ಸಾರಾಂಶ
ರಾಜ್ಯದ ಶಕ್ತಿ ಕೇಂದ್ರದಲ್ಲೇ ದೇಶ ದ್ರೋಹಿ ಕೂಗು ಕೂಗಿದ ಘಟನೆ ಖಂಡಿಸಿ ಜೆಡಿಎಸ್ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಆರೂವರೆ ಕೋಟಿ ಕನ್ನಡಿಗರ ಹೃದಯವಾದ ವಿಧಾನಸೌಧದಲ್ಲಿ ದೇಶದ್ರೋಹದ ಘೋಷಣೆ ಕೂಗಿರುವ ದೇಶದ್ರೋಹಿಗಳನ್ನು ಕೂಡಲೇ ಬಂಧಿಸಬೇಕು ಎಂದು ಜೆಡಿಎಸ್ ಒತ್ತಾಯ ಮಾಡಿದೆ.ಬುಧವಾರ ಫ್ರೀಡಂಪಾರ್ಕ್‌ನಲ್ಲಿ ಪಕ್ಷದ ಬೆಂಗಳೂರು ನಗರ ಘಟಕ ಅಧ್ಯಕ್ಷ ಎಚ್.ಎಂ.ರಮೇಶ್‌ಗೌಡ ನೇತೃತ್ವದಲ್ಲಿ ರಾಜ್ಯಸಭಾ ಚುನಾವಣಾ ಫಲಿತಾಂಶ ಬಳಿಕ ಪಾಕಿಸ್ತಾನ ಪರ ಘೋಷಣೆ ಕೂಗಿರುವ ಆರೋಪವನ್ನು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಮೇಶ್ ಗೌಡ, ರಾಜ್ಯಸಭೆ ಸ್ಥಾನದಿಂದ ನಾಸಿರ್ ಹುಸೇನ್ ಅವರನ್ನು ವಜಾ ಮಾಡಬೇಕು ಹಾಗೂ ದೇಶದ್ರೋಹದ ಘೋಷಣೆಗಳನ್ನು ಕೂಗಿದ ದ್ರೋಹಿಗಳನ್ನು ತಕ್ಷಣವೇ ಬಂಧಿಸಬೇಕು. ಕಾಂಗ್ರೆಸ್ ಸರ್ಕಾರ ಇಂತಹ ಕಿಡಿಗೇಡಿಗಳು, ದ್ರೋಹಿಗಳನ್ನು ವ್ಯವಸ್ಥಿತವಾಗಿ ಪೋಷಣೆ ಮಾಡುತ್ತಿದೆ. ಈವರೆವಿಗೂ ಸರ್ಕಾರ ಇಂತಹ ದೇಶದ್ರೋಹಿ ಕೃತ್ಯವನ್ನು ಖಂಡಿಸಿಲ್ಲ. ಬದಲಿಗೆ ಆ ಕೃತ್ಯವನ್ನು ಸಮರ್ಥನೆ ಮಾಡಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಗೃಹ ಸಚಿವರು ತಕ್ಷಣವೇ ದೇಶದ್ರೋಹದ ಘೋಷಣೆಯನ್ನು ಖಂಡಿಸಿ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಿತ್ತು. ಆದರೆ, ಆ ಪಕ್ಷದ ಮುಖಂಡರೂ ಖಂಡಿಸುವ ಮಾತಿರಲಿ, ಅವರನ್ನೇ ಸಮರ್ಥನೆ ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ನಗರ ಜೆಡಿಎಸ್ ಘಟಕದ ಕಾರ್ಯಾಧ್ಯಕ್ಷ ಜಿ.ಟಿ.ರೇವಣ್ಣ, ಪರಿಶಿಷ್ಟ ವಿಭಾಗದ ವೇಲು, ಯುವ ಘಟಕದ ಯುವ ಕಾರ್ಯಾಧ್ಯಕ್ಷ ಚಂದ್ರಶೇಖರ್, ಪಕ್ಷದ ಕಾರ್ಯಕರ್ತರು, ನಾಯಕರು ಭಾಗವಹಿಸಿದ್ದರು.