ದೊಡ್ಡಬಳ್ಳಾಪುರಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಗಾಯಿಸಿ: ಅರ್ಕಾವತಿ ನದಿ ಹೋರಾಟ ಸಮಿತಿ ಆಗ್ರಹ

| Published : Jul 16 2024, 12:41 AM IST

ದೊಡ್ಡಬಳ್ಳಾಪುರಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಗಾಯಿಸಿ: ಅರ್ಕಾವತಿ ನದಿ ಹೋರಾಟ ಸಮಿತಿ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಬೆಂಗಳೂರಿನಲ್ಲಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕು ಎಂದು ಅರ್ಕಾವತಿ ನದಿ ಹೋರಾಟ ಸಮಿತಿ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಸಮಿತಿ ಮುಖಂಡ ವಸಂತ್‌ಕುಮಾರ್ ಮಾತನಾಡಿದರು.

ಬೇಡಿಕೆ ಶೀಘ್ರ ಈಡೇರಿಸದಿದ್ದಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹದ ಎಚ್ಚರಿಕೆಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ

ಬೆಂಗಳೂರಿನಲ್ಲಿರುವ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಚೇರಿಯನ್ನು ದೊಡ್ಡಬಳ್ಳಾಪುರಕ್ಕೆ ವರ್ಗಾಯಿಸಬೇಕು ಎಂದು ಅರ್ಕಾವತಿ ನದಿ ಹೋರಾಟ ಸಮಿತಿ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿ ಮುಖಂಡ ವಸಂತ್‌ಕುಮಾರ್, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ವಿವಿಧ ಕೈಗಾರಿಕಾ ಘಟಕಗಳಿಂದ ಪರಿಸರಕ್ಕೆ ಅಪಾರ ಹಾನಿಯಾಗುತ್ತಿದ್ದು, ಪರಿಸರ ಮಾಲಿನ್ಯಕ್ಕೆ ಕಾರಣವಾಗಿರುವ ಕೈಗಾರಿಕೆಗಳಿಗೆ ಕಡಿವಾಣ ಹಾಕಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ತಾಲೂಕಿನಲ್ಲಿ ನೂರಾರು ಕೈಗಾರಿಕೆಗಳಿದ್ದು, ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ, ಕೈಗಾರಿಕೆಗಳಿಂದ ಅರ್ಕಾವತಿ ನದಿ ಪಾತ್ರದ ಕೆರೆಗಳು ಕಲುಷಿತಗೊಂಡಿವೆ. ಇದಕ್ಕೆ ಕಾರಣ ದೊಡ್ಡಬಳ್ಳಾಪುರ ನಗರಸಭೆ ಒಳಚರಂಡಿ ತ್ಯಾಜ್ಯ ನೀರು ಮತ್ತು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳ ವಿಷಕಾರಿ ನೀರು ಈ ಭಾಗದ ಕೆರೆಗಳನ್ನು ಸೇರುತ್ತಿರುವುದಾಗಿದೆ ಎಂದು ದೂರಿದರು.

ಮಾಲಿನ್ಯಕಾರಕ ಕೈಗಾರಿಕೆಗಳಿಗೆ ಕಡಿವಾಣ ಹಾಕಬೇಕಿದ್ದ ಮಾಲಿನ್ಯ ನಿಯಂತ್ರಣ ಮಂಡಳಿ ಬೆಂಗಳೂರಿನ ಪೀಣ್ಯದಲ್ಲಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯನ್ನ ದೊಡ್ಡಬಳ್ಳಾಪುರಕ್ಕೆ ವರ್ಗಾಹಿಸುವಂತೆ ಜಿಲ್ಲಾಧಿಕಾರಿಗಳು ಸೇರಿದಂತೆ ಸಂಬಂಧಪಟ್ಟ ಎಲ್ಲಾ ಇಲಾಖೆಗಳಿಗೆ ಮನವಿ ಮಾಡಲಾಗಿದೆ, ಆದರೆ ಈವರೆಗೂ ಅಧಿಕಾರಿಗಳಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಖಂಡರಾದ ಸತೀಶ್ ಮಾತನಾಡಿ, ಮಜರಾ ಹೊಸಹಳ್ಳಿ ಗ್ರಾಪಂ ವ್ಯಾಪ್ತಿಯ ಚಿಕ್ಕತುಮಕೂರು ಕೆರೆಯ ಬಫರ್ ಝೋನ್ ನಲ್ಲಿ ಪ್ಲಾಸ್ಮಿಕ್ ಪ್ರೈವೇಟ್ ಲಿಮಿಟೆಡ್ ಕಾರ್ಖಾನೆ ಮಣ್ಣು ಸುರಿಯುತ್ತಿದೆ. ಇದಕ್ಕೆ ಸಂಬಂಧ ಪಟ್ಟಂತೆ ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಗ್ರಾಮ ಪಂಚಾಯಿತಿಯಿಂದ ಕಾರ್ಖಾನೆಯಿಂದ ನೋಟಿಸ್ ನೀಡಲಾಗಿದೆ. ಆದರೆ ಕಾರ್ಖಾನೆ ಕೆರೆಯಲ್ಲಿನ ಮಣ್ಣು ತೆಗೆಯದೆ ನಿರ್ಲಕ್ಷ್ಯ ಧೋರಣೆ ತೋರಿದೆ ಎಂದು ದೂರಿದರು.

ಕೈಗಾರಿಕಾ ಪ್ರದೇಶದ ರಸ್ತೆ ಬದಿಗಳಲ್ಲಿ ಬೀದಿ ಬದಿ ವ್ಯಾಪಾರಿಗಳು ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದಾರೆ. ಅಂಗಡಿ ಖಾಲಿ ಮಾಡುವಂತೆ ಅಧಿಕಾರಿಗಳು ಬೆದರಿಕೆ ಹಾಕುತ್ತಿದ್ದಾರೆ. ಕನಿಷ್ಠ ಪೆಟ್ಟಿ ಅಂಗಡಿಗಳನ್ನ ಇಡುವುದಕ್ಕೂ ಅವಕಾಶ ಕೊಡುತ್ತಿಲ್ಲ. ರಸ್ತೆಯ ಬದಿಯಲ್ಲಿ ಪೆಟ್ಟಿ ಅಂಗಡಿ ಇಡಲು ಅವಕಾಶ ಕೊಡಬೇಕು ಎಂದು ಹೇಳಿದರು.

ದೊಡ್ಡತುಮಕೂರು, ಮಜರಾ ಹೊಸಹಳ್ಳಿ ಗ್ರಾಪಂಗಳಿಗೆ ಜಕ್ಕಲಮಡಗು ನೀರು ಸರಬರಾಜು ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ. ಆದರೆ, ಕಳೆದ ನಾಲ್ಕು ದಿನಗಳಿಂದ ಜಕ್ಕಲಮಡಗು ಡ್ಯಾಮ್ ನೀರು ಸರಬರಾಜು ನಿಂತುಹೋಗಿದೆ, ಟ್ಯಾಂಕರ್ ಮೂಲಕ ನೀರು ಸರಬರಾಜು ಸಮಸ್ಯೆಗಳಿಗೆ ಕಾರಣವಾಗಿದ್ದು ಪೈಪ್‌ಲೈನ್ ಮೂಲಕ ಎರಡು ಗ್ರಾಮ ಪಂಚಾಯಿತಿಗಳಿಗೆ ನೀರು ಸರಬರಾಜು ಮಾಡುವಂತೆ ಆಗ್ರಹಿಸಿದರು.

ನಮ್ಮ ನಾಲ್ಕು ಬೇಡಿಕೆಗಳ ಈಡೇರಿಕೆಗಾಗಿ 8 ದಿನಗಳ ಗಡುವು ನೀಡಿದ್ದು, ಬೇಡಿಕೆಗಳು ಈಡೆರದಿದ್ದಲ್ಲಿ ಜುಲೈ 22 ರಂದು ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸುವ ಎಚ್ಚರಿಕೆ ನೀಡಿದರು. ಅರ್ಕಾವತಿ ನದಿ ಹೋರಾಟ ಸಮಿತಿಯ ಮುಖಂಡರಾದ ಕಾಳೇಗೌಡ, ವಿಜಯಕುಮಾರ್, ರಮೇಶ್, ಸುರೇಶ್, ಮುನಿಕೃಷ್ಣಪ್ಪ ಹಾಜರಿದ್ದರು.