ಸಾರಾಂಶ
ಸಮುದಾಯ ಸಮ್ಮಿಲನ ಸಮಾವೇಶ-೨೦೨೪
ಕನ್ನಡಪ್ರಭ ವಾರ್ತೆ ಹಾಸನಮಂಗಳಮುಖಿಯರು ಮತ್ತು ಲೈಂಗಿಕ ಕಾರ್ಯಕರ್ತೆಯರಿಗೆ ವಿಶೇಷವಾದ ಹಕ್ಕುಗಳನ್ನು ಹಾಗೂ ಅವರಿಗೆ ಕಾನೂನು ಅಡಿಯಲ್ಲಿ ವಿಶೇಷವಾದ ರಕ್ಷಣೆಯನ್ನು ಕಲ್ಪಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ತಿಳಿಸಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪ್ರತಿಬಂಧಕ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಎ.ಆರ್.ಟಿ. ಕೇಂದ್ರ ಜಿಲ್ಲಾ ಆಸ್ಪತ್ರೆ, ಜೀವನಾಶ್ರಯ ನೆಟ್ ವರ್ಕ್, ಪ್ರಕೃತಿ ಸಮುದಾಯ ಸೇವಾ ಸಂಸ್ಥೆ, ಯಶಸ್ವಿನಿ ಸಂಸ್ಥೆ ಸಹಬಾಗಿನಿ ಮತ್ತು ಚೈತನ್ಯ ಸಂಸ್ಥೆ ಹಾಗೂ ಸಮುದಾಯದವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಬೆಳಿಗ್ಗೆ ಹಮ್ಮಿಕೊಳ್ಳಲಾಗಿದ್ದ ಸಮುದಾಯ ಸಮ್ಮಿಲನ ಸಮಾವೇಶ-೨೦೨೪ ಜಿಲ್ಲಾ ಮಟ್ಟದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.‘ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಸುಪ್ರಿಂ ಕೋರ್ಟ್ ಮಟ್ಟದಲ್ಲಿ ಕೆಲಸವನ್ನು ನಿರ್ವಹಿಸುತ್ತಿದ್ದು, ಲೈಂಗಿಕ ಕಾರ್ಯಕರ್ತೆಯ ವೃತ್ತಿಯನ್ನು ಆರಂಭಿಸಿರುವವರ ಪರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಹೋರಾಟ ಮಾಡಿದ್ದು, ಮಂಗಳಮುಖಿಯರು, ಲೈಂಗಿಕ ವೃತ್ತಿ ನಡೆಸುತ್ತಿರುವವರಿಗೆ ವಿಶೇಷವಾದ ಹಕ್ಕುಗಳನ್ನು ಹಾಗೂ ಅವರಿಗೆ ಕಾನೂನು ಅಡಿಯಲ್ಲಿ ವಿಶೇಷವಾದ ರಕ್ಷಣೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಅಲ್ಲಿ ನಮ್ಮ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಹೋರಾಟ ಮಾಡಿ ಮೂಲಭೂತ ಹಕ್ಕುಗಳನ್ನು ಎಲ್ಲಾ ನಾಗರಿಕರಿಗೆ ಕೊಡಲಾಗಿದ್ದು, ಮಂಗಳಮುಖಿಯರು, ಲೈಂಗಿಕ ವೃತ್ತಿ ನಡೆಸುತ್ತಿರುವವರಿಗೂ ಕೂಡ ಈ ಹಕ್ಕುಗಳು ದಕ್ಕುವಂತೆ ಮಾಡಬೇಕು ಎನ್ನುವ ನಿಟ್ಟಿನಲ್ಲಿ ೨೦೧೯ಕ್ಕೂ ಮೊದಲು ದೊಡ್ಡ ಮಟ್ಟದ ಹೋರಾಟವನ್ನು ಮಾಡಿ ವಿಶೇಷವಾದ ಅರ್ಜಿಯನ್ನು ನ್ಯಾಯಾಲಯದಲ್ಲಿ ತೆಗೆದುಕೊಂಡು ಬಂದು ಮಹತ್ತರವಾದ ಬದಲಾವಣೆಯನ್ನು ತರಲಾಗಿದೆ. ಇವರ ರಕ್ಷಣೆಗೊಸ್ಕರ ವಿಶೇಷವಾದ ಕಾನೂನನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ’ ಎಂದು ಮಾಹಿತಿ ನೀಡಿದರು.
‘ಯಾವುದೇ ಕಚೇರಿ, ಸಾರ್ವಜನಿಕ ಕಚೇರಿ, ದೂರು ಕೊಡಬೇಕಾದರೆ, ಆಸ್ಪತ್ರೆಗೆ ಹೋದರೂ ಕೂಡ ಇವರಿಗೆ ಎಲ್ಲೂ ಕೂಡ ತಾರತಮ್ಯ ಮಾಡಬಾರದು. ಇವರಿಗೆ ಮಾನ್ಯತೆ ಸಿಗಬೇಕೆಂಬುದನ್ನು ಕಾನೂನು ಹೇಳುತ್ತದೆ. ಯಾರು ಕೂಡ ನಿಮ್ಮ ಬಗ್ಗೆ ಅಸಭ್ಯ ವರ್ತನೆ ಮಾಡುವಂತಿಲ್ಲ. ನಿಮ್ಮ ಗೌರವಕ್ಕೆ ಧಕ್ಕೆ ಬರುವಂತೆ ನಡೆಸಲು ಸಾಧ್ಯವೇ ಇಲ್ಲ. ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.‘ಏನೇ ಸಮಸ್ಯೆ ಬಂದರೂ ನಮ್ಮ ಗಮನಕ್ಕೆ ತರಬೇಕು. ೨೦೧೫ ರಲ್ಲಿ ಮಾನವ ಕಳ್ಳಸಾಗಾಣಿಕೆ ಮತ್ತು ವಾಣಿಜ್ಯ ಲೈಂಗಿಕ ಶೋಷಣೆ ಸಂತ್ರಸ್ತ ಯೋಜನೆಯನ್ನು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರವು ಜಾರಿಗೆ ತಂದಿದೆ. ಆ ಯೋಜನೆಯಲ್ಲಿ ಕಾನೂನು ಸೇವೆಗಳ್ನು ಉಚಿತವಾಗಿ ಪಡೆದುಕೊಳ್ಳಲು ಅವಕಾಶವಿದ್ದು, ಏನೇ ಸಮಸ್ಯೆ ಬಂದರೂ ಕೂಡ ನಿವಾರಣೆ ಮಾಡಿಕೊಳ್ಳುವ ಹಕ್ಕು ನಿಮಗೆ ಲಭ್ಯವಿದೆ. ಇವೆಲ್ಲವನ್ನು ಉಚಿತವಾಗಿ ಪಡೆಯಬಹುದಾಗಿದೆ. ಸಮುದಾಯದ ಸಮಸ್ಯೆಗಳಿಗೆ ಏನೆ ಸಮಸ್ಯೆ ಬಂದರೂ ನಿವಾರಿಸುವ ನಿಟ್ಟಿನಲ್ಲಿ ನಮ್ಮ ಮೂಲಕ ಸಭೆಯನ್ನು ನಡೆಸುವ ಅಧಿಕಾರವನ್ನು ಈ ಯೋಜನೆಯಲ್ಲಿ ಕೊಡಲಾಗಿದೆ’ ಎಂದರು.
ಜಿಲ್ಲಾ ಏಡ್ಸ್ ಮತ್ತು ಕ್ಷಯರೋಗ ನಿಯಂತ್ರಣಾಧಿಕಾರಿ ಡಾ ಬಿ. ಸಂದ್ಯಾ, ಜಿಲ್ಲಾ ಕುಷ್ಠರೋಗಾಧಿಕಾರಿ ಡಾ ಪಿ. ನಾಗೇಶ್ ಆರಾಧ್ಯ, ಎ.ಆರ್.ಟಿ. ಕೇಂದ್ರ ಜಿಲ್ಲಾ ಆಸ್ಪತ್ರೆ ಮಾಜಿ ವೈದ್ಯಾಧಿಕಾರಿ ಡಾ ಪೂರ್ಣಿಮಾ, ದಲಿತಪರ ಹೋರಾಟಗಾರ ನಾಗರಾಜು ಹೆತ್ತೂರ್, ಪ್ರಕೃತಿ ಸಮುದಾಯ ಸೇವಾ ಸಂಸ್ಥೆ ಅಧ್ಯಕ್ಷೆ ವರ್ಷ, ಯಶಸ್ವಿನಿ ಶ್ರೇಯೋಭಿವೃದ್ಧಿ ಸಂಸ್ಥೆ ಅಧ್ಯಕ್ಷೆ ಅಸ್ಮಾ, ಚೈತನ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಯೋಜನಾ ನಿರ್ದೇಶಕರಾದ ಮಜೀದ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರೀಕ್ಷಕರಾದ ಪ್ರಿಯಾಂಕ, ಡ್ಯಾಪ್ಕೋ ಜಿಲ್ಲಾ ಮೇಲ್ವಿಚಾರಕರಾದ ಬಿ.ಎಂ. ರವಿಕುಮಾರ್ ಇದ್ದರು.ಹಾಸನದಲ್ಲಿ ಸಮುದಾಯ ಸಮ್ಮಿಲನ ಸಮಾವೇಶ-೨೦೨೪ ಜಿಲ್ಲಾ ಮಟ್ಟದ ಕಾರ್ಯಕ್ರಮ ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ.ಕೆ. ರವಿಕಾಂತ್ ಮಾತನಾಡಿದರು.