ಶಾಲೆ ಪೌಷ್ಟಿಕ ಆಹಾರ ಹೊಣೆ ಖಾಸಗಿ ಏಜೆನ್ಸಿಗಳಿಗೆ ವಹಿಸಿ

| Published : Nov 22 2024, 01:19 AM IST

ಸಾರಾಂಶ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಊಟದ ಜೊತೆಗೆ ನೀಡುವ ಪೂರಕ ಪೌಷ್ಟಿಕ ಆಹಾರದ ಅನುಷ್ಠಾನದ ಹೊಣೆಯನ್ನು ಮುಖ್ಯ ಶಿಕ್ಷಕರಿಂದ ಮುಕ್ತಿಗೊಳಿಸಿ, ಸರ್ಕಾರ ಮತ್ತು ಇಲಾಖೆ ಹಂತದಲ್ಲಿ ಏಜೆನ್ಸಿ ಮೂಲಕ ಸರಬರಾಜು ಮಾಡಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಬಿ.ಎಸ್.ಗಣೇಶ್ ಹೇಳಿದ್ದಾರೆ.

- ಒತ್ತಡ ಕೆಲಸಗಳಿಂದ ಮುಖ್ಯ ಶಿಕ್ಷಕರನ್ನು ಸರ್ಕಾರ ಮುಕ್ತಿಗೊಳಿಸಲಿ: ಬಿ.ಎಸ್.ಗಣೇಶ್ ಒತ್ತಾಯ - - - ಕನ್ನಡಪ್ರಭ ವಾರ್ತೆ ಚನ್ನಗಿರಿ

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಊಟದ ಜೊತೆಗೆ ನೀಡುವ ಪೂರಕ ಪೌಷ್ಟಿಕ ಆಹಾರದ ಅನುಷ್ಠಾನದ ಹೊಣೆಯನ್ನು ಮುಖ್ಯ ಶಿಕ್ಷಕರಿಂದ ಮುಕ್ತಿಗೊಳಿಸಿ, ಸರ್ಕಾರ ಮತ್ತು ಇಲಾಖೆ ಹಂತದಲ್ಲಿ ಏಜೆನ್ಸಿ ಮೂಲಕ ಸರಬರಾಜು ಮಾಡಬೇಕು ಎಂದು ತಾಲೂಕು ಸರ್ಕಾರಿ ನೌಕರರ ಸಂಘ ಅಧ್ಯಕ್ಷ ಬಿ.ಎಸ್.ಗಣೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಶಾಲೆಗಳಲ್ಲಿ ಕ್ಷೀರಭಾಗ್ಯ, ಮಧ್ಯಾಹ್ನದ ಉಪಾಹಾರ ಕಾರ್ಯಕ್ರಮ ಅನುಷ್ಠಾನವಾಗುತ್ತಿದೆ. ಮುಖ್ಯಶಿಕ್ಷಕರು ಬೋಧನಾ ಪ್ರಕ್ರಿಯೆ, ಶಾಲೆ ಆಡಳಿತಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳ ನಿರ್ವಹಣೆ, ಎಲ್ಲ ಪ್ರೋತ್ಸಾಹದಾಯಕ ಯೋಜನೆಗಳ ಅನುಷ್ಠಾನ ಮುಂತಾದ ಕರ್ತವ್ಯಗಳನ್ನು ಲೋಪವಿಲ್ಲದಂತೆ ನಿರ್ವಹಿಸುತ್ತಿದ್ದಾರೆ. ಮಕ್ಕಳ ಸುರಕ್ಷತೆ ಕಾಪಾಡುವ ಜೊತೆಗೆ ಗುಣಮಟ್ಟದ ಆಹಾರ ತಯಾರಿಸಿ ಬಿಸಿಯೂಟ ನೀಡುತ್ತಿದ್ದು, ಒಟ್ಟಾರೆ ಒತ್ತಡದ ಮಧ್ಯೆ ಕೆಲಸ ನಿರ್ವಹಿಸುವಂತಾಗಿದೆ ಎಂದರು.

ಇಷ್ಟೇ ಅಲ್ಲದೇ, ಸೆ.25ರಿಂದ ಅಜೀಂ ಪ್ರೇಮ್‌ಜೀ ಫೌಂಡೇಶನ್ ನೆರವಿನೊಂದಿಗೆ ವಾರದ 6 ದಿನಗಳಲ್ಲಿ ಪೂರಕ ಪೌಷ್ಟಿಕ ಆಹಾರವನ್ನು ನೀಡುವ ನಿಟ್ಟಿನಲ್ಲಿ ಮೊಟ್ಟೆ, ಬಾಳೆಹಣ್ಣು, ಶೇಂಗಾಚಿಕ್ಕಿ ವಿತರಿಸಲು ಇಲಾಖೆ ಆದೇಶ ಮಾಡಿದೆ. ಇಲಾಖೆಯ ಸುತ್ತೋಲೆಯಂತೆ 1 ಮೊಟ್ಟೆಯ ದರ ₹5.20 ನಿಗದಿಪಡಿಸಲಾಗಿದೆ. ರಾಜ್ಯದ ಯಾವ ಮೂಲೆಯಲ್ಲಿಯೂ ಈ ಬೆಲೆಗೆ ಮೊಟ್ಟೆ ಖರೀದಿ ಮಾಡಲು ಸಾಧ್ಯವಿಲ್ಲ. ಪ್ರಸ್ತುತ ಮಾರುಕಟ್ಟೆಯಲ್ಲಿ 1 ಮೊಟ್ಟೆಗೆ ₹6ರಿಂದ ₹7 ಇದೆ. 150 ಮಕ್ಕಳಿರುವ ಒಂದು ಶಾಲೆಯಲ್ಲಿ ಪ್ರತಿದಿನ ಮೊಟ್ಟೆ ವಿತರಿಸಿದರೆ ಇಲಾಖೆಯ ದರಕ್ಕೂ ಮಾರುಕಟ್ಟೆಯ ದರಕ್ಕೂ ಪ್ರತಿ ತಿಂಗಳಿಗೆ ₹6 ರಿಂದ ₹8 ಸಾವಿರ ವ್ಯತ್ಯಾಸದ ಮೊತ್ತವನ್ನು ಮುಖ್ಯ ಶಿಕ್ಷಕರು ಭರಿಸಬೇಕಾಗಿದೆ ಎಂದು ಮುಖ್ಯಶಿಕ್ಷಕರು ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.

ಗ್ರಾಮೀಣ ಭಾಗದಲ್ಲಿ ಶಾಲೆಗಳಿಗೆ ಯಾರೂ ಕೂಡ ಮೊಟ್ಟೆಯನ್ನು ಸರಬರಾಜು ಮಾಡುವುದಿಲ್ಲ. ಪ್ರತಿನಿತ್ಯ ಪೂರಕ ಪೌಷ್ಟಿಕ ಆಹಾರ ವಿತರಿಸಿದ ಮಾಹಿತಿಯನ್ನು ಭೌತಿಕ ಹಾಗೂ ಆನ್‌ಲೈನ್‌ನಲ್ಲಿ ನಮೂದಿಸುವುದು ಹೆಚ್ಚಿನ ಹೊರೆಯಾಗಿದೆ. ಸವಾಲುಗಳ ನಡುವೆಯೂ ಇಲಾಖೆ ಮತ್ತು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ನಡೆಯುವ ಸಣ್ಣಪುಟ್ಟ ವ್ಯತ್ಯಾಸಗಳಿಗೆ ಮುಖ್ಯ ಶಿಕ್ಷಕರನ್ನು ಹೊಣೆಗಾರರನ್ನಾಗಿ ಶಿಕ್ಷಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ತಾಲೂಕು ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಪಿ.ವಿ.ಸ್ವಾಮಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಸಿ.ಗುರುಮೂರ್ತಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಜಯಪ್ರಕಾಶ್, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯ ಪರಿಷತ್ತು ಸದಸ್ಯ ನಿಜಗುಣ ಶಿವಯೋಗಿ ಹಾಜರಿದ್ದರು.

- - -

ಕೋಟ್‌ ಶೈಕ್ಷಣಿಕ ಚಟುವಟಿಕೆಗಳ ಮಧ್ಯೆ ಪ್ರತಿದಿನ ಮಕ್ಕಳು ಬಯಸಿದಂತೆ ಮೊಟ್ಟೆ ಬಾಳೆಹಣ್ಣು, ಶೇಂಗಾ ಚಿಕ್ಕಿ ವಿತರಣೆ ಮಾಡಬೇಕೆಂಬ ಆದೇಶ ಪ್ರತಿದಿನ ಅನುಪಾಲನೆ ಕಷ್ಟವಾಗುತ್ತಿದೆ. ಈ ಆದೇಶವನ್ನು ಪರಿಷ್ಕರಣೆ ಮಾಡಿ ಪ್ರತಿ 2 ದಿನ ಮೊಟ್ಟೆ, 2 ದಿನ ಬಾಳೆಹಣ್ಣು, 2 ದಿನ ಶೇಂಗಾ ಚಿಕ್ಕಿ ವಿತರಿಸಲು ಸರ್ಕಾರ ಆದೇಶ ಮಾಡಬೇಕು

- ಬಿ.ಎಸ್.ಗಣೇಶ್, ಅಧ್ಯಕ್ಷ

- - - -19ಕೆಸಿಎನ್‌ಜಿ1.ಜೆಪಿಜಿ:

ಸುದ್ದಿಗೋಷ್ಠಿಯಲ್ಲಿ ತಾಲೂಕು ನೌಕರರ ಸಂಘ ಅಧ್ಯಕ್ಷ ಬಿ.ಎಸ್.ಗಣೇಶ್ ಮಾತನಾಡಿದರು.