ವಿಶೇಷ ಅಗತ್ಯವುಳ್ಳವರಿಗೆ ತರಬೇತಿ ಕಾರ್ಯಾಗಾರ

| Published : Sep 27 2024, 01:16 AM IST

ಸಾರಾಂಶ

ನಿಸರ್ಗ ಫೌಂಡೇಷನ್ ಸಂಸ್ಥೆಯು ಎಪಿಡಿ ಸಂಸ್ಥೆ ಹಾಗೂ ಸರ್ಕಾರದ ಸಹಯೋಗದೊಂದಿಗೆ ಎಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕಿನಾದ್ಯಂತ ಮೊದಲ ಹಂತದಲ್ಲಿ 0 ಯಿಂದ 8 ವರ್ಷದೊಳಗಿನ 200 ಮಕ್ಕಳ ಬೆಳವಣಿಗೆಯಲ್ಲಿ ಕಂಡುಬರುವ ನ್ಯೂನ್ಯತೆಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಪುನರ್ವಸತಿಗೊಳಿಸುತ್ತಿದೆ.

ಕನ್ನಡಪ್ರಭ ವಾರ್ತೆ ಎಚ್.ಡಿ.ಕೋಟೆ

ಪಟ್ಟಣದ ನಿಸರ್ಗ ಫೌಂಡೇಷನ್ ಹಾಗೂ ಬೆಂಗಳೂರಿನ ಎಪಿಡಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ತಾಪಂ ಸಾಮರ್ಥ್ಯ ಸೌಧದಲ್ಲಿ ವಿಶೇಷ ಅಗತ್ಯವುಳ್ಳವರಿಗೆ ಶೀಘ್ರ ಪತ್ತೆ ಹಚ್ಚುವಿಕೆ ಕಾರ್ಯಕ್ರಮದ ಮಹತ್ವ ಹಾಗೂ 21 ವಿಧದ ವಿಕಲತೆಯ ಬಗ್ಗೆ ತರಭೇತಿ ಕಾರ್ಯಾಗಾರ ನಡೆಯಿತು.

ಮುಖ್ಯಅತಿಥಿಯಾಗಿದ್ದ ನಿಸರ್ಗ ಫೌಂಡೇಷನ್ ಸಂಸ್ಥೆಯ ನಿರ್ದೇಶಕ ಪ್ರಭು ಮಾತನಾಡಿ, ನಿಸರ್ಗ ಫೌಂಡೇಷನ್ ಸಂಸ್ಥೆಯು ಎಪಿಡಿ ಸಂಸ್ಥೆ ಹಾಗೂ ಸರ್ಕಾರದ ಸಹಯೋಗದೊಂದಿಗೆ ಎಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕಿನಾದ್ಯಂತ ಮೊದಲ ಹಂತದಲ್ಲಿ 0 ಯಿಂದ 8 ವರ್ಷದೊಳಗಿನ 200 ಮಕ್ಕಳ ಬೆಳವಣಿಗೆಯಲ್ಲಿ ಕಂಡುಬರುವ ನ್ಯೂನ್ಯತೆಗಳನ್ನು ಪತ್ತೆಹಚ್ಚಿ ಅವರಿಗೆ ಸೂಕ್ತ ಚಿಕಿತ್ಸೆ ನೀಡಿ ಪುನರ್ವಸತಿಗೊಳಿಸುತ್ತಿದ್ದು, ಮುಂದಿನ ದಿನಗಳಲ್ಲಿ ಎಲ್ಲ ವಿ.ಆರ್. ಡಬ್ಲ್ಯೂ ಹಾಗೂ ಎಂ.ಆರ್.ಡಬ್ಲ್ಯೂ. ಕಾರ್ಯಕರ್ತರ ಸಹಕಾರದೊಂದಿಗೆ ತಾಲೂಕಿನಾದ್ಯಂತ ಇರುವ ಎಲ್ಲ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನೆರವಾಗಲು ಕೈಜೋಡಿಸಬೇಕೆಂದು ಕರೆನೀಡಿದರು.

ಸರ್ವ ಶಿಕ್ಷಣ ಅಭಿಯಾನದ ಸಮನ್ವಯ ಶಿಕ್ಷಣದ ಸಂಯೋಜಕ ಗಿರೀಶ್ ಮೂರ್ತಿ ಮಾತನಾಡಿ, 6 ರಿಂದ 16ವರ್ಷದೊಳಗಿನ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ನಾವುಗಳು ಈಗಾಗಲೇ ಕೆಲಸ ಮಾಡುತ್ತಿದ್ದು, 0 ಯಿಂದ 8 ವರ್ಷದೊಳಗಿನ ಮಕ್ಕಳ ಬೆಳವಣಿಗೆಯ ನ್ಯೂನತೆಯನ್ನು ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸಲು ಮುಂದೆ ಬಂದಿರುವ ನಿಸರ್ಗ ಫೌಂಡೇಷನ್ ಸಂಸ್ಥೆಯ ಕಾರ್ಯ ಶ್ಲಾಘನೀಯ ಎಂದರು.

ಸಂಪನ್ಮೂಲ ವ್ಯಕ್ತಿ ಎಪಿಡಿ ಸಂಸ್ಥೆಯ ಸ್ಮಿತಾ ಮಾತನಾಡಿ, ಶೀಘ್ರ ಪತ್ತೆ ಹಚ್ಚುವಿಕೆ ಕಾರ್ಯಕ್ರಮದ ಮಹತ್ವ, 21 ವಿಧದ ಅಂಗವಿಕಲತೆಯ ಬಗ್ಗೆ, ಅಂಕವಿಕಲರ ಕಲ್ಯಾಣ ಹಕ್ಕು ಕಾಯ್ದೆ-2016, ನಿರಾಮಯ ಯೋಜನೆ, ಆರೈಕೆದಾರರಿಗೆ ಇರುವ ವಿಶೇಷ ಭತ್ಯೆ, ವಿಶೇಷ ಅಗತ್ಯವುಳ್ಳವರಿಗಿರುವ ಸರ್ಕಾರಿ ಸೌಲಭ್ಯಗಳು ಹಾಗೂ ಅವರಿಗಿರುವ ಸಾಧನ ಸಲಕರಣೆಯ ಬಗ್ಗೆ ತರಬೇತಿ ನೀಡಿದರು.

ತರಬೇತಿ ಕಾರ್ಯಾಗಾರದಲ್ಲಿ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತ ಸಂಯೋಜಕ ಮಹದೇವಯ್ಯ, ತಾಪಂ ಆಡಳಿತ ಅಧಿಕಾರಿ ಮುತ್ತುರಾಜ್, ನಿಸರ್ಗ ಫೌಂಡೇಷನ್ ಸಂಸ್ಥೆಯ ಚಿಕ್ಕತಿಮ್ಮನಾಯ್ಕ, ಶೇಖರ್ ನಾಯಕ ಹಾಗೂ ಎಚ್.ಡಿ. ಕೋಟೆ ಹಾಗೂ ಸರಗೂರು ತಾಲೂಕಿನ 35 ಕ್ಕಿಂತ ಹೆಚ್ಚು ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರು ಭಾಗವಹಿಸಿದ್ದರು.