ಹಾವೇರಿ ಜಿಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಂಯೋಜಕರು ಹಾಗೂ ತಾಂತ್ರಿಕ ಸಹಾಯಕರ ಸ್ಥಳ ಬದಲಾವಣೆ ಆದೇಶವನ್ನು ಇದೀಗ ಹಿಂಪಡೆಯಲಾಗಿದೆ. ಒಟ್ಟು 48 ತಾಂತ್ರಿಕ ಸಿಬ್ಬಂದಿಗೆ ಅವರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕುಗಳಲ್ಲಿಯೇ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.
ನಾರಾಯಣ ಹೆಗಡೆ
ಹಾವೇರಿ: ಹಾವೇರಿ ಜಿಪಂ ವ್ಯಾಪ್ತಿಯಲ್ಲಿ ಉದ್ಯೋಗ ಖಾತರಿ ಯೋಜನೆ ಅಡಿ ಕರ್ತವ್ಯ ನಿರ್ವಹಿಸುತ್ತಿರುವ ತಾಂತ್ರಿಕ ಸಂಯೋಜಕರು ಹಾಗೂ ತಾಂತ್ರಿಕ ಸಹಾಯಕರ ಸ್ಥಳ ಬದಲಾವಣೆ ವಿಚಾರದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ. ಏಪ್ರಿಲ್‌ನಲ್ಲಿ ಸಾರ್ವಜನಿಕ ದೂರುಗಳು ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ಕೈಗೊಂಡಿದ್ದ ಸ್ಥಳ ಬದಲಾವಣೆ ಆದೇಶವನ್ನು ಇದೀಗ ಹಿಂಪಡೆಯಲಾಗಿದೆ. ಒಟ್ಟು 48 ತಾಂತ್ರಿಕ ಸಿಬ್ಬಂದಿಗೆ ಅವರು ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕುಗಳಲ್ಲಿಯೇ ಮುಂದುವರಿಯಲು ಅವಕಾಶ ಕಲ್ಪಿಸಲಾಗಿದೆ.ಒಂದೇ ತಾಲೂಕಿನಲ್ಲಿ ಸುದೀರ್ಘ ಅವಧಿಯಿಂದ ಕಾರ್ಯನಿರ್ವಹಿಸುತ್ತಿದ್ದ ತಾಂತ್ರಿಕ ಸಿಬ್ಬಂದಿ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ, ಆಡಳಿತಾತ್ಮಕ ಹಿತದೃಷ್ಟಿಯಿಂದ ಹಿಂದಿನ ಜಿಪಂ ಸಿಇಒ ಅವರು ವರ್ಗಾಯಿಸಿದ್ದರು. ಏ. 29, 2026ರಂದು 8 ತಾಂತ್ರಿಕ ಸಂಯೋಜಕರು ಹಾಗೂ 40 ತಾಂತ್ರಿಕ ಸಹಾಯಕರು ಸೇರಿದಂತೆ ಒಟ್ಟು 48 ಹೊರಗುತ್ತಿಗೆ ಸಿಬ್ಬಂದಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲೆಯ ವಿವಿಧ ತಾಲೂಕುಗಳಿಗೆ ಸ್ಥಳ ಬದಲಾವಣೆ ಮಾಡಿ ಆದೇಶಿಸಿದ್ದರು. ಈಗ ಬಂದಿರುವ ಹೊಸ ಸಿಇಒ ಆ ಆದೇಶ ಹಿಂಪಡೆಯುವ ಮೂಲಕ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ ಜಾಗದಲ್ಲೇ ಮುಂದುವರಿಯಲು ಅವಕಾಶ ಮಾಡಿಕೊಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ.
ಸ್ಥಳ ಬದಲಾವಣೆಯ ಉದ್ದೇಶ ಸಿಬ್ಬಂದಿ ಕಾರ್ಯನಿರ್ವಹಣೆಯಲ್ಲಿ ಪಾರದರ್ಶಕತೆ ತರಲು ಹಾಗೂ ಒಂದೇ ಸ್ಥಳದಲ್ಲಿ ದೀರ್ಘಕಾಲ ಕರ್ತವ್ಯ ನಿರ್ವಹಿಸುವುದರಿಂದ ಉಂಟಾಗಬಹುದಾದ ಆಡಳಿತಾತ್ಮಕ ಸಮಸ್ಯೆಗಳನ್ನು ನಿವಾರಿಸುವುದಾಗಿತ್ತು.ಜುಲೈಯಿಂದ ಹೊಸ ಯೋಜನೆ: ಈ ಮಧ್ಯೆ ಜು. 1ರಿಂದ ವಿಬಿ ಜಿರಾಮ್ ಜಿ (ವಿಕಸಿತ್ ಭಾರತ್–ಗ್ಯಾರಂಟಿ ಫಾರ್ ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್) ಎಂಬ ಯೋಜನೆ ಜಾರಿಗೆ ಬಂದಿದೆ. ಹೊಸ ಯೋಜನೆಯಡಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿವಿಧ ಕಾಮಗಾರಿಗಳ ಅನುಷ್ಠಾನ, ದಾಖಲೆ ನಿರ್ವಹಣೆ, ತಾಂತ್ರಿಕ ಮೇಲ್ವಿಚಾರಣೆ ಹಾಗೂ ಸಮನ್ವಯಕ್ಕೆ ತಾಂತ್ರಿಕ ಸಿಬ್ಬಂದಿ ಪಾತ್ರ ಮತ್ತಷ್ಟು ಮಹತ್ವ ಪಡೆದಿದೆ.
ಈ ಹಿನ್ನೆಲೆಯಲ್ಲಿ ಈಗಾಗಲೇ ಕಾಮಗಾರಿಗಳ ಬಗ್ಗೆ ಸ್ಥಳೀಯ ಅರಿವು ಹೊಂದಿರುವ ಹಾಗೂ ಆಯಾ ಗ್ರಾಮ ಪಂಚಾಯಿತಿಗಳೊಂದಿಗೆ ಸಮನ್ವಯ ಸಾಧಿಸಿರುವ ಸಿಬ್ಬಂದಿಯನ್ನು ಏಕಾಏಕಿ ಬೇರೆ ತಾಲೂಕುಗಳಿಗೆ ಸ್ಥಳಾಂತರಿಸುವುದರಿಂದ ಪ್ರಗತಿಯಲ್ಲಿರುವ ಕಾಮಗಾರಿಗಳ ಮೇಲ್ವಿಚಾರಣೆಗೆ ತೊಂದರೆಯಾಗುವ ಸಾಧ್ಯತೆಯನ್ನು ತಾಪಂ ಅಧಿಕಾರಿಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದಾರೆ.ನೂತನ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವುದು, ಪ್ರಗತಿಯಲ್ಲಿರುವ ಕಾಮಗಾರಿಗಳ ಮೇಲ್ವಿಚಾರಣೆ ನಡೆಸುವುದು ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿರಂತರ ಸಮನ್ವಯ ಸಾಧಿಸುವ ದೃಷ್ಟಿಯಿಂದ, ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನೇ ಆಯಾ ತಾಲೂಕುಗಳಲ್ಲಿ ಮುಂದುವರಿಸುವಂತೆ ವಿವಿಧ ತಾಪಂಗಳ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಿದ್ದರು. ಇದರ ಜತೆಗೆ ಕೆಲವು ಸಿಬ್ಬಂದಿ ವೈದ್ಯಕೀಯ ಕಾರಣಗಳನ್ನೂ ಪರಿಗಣಿಸುವಂತೆ ಮನವಿ ಮಾಡಲಾಗಿತ್ತು. ಆಡಳಿತಾತ್ಮಕ ಅಗತ್ಯತೆ, ಹೊಸ ಯೋಜನೆಯ ಅನುಷ್ಠಾನ ಹಾಗೂ ಸಿಬ್ಬಂದಿಯ ವೈದ್ಯಕೀಯ ಸಮಸ್ಯೆಗಳನ್ನು ಒಟ್ಟಾಗಿ ಪರಿಗಣಿಸಿದ ಬಳಿಕ ಏಪ್ರಿಲ್‌ನಲ್ಲಿ ಹೊರಡಿಸಿದ್ದ ಸ್ಥಳ ಬದಲಾವಣೆ ಆದೇಶವನ್ನು ಹಿಂಪಡೆಯುವ ನಿರ್ಧಾರ ಕೈಗೊಳ್ಳಲಾಗಿದೆ.
ಆ. 16ರಂದು ಆದೇಶ ಹಿಂಪಡೆತ: ಈ ಎಲ್ಲ ಅಂಶಗಳ ಹಿನ್ನೆಲೆಯಲ್ಲಿ 48 ತಾಂತ್ರಿಕ ಸಿಬ್ಬಂದಿ ಸ್ಥಳ ಬದಲಾವಣೆ ಆದೇಶ ಹಿಂಪಡೆಯಲಾಗಿದೆ. ಇದರಿಂದ ಸ್ಥಳ ಬದಲಾವಣೆಗೆ ಒಳಗಾಗಿದ್ದ 8 ತಾಂತ್ರಿಕ ಸಂಯೋಜಕರು ಮತ್ತು 40 ತಾಂತ್ರಿಕ ಸಹಾಯಕರು ಸೇರಿದಂತೆ 48 ಸಿಬ್ಬಂದಿ ಈ ಹಿಂದೆ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕುಗಳಲ್ಲಿಯೇ ಮುಂದುವರಿಯಲಿದ್ದಾರೆ.ಆಡಳಿತಾತ್ಮಕ ಕಾರಣಗಳು ಮತ್ತು ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಸಿಬ್ಬಂದಿಯನ್ನು ಬೇರೆ ತಾಲೂಕುಗಳಿಗೆ ವರ್ಗಾಯಿಸಲಾಗಿತ್ತು. ಆದರೆ ಕೇವಲ ಮೂರು ತಿಂಗಳ ಅವಧಿಯಲ್ಲೇ ಆ ಆದೇಶ ಹಿಂಪಡೆದು ಹಳೆಯ ಸ್ಥಳಗಳಲ್ಲಿಯೇ ಮುಂದುವರಿಯಲು ಅವಕಾಶ ನೀಡಲಾಗಿದೆ.
ಸಾರ್ವಜನಿಕ ದೂರುಗಳ ಆಧಾರದ ಮೇಲೆ ಕೈಗೊಂಡಿದ್ದ ಸ್ಥಳ ಬದಲಾವಣೆ ಇದೀಗ ರದ್ದಾಗಿರುವುದರಿಂದ ದೂರುಗಳ ವಿಚಾರದಲ್ಲಿ ಕೈಗೊಂಡ ಕ್ರಮದ ಮುಂದಿನ ಪರಿಣಾಮವೇನು ಎಂಬ ಪ್ರಶ್ನೆಯೂ ಎದುರಾಗಿದೆ. ಹೀಗಾಗಿ ಸ್ಥಳ ಬದಲಾವಣೆ ಆದೇಶ ಹಿಂಪಡೆಯುವ ನಿರ್ಧಾರದಿಂದ ನೂತನ ಯೋಜನೆಯ ಅನುಷ್ಠಾನ ಎಷ್ಟು ಪರಿಣಾಮಕಾರಿಯಾಗಲಿದೆ? ಸಾರ್ವಜನಿಕ ದೂರುಗಳಿಗೆ ಪರಿಹಾರ ಹೇಗೆ ದೊರೆಯಲಿದೆ? ಎಂಬುದು ಮುಂದಿನ ದಿನಗಳಲ್ಲಿ ಗಮನ ಸೆಳೆಯುವ ಅಂಶವಾಗಿದೆ.