ಪ್ರಧಾನಗುರು ಸೇರಿ ಸಹ ಶಿಕ್ಷಕರ ವರ್ಗಾವಣೆ ಮಾಡಿ: ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ

| Published : Jan 24 2024, 02:02 AM IST

ಪ್ರಧಾನಗುರು ಸೇರಿ ಸಹ ಶಿಕ್ಷಕರ ವರ್ಗಾವಣೆ ಮಾಡಿ: ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಶಾಲಾ ಪ್ರಧಾನಗುರು ಹಾಗೂ ಇಬ್ಬರು ಸಹ ಶಿಕ್ಷಕರನ್ನು ಶಾಲೆಯಿಂದ ಬೇರೇಡೆ ವರ್ಗಾವಣೆ ಮಾಡಬೇಕು ಎಂದು ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ ಘಟನೆ ಮಂಗಳವಾರ ನಡೆಯಿತು.

ಗಜೇಂದ್ರಗಡ: ಶಾಲಾ ಪ್ರಧಾನಗುರು ಹಾಗೂ ಇಬ್ಬರು ಸಹ ಶಿಕ್ಷಕರನ್ನು ಶಾಲೆಯಿಂದ ಬೇರೇಡೆ ವರ್ಗಾವಣೆ ಮಾಡಬೇಕು ಎಂದು ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಿದ ಘಟನೆ ಮಂಗಳವಾರ ನಡೆಯಿತು.ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. ೫ಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಭೇಟಿ ನೀಡಿದಾಗ ಶಾಲೆಗೆ ಆಗಮಿಸಿದ ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರು ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ವಿದ್ಯಾರ್ಥಿಗಳಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬೇಕಾದ ಶಿಕ್ಷಕರು ಇಚ್ಛಾಶಕ್ತಿ ಪ್ರದರ್ಶಿಸುತ್ತಿಲ್ಲ. ಬೆಳಿಗ್ಗೆ ೯.೩೦ಕ್ಕೆ ಶಾಲೆ ಆರಂಭವಾಗುತ್ತದೆ. ಸಂಜೆ ೪.೩೦ಕ್ಕೆ ಶಾಲೆ ಬಾಗಿಲು ಹಾಕುತ್ತದೆ ಎನ್ನುವ ಮನಸ್ಥಿತಿಯಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪರಿಣಾಮ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಶಾಲಾ ಪ್ರಧಾನಗುರು ಹಾಗೂ ಇಬ್ಬರು ಸಹ ಶಿಕ್ಷಕರನ್ನು ಬೇರೆಡೆ ವರ್ಗಾವಣೆ ಮಾಡಬೇಕು. ಅಲ್ಲದೆ ಶಾಲೆಯಲ್ಲಿ ಅಡುಗೆಮನೆ ಕೊಠಡಿ ಇಲ್ಲದ ಪರಿಣಾಮ ವಿದ್ಯಾರ್ಥಿಗಳ ಶಾಲಾ ಕೊಠಡಿಯನ್ನು ಅಡುಗೆ ಮನೆಯನ್ನಾಗಿ ಮಾಡಲಾಗಿದೆ. ವಿದ್ಯಾರ್ಥಿ ಸ್ನೇಹಿ ವಾತಾವರಣ ಶಾಲೆಯಲ್ಲಿಲ್ಲ, ಶಾಲಾ ಕಂಪೌಡ್ ದುರಸ್ತಿ ಸೇರಿ ಇನ್ನಿತರ ಸಮಸ್ಯೆಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಎದುರು ಪಾಲಕರು ಹಾಗೂ ಬಡಾವಣೆಯ ಮುಖಂಡರು ದೂರಿದರು.

ಮನವಿ ಸ್ವೀಕರಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ರುದ್ರಪ್ಪ ಹುರಳಿ ಮಾತನಾಡಿ, ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ಕೊಡುವುದು ಶಿಕ್ಷಕರ ಕರ್ತವ್ಯವಾಗಿದೆ. ಅಲ್ಲದೆ ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಫಲಿತಾಂಶದಲ್ಲಿ ಹಿಂದಿಕ್ಕುವ ದೆಸೆಯಲ್ಲಿ ಸರ್ಕಾರಿ ಶಾಲಾ ಶಿಕ್ಷಕರು ಕೆಲಸ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಆದರೆ ನೀವು ನೀಡಿದ ದೂರನ್ನು ಗಂಭೀರವಾಗಿ ಪರಿಶೀಲಿಸಲು ಬದ್ಧವಾಗಿದ್ದು ಆಯಾ ಸಿಆರ್‌ಪಿಗಳ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಪರಿಶೀಲಿಸಲಾಗುವುದು. ಶಾಲಾ ಪ್ರಧಾನಗುರು ಪ್ರಮೋಶನ್ ಲಿಸ್ಟನಲ್ಲಿದ್ದು, ಬೇರೆ ಪ್ರಧಾನಗುರು ಆಗಮಿಸಲಿದ್ದಾರೆ. ಅಲ್ಲದೆ ಗುಣಮಟ್ಟದ ಶಿಕ್ಷಣದಲ್ಲಿ ಲೋಪವಾಗಿದ್ದು ಕಂಡು ಬಂದರೆ ಅಂತಹ ಶಿಕ್ಷಕರ ಮೇಲೆ ಶಿಸ್ತು ಕ್ರಮವನ್ನು ಕೈಗೊಳ್ಳಲಾಗುವುದು ಎಂದ ಅವರು, ಶಾಲೆಯಲ್ಲಿ ಕುಡಿಯುವ ನೀರು, ಸ್ವಚ್ಛತೆ ಹಾಗೂ ಕಂಪೌಡ್ ದುರಸ್ತಿ ಕುರಿತ ಸಮಸ್ಯೆಗಳಿಗೆ ತ್ವರತಿಗತಿಯಲ್ಲಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಲಕ್ಷ್ಮಣ ರೇಣಿ, ಪುರಸಭೆ ಸದಸ್ಯ ಯಮನೂರ ತಿರಕೋಜಿ, ಮುಖಂಡರಾದ ಮಾರುತಿ ಚಿಟಗಿ, ದಾವಲ ತಾಳಿಕೋಟಿ, ಎಂ.ಬಿ.ಸೋಂಪುರ, ಹನಮಂತ ಶೇಷನವನ್ನರ, ಯಮನಪ್ಪ ಕಲ್ಗುಡಿ, ಮೂಬೂ ಹವಾಲ್ದಾರ್, ಯಲ್ಪಪ್ಪ ಚಿಟಗಿ, ಮುತ್ತಣ್ಣ ಗಡ್ಡದ, ಬಾಬು ಯಲಬಣುಚಿ ಹಾಗೂ ಬಿಆರ್‌ಸಿ ಎಂ.ಎ. ಫಣಿಬಂದ, ಬಸವರಾಜ ಅಂಗಡಿ, ಎ.ಕೆ. ಒಂಟಿ, ವಿ.ಎ. ಹಾದಿಮನಿ,ಎಸ್.ಕೆ. ಸರಗಣಾಚಾರಿ ಸೇರಿ ಇತರರು ಇದ್ದರು.