ಸಾರಾಂಶ
ಮಹಿಳೆಯರು ಕೃಷಿ ವಿವಿಯಿಂದ ನೀಡುವ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿ ಮುಂದಿನ ದಿನಗಳಲ್ಲಿ ತಾಂತ್ರಿಕ ಮತ್ತು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು.
ಕನ್ನಡಪ್ರಭ ವಾರ್ತೆ ಮೈಸೂರು
ಕೃಷಿ ವಿವಿ ಸಂಶೋಧನ ನಿರ್ದೇಶನಾಲಯಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಖಿಲ ಭಾರತ ಸುಸಂಘಟಿತ ತಂತ್ರಜ್ಞಾನ ಪ್ರಾಯೋಜನೆ- ಕೃಷಿನಿರತ ಮಹಿಳೆಯರು (ಎಸ್.ಸಿ.ಎಸ್.ಪಿ.), ಭಾರತೀಯ ಕೃಷಿ ಅನುಸಂಧಾನ ಸಂಸ್ಥೆಯ (ಐಸಿಎಆರ್) ಅನುದಾನದಡಿಯಲ್ಲಿ ಮೈಸೂರಿನ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ಸಹಯೋಗದೊಂದಿಗೆ ಎಚ್.ಡಿ. ಕೋಟೆ ತಾಲೂಕಿನ ಚಕ್ಕೋಡನಹಳ್ಳಿ ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮಹಿಳಾ ಫಲಾನುಭವಿಗಳಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಸ್ಥಾಪಿಸುವ ನಿಟ್ಟಿನಲ್ಲಿ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮ ಉದ್ಘಾಟಿಸಿದ ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕ ಸಾವಯವ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸಿ. ರಾಮಚಂದ್ರ ಅವರು, ಕೃಷಿ ಯಂತ್ರೋಪಕರಣಗಳ ಬಗ್ಗೆ ಬುಡಕಟ್ಟು ಮಹಿಳೆಯರಿಗೆ ಮನವರಿಕೆ ಮಾಡುತ್ತಾ, ಕೃಷಿ ಯಂತ್ರೋಪಕರಣ ಬಾಡಿಗೆ ಕೇಂದ್ರದ ಮಹತ್ವದ ಬಗ್ಗೆ ಅರಿವು ಮೂಡಿಸಿ, ರೈತ ಮಹಿಳೆಯರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.ಯೋಜನೆಯ ಕಾರ್ಯಕ್ರಮ ನಿರ್ದೇಶಕಿ ಡಾ.ಬಿ. ಕಲ್ಪನಾ ಅವರು, ಮಹಿಳೆಯರು ಕೃಷಿ ವಿವಿಯಿಂದ ನೀಡುವ ತರಬೇತಿ ಮತ್ತು ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿ ಮುಂದಿನ ದಿನಗಳಲ್ಲಿ ತಾಂತ್ರಿಕ ಮತ್ತು ಆರ್ಥಿಕವಾಗಿ ಸಬಲೀಕರಣ ಹೊಂದಬೇಕು. ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಕೃಷಿ ಯಂತ್ರೋಪಕರಣಗಳ ಬಾಡಿಗೆ ಕೇಂದ್ರ ಒಂದು ವರದಾನವಾಗಲಿದೆ ಎಂದರು.ಎಚ್.ಡಿ. ಕೋಟೆ ತಾಲೂಕಿನ ಪೀಪಲ್ ಟ್ರೀ ಸಂಸ್ಥೆಯ ಚನ್ನಕೇಶವ, ಲತಾ, ಭಗತ್ ಲೋಕೇಶ್ ಇದ್ದರು.