ ತರಬೇತಿಯಲ್ಲಿ ಸುಮಾರು 50ಕ್ಕೂ ಹೆಚ್ಚು ಆಸಕ್ತ ರೈತರು ಭಾಗವಹಿಸಿ ತರಬೇತಿಯ ಲಾಭ ಪಡೆದುಕೊಂಡರು.------
10ವೈಡಿಆರ್1: ಯಾದಗಿರಿ ನಗರದಲ್ಲಿ ಈರುಳ್ಳಿ ಹಾಗೂ ಮಾವಿನ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.