ಸಾರಾಂಶ
ಕನ್ನಡಪ್ರಭ ವಾರ್ತೆ ಕೊರಟಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಬೆಂಗಳೂರಿನ ಸ್ಕಾಟಿನೆಂಟ್ ಟೆಕ್ನಾಲಜೀಸ್ ಸಂಸ್ಥೆಯ ನಡುವೆ ಶೈಕ್ಷಣಿಕ ವೃತ್ತಾಭಿವೃದ್ಧಿ ಸಹಯೋಗಕ್ಕಾಗಿ ಪರಸ್ಪರ ಒಪ್ಪಂದಕ್ಕೆ ಸಹಿ ಮಾಡಲಾಯಿತು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ವಿಭಾಗ ಮತ್ತು ಬೆಂಗಳೂರಿನ ಸ್ಕಾಟಿನೆಂಟ್ ಟೆಕ್ನಾಲಜೀಸ್ ಸಂಯುಕ್ತ ಆಶ್ರಯದಲ್ಲಿ ಪದವಿ ಪಡೆದ ನಂತರ ಬೆಂಗಳೂರಿನಲ್ಲಿ ಕರಿಯರ್ ಅವಕಾಶಗಳನ್ನು ಹೇಗೆ ಆರಂಭಿಸಬಹುದು ಎಂಬ ವಿಷಯದ ಮೇಲೆ ವಿಶೇಷ ತರಬೇತಿ ನೀಡುವ ಕಾರ್ಯಾಗಾರವನ್ನು ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.ಸ್ಕಾಟಿನೆಂಟ್ ಟೆಕ್ನಾಲಜೀಸ್ ಸಹ-ಸ್ಥಾಪಕ ಹಾಗೂ ವ್ಯವಹಾರ ಮುಖ್ಯಸ್ಥ ನವೀನ್‌ಕುಮಾರ್ ಮಾತನಾಡಿ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್, ಪ್ರಾಜೆಕ್ಟ್ ಮ್ಯಾನೇಜ್ಮೆಂಟ್, ಡೇಟಾ ಅನಾಲಿಟಿಕ್ಸ್, ಮಾನವ ಸಂಪನ್ಮೂಲ, ಹಣಕಾಸು ನಿರ್ವಹಣೆ, ಉದ್ಯಮಶೀಲತೆ ಮತ್ತು ಸ್ಟಾರ್ಟ್‌ಆಪ್ ಮ್ಯಾನೇಜ್ಮೆಂಟ್ ಸೇರಿದಂತೆ ವಿವಿಧ ತಾಂತ್ರಿಕ ಹಾಗೂ ತಾಂತ್ರಿಕೇತರ ತರಬೇತಿ ಕಾರ್ಯಕ್ರಮಗಳನ್ನು ನೀಡುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಈರಪ್ಪ ನಾಯಕ ಮಾತನಾಡಿ, ಇಂತಹ ಕಾರ್ಯಾಗಾರಗಳು ವಿದ್ಯಾರ್ಥಿಗಳಿಗೆ ಭವಿಷ್ಯದ ಉದ್ಯೋಗ ಮತ್ತು ಸ್ವಾವಲಂಬನೆಗಾಗಿ ದಾರಿ ತೋರಿಸುತ್ತದೆ. ಈ ಒಪ್ಪಂದವು ವಿದ್ಯಾರ್ಥಿಗಳ ಕರಿಯರ್ ನಿರ್ಮಾಣ ಹಾಗೂ ಕೌಶಲ್ಯಾಭಿವೃದ್ಧಿಗೆ ಮಹತ್ವದ ಹೆಜ್ಜೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ.ಲಕ್ಷ್ಮೀಪತಯ್ಯ, ಪ್ರಾಧ್ಯಾಪಕ ಡಾ.ಅಮಿತಾ, ಪೂಜಾ ನಟರಾಜ್ ಉಪಸ್ಥಿತರಿದ್ದರು.