ಸಾರಾಂಶ
ಗದಗ: ಕಳೆದ ಮೂರು ವರ್ಷಗಳಿಂದ ಹಲವು ಕಾರಣಗಳಿಂದ ಜಿಲ್ಲಾ ವಕ್ಫ್ ಅಧಿಕಾರಿಗಳ ಆಡಳಿತದಲ್ಲಿದ್ದ ಮುಸ್ಲಿಂ ಜಮಾತ್ ಆಡಳಿತದ ಅಂಜುಮನ್ ಏ ಇಸ್ಲಾಮ್ ಕಮಿಟಿಗೆ ಒಳಪಟ್ಟಿದ್ದ ತಾಲೂಕಿನ ಲಕ್ಕುಂಡಿ ಗ್ರಾಮದ ಪ್ರಸಿದ್ಧ ಜಂದೇಶಾವಲಿ ದರ್ಗಾ ಸೇರಿದಂತೆ ಇತರ ಆಸ್ತಿಗಳನ್ನು ಮತ್ತೆ ಅಂಜುಮನ್ ಇಸ್ಲಾಂ ಕಮಿಟಿಗೆ ಹಸ್ತಾಂತರಿಸುವ ಕಾರ್ಯಕ್ರಮ ಜಂದೇಶಾವಲಿ ದರ್ಗಾದಲ್ಲಿ ಬುಧವಾರ ನಡೆಯಿತು.
ನೂತನವಾಗಿ ಆಯ್ಕೆಯಾಗಿರುವ ಕಮಿಟಿಯ ಅಧ್ಯಕ್ಷರಾದ ನಜೀರಅಹ್ಮದ ಕಿರೀಟಗೇರಿ ಅವರಿಗೆ ಜಿಲ್ಲಾ ವಕ್ಫ್ ಅಧಿಕಾರಿ ಸ್ವಾಲಿಯಾ ಗೋಲನ್‌ದಾಜ ಅವರು ಆಡಳಿತ ಅಧಿಕಾರವನ್ನು ಹಸ್ತಾಂತರ ಮಾಡುವ ಆದೇಶ ಪ್ರತಿಯನ್ನು ನೀಡಿದರು.ಈ ವೇಳೆ ಮಾತನಾಡಿದ ನಜೀರಹ್ಮದ ಕಿರೀಟಗೇರಿ ಅವರು, ಹಿಂದೂ ಮುಸ್ಲಿಂ ಭಾವೈಕ್ಯತೆಯೊಂದಿಗೆ ಅಂಜುಮನ್ ಕಮಿಟಿಯು ಜಂದೇಶಾವಲಿ ದರ್ಗಾ ಉರೂಸ್ ಹಾಗೂ ಅಭಿವೃದ್ಧಿ ಕಾರ್ಯವನ್ನು ಮಾಡುತ್ತಾ ಬಂದಿದೆ. ಆದ್ದರಿಂದ ಗ್ರಾಮದ ಹಿಂದೂ ಮುಸ್ಲಿಂ ಬಾಂಧವರು ಕಮಿಟಿಯ ಸದಸ್ಯರು ಸಹಕಾರ ನೀಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಪಂ ಅಧ್ಯಕ್ಷ ಕೆ.ಎಸ್. ಪೂಜಾರ ಮಾತನಾಡಿ, ಹಲವು ಸಮಸ್ಯೆಗಳಿಂದ ಅಂಜುಮನ್ ಕಮಿಟಿಗೆ ಆಡಳಿತ ಅಧಿಕಾರ ನೇಮಕವಾಗಿತ್ತು. ಇದು ತಮ್ಮ ಮುಸ್ಲಿಮರ ಮನಸ್ತಾಪದಿಂದ ಆಗಿದ್ದು, ಇನ್ನೂ ನೂತನ ಕಮಿಟಿಯು ಒಗ್ಗಟ್ಟಾಗಿ ಸಮಾಜ ಮತ್ತು ತಮ್ಮ ಆಸ್ತಿಗಳನ್ನು ಅಭಿವೃದ್ಧಿ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.ತಾಪಂ ಮಾಜಿ ಅಧ್ಯಕ್ಷ ಎಂ.ಎನ್. ಉಮಚಗಿ ಮಾತನಾಡಿ, ಗ್ರಾಮದಲ್ಲಿ ಹಿಂದೂ ಮುಸ್ಲಿಮರು ಭಾವೈಕ್ಯತೆಯಿಂದ ಇದ್ದು, ಆಡಳಿತ ಮಂಡಳಿಯಿಂದ ಮತ್ತೆ ಅಂಜುಮನ್ ಕಮಿಟಿಗೆ ಹಸ್ತಾಂತರವಾಗಿದ್ದು ಸಂತಸ ತಂದಿದೆ. ಒಗ್ಗಟ್ಟಾಗಿ ಮುನ್ನಡೆಸಿಕೊಂಡು ಹೋಗಬೇಕು ಎಂದು ತಿಳಿಸಿದರು.ಗ್ರಾಪಂ ಸದಸ್ಯ ಪೀರಸಾಬ್ ನದಾಫ ಮಾತನಾಡಿ, ಕಮಿಟಿಯಲ್ಲಿ ಇರುವವರು ನಾನು ಎಂಬುದನ್ನು ಬಿಟ್ಟು ನಮ್ಮದು ಎಂಬ ಭಾವನೆಯಲ್ಲಿ ಸಂಸ್ಥೆಯನ್ನು ನಡೆಸಿಕೊಂಡು ಹೋಗಬೇಕು. ತಮ್ಮಲ್ಲಿರುವ ವೈಯಕ್ತಿಕ ದ್ವೇಷಗಳನ್ನು ತೊರೆದು ಧಾರ್ಮಿಕ ಕಾರ್ಯದಲ್ಲಿ ಒಂದಾಗಿ ಸೇವೆ ಮಾಡಬೇಕು ಅಂದಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ಆಗಲು ಸಾಧ್ಯ ಎಂದರು.ಕಮಿಟಿಯ ಉಪಾಧ್ಯಕ್ಷ ದಾದಾಪೀರ ಕೊರ್ಲಹಳ್ಳಿ, ಕಮಿಟಿಯ ಕಾರ್ಯದರ್ಶಿ ವಾಸೀಂ ಮಸೂತಿಮನಿ, ಗ್ರಾಪಂ ಸದಸ್ಯರಾದ ಲಕ್ಷ್ಮಣ ಗುಡಸಲಮನಿ, ಮಹಾಂತೇಶ ಕಮತರ, ಫಕೀರಸಾಬ್ ನದಾಫ, ಮಹ್ಮದರಫೀಕ ಹುಬ್ಬಳ್ಳಿ, ಮರ್ದಾನಸಾಬ್ ದೊಡ್ಡಮನಿ, ಅಲ್ಲಿಸಾಬ್ ನದಾಫ, ರಸೂಲಸಾಬ್ ದೌಲತ್ತರ, ಮಹಮ್ಮದಸಾಬ್ ಹಂದ್ರಾಳ, ಶಫೀಕಅಹ್ಮದ ಡಾಲಾಯತ, ಬಸೀರಸಾಬ್ ಕಿರೀಟಗೇರಿ, ಶಿವಪ್ಪ ಸಜ್ಜನರ, ಮಾಬುಸಾಬ್ ಗುಡಗೇರಿ, ರಮಜಾನಸಾಬ್ ತಹಶೀಲ್ದಾರ, ನೂರಅಹ್ಮದ ಯರಗುಡಿ, ಮಂಜುನಾಥ ಕಟಿಗ್ಗಾರ, ಅಲ್ಲಾಭಕ್ಷಿ ಗದಗ ಹಾಗೂ ಸಮಿತಿಯ ಸದಸ್ಯರು ಇದ್ದರು.