ಸಾರಾಂಶ
ಮುಖ್ಯ ಶಿಕ್ಷಕ ರಮಾನಂದರನ್ನು ನಾಳೆಯೇ ದಡ್ಡಲಕಾಡು ಶಾಲೆಯಲ್ಲಿ ಮತ್ತೆ ಕರ್ತವ್ಯದಲ್ಲಿ ಮುಂದುವರಿಸಬೇಕು ತಪ್ಪಿದ್ದಲ್ಲಿ ಮತ್ತೆ ನಾಳೆಯೂ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಸುಳ್ಳು ಆರೋಪ ಹೊರಿಸಿ ದುರುದ್ದೇಶಪೂರಿತವಾಗಿ ಹಾಗೂ ಶಾಲಾ ಎಸ್‌ಡಿಎಂಸಿ ಮತ್ತು ದತ್ತು ಸಂಸ್ಥೆಯ ಒತ್ತಡಕ್ಕೆ ಮಣಿದು ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ರಮಾನಂದ ಅವರನ್ನು ಮತ್ತೊಂದು ಶಾಲೆಗೆ ನಿಯೋಜಿಸಿರುವ ಶಿಕ್ಷಣ ಇಲಾಖೆಯ ಕ್ರಮವನ್ನು ವಿರೋಧಿಸಿ ದಡ್ಡಲಕಾಡು ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಪೋಷಕರು ಗುರುವಾರ ಬಿ.ಸಿ. ರೋಡಿನಲ್ಲಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ಮುಖ್ಯ ಶಿಕ್ಷಕರ ವಿರುದ್ಧ ಸುಳ್ಳು ಆರೋಪ ಹೊರಿಸಿ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಒತ್ತಡ ತಂದು ಅವರನ್ನು ಬೇರೆ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜಸಲಾಗಿದೆ. ಇದರಿಂದಾಗಿ ಶಿಕ್ಷಕರ ಕೊರತೆ ಎದುರಾಗಿದ್ದು ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ. ಶಾಲಾ ಎಸ್‌ಡಿಎಂಸಿ ಹಾಗೂ ದತ್ತು ಸಮಿತಿ ವಿದ್ಯಾರ್ಥಿಗಳ ಭವಿಷ್ಯದಲ್ಲಿ ಚೆಲ್ಲಾಟವಾಡುತ್ತಿದೆ. ತಕ್ಷಣವೇ ಬೇರೆ ಶಾಲೆಗೆ ನಿಯೋಜಿತರಾಗಿರುವ ಮುಖ್ಯ ಶಿಕ್ಷಕ ರಮಾನಂದ ಅವರನ್ನು ಮತ್ತೆ ದಡ್ಡಲಕಾಡು ಶಾಲೆಯಲ್ಲಿ ಕರ್ತವ್ಯದಲ್ಲಿ ಮುಂದುವರೆಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭ ಪ್ರತಿಭಟನಾ ನಿರತರ ಜೊತೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಮಾತುಕತೆ ನಡೆಸಿ ಶಿಕ್ಷಕ ರಮಾನಂದ ಅವರ ಮನವಿಯ ಮೇರೆಗೆ ಅವರನ್ನು ಬೇರೆ ಶಾಲೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಳಿಸಲಾಗಿದೆ. ಅವರ ಮೇಲಿರುವ ಆರೋಪದ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿದ್ದು ಈಗಾಗಲೇ ಉಪನಿರ್ದೇಶಕರು ಹಾಗೂ ಅಧಿಕಾರಿಗಳ ತಂಡ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜು.೧೮ರಂದು ಮತ್ತೆ ಶಾಲೆಯಲ್ಲಿ ವಿದ್ಯಾರ್ಥಿಗಳ ಹಾಗೂ ಪೋಷಕರ ಸಭೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಆದರೆ ಇದಕ್ಕೆ ಒಪ್ಪದ ವಿದ್ಯಾರ್ಥಿಗಳು ಇವತ್ತೇ ರಮಾನಂದ ಅವರನ್ನು ಶಾಲೆಯಲ್ಲಿ ಕರ್ತವ್ಯದಲ್ಲಿ ಮುಂದುವರಿಸಬೇಕು ಎಂದು ಪಟ್ಟು ಹಿಡಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ಪೋಷಕ ಸುಕುಮಾರ್ ಬಂಟ್ವಾಳ ಮಾತನಾಡಿದರು. ಮುಖ್ಯ ಶಿಕ್ಷಕ ರಮಾನಂದರನ್ನು ನಾಳೆಯೇ ದಡ್ಡಲಕಾಡು ಶಾಲೆಯಲ್ಲಿ ಮತ್ತೆ ಕರ್ತವ್ಯದಲ್ಲಿ ಮುಂದುವರಿಸಬೇಕು ತಪ್ಪಿದ್ದಲ್ಲಿ ಮತ್ತೆ ನಾಳೆಯೂ ಶಿಕ್ಷಣಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಕುಸಿದು ಬಿದ್ದ ಬಿಒ: ಪ್ರತಿಭಟನಾಕಾರರ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಕುಸಿದು ಬಿದ್ದರು. ತಕ್ಷಣ ಇಲಾಖಾಧಿಕಾರಿಗಳು ಅವರನ್ನು ಉಪಚರಿಸಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಸಹ ಶಿಕ್ಷಕಿ ವರ್ಗಾವಣೆಗೆ ಆಗ್ರಹ: ಪ್ರಾಥಮಿಕ ಶಾಲೆ ಸಹಶಿಕ್ಷಕಿಯೊಬ್ಬರಿಂದಲೇ ಶಾಲೆಗೆ ಈ ಸ್ಥಿತಿ ಬಂದಿದೆ. ಅವರನ್ನು ಶಾಲೆಯಿಂದ ವರ್ಗಾವಣೆಗೊಳಿಸುವಂತೆ ವಿದ್ಯಾರ್ಥಿಗಳು ಹಾಗೂ ಪೋಷಕರು ಆಗ್ರಹಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿದ್ದರೂ ಪ್ರೌಢಶಾಲಾ ವಿದ್ಯಾರ್ಥಿಗಳನ್ನು ಇವರು ನಿಯಂತ್ರಿಸುತ್ತಿದ್ದು. ಇವರ ವೈಯಕ್ತಿಕ ದ್ವೇಷದಿಂದ ಶಾಲೆಯ ವಿದ್ಯಾರ್ಥಿಗಳಿಗೆ ಬೀದಿಗಿಳಿಯುವ ಪರಿಸ್ಥಿತಿ ಬಂದಿದೆ ಎಂದು ಆರೋಪಿಸಿದರು.ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಘವೇಂದ್ರ ಬಳ್ಳಾಲ್, ದೈಹಿಕ ಪರೀವೀಕ್ಷಣಾಧಿಕರಿ ವಿಷ್ಣು ನಾರಾಯಣ ಹೆಬ್ಬಾರ್, ಶಿಕ್ಷಣ ಸಂಯೋಜಕಿ ಸುಜಾತ ಕುಮಾರಿ ಹಾಗೂ ಶಿಕ್ಷಣ ಇಲಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.