ಜಾನಪದ ಕಲೆ ಮುಂದಿನ ಪೀಳಿಗೆಗೆ ವರ್ಗಾಯಿಸಿ: ಇಮಾಮಸಾಬ್‌ ವಲ್ಲೆಪ್ಪನವರ

| Published : Feb 19 2025, 12:45 AM IST

ಜಾನಪದ ಕಲೆ ಮುಂದಿನ ಪೀಳಿಗೆಗೆ ವರ್ಗಾಯಿಸಿ: ಇಮಾಮಸಾಬ್‌ ವಲ್ಲೆಪ್ಪನವರ
Share this Article
  • FB
  • TW
  • Linkdin
  • Email

ಸಾರಾಂಶ

ಪ್ರಸ್ತುತ ಆಧುನಿಕತೆಯ ಪ್ರಭಾವ ನಮ್ಮನ್ನು ನಾವೇ ಮರೆತುಕೊಳ್ಳುವಷ್ಟರ ಮಟ್ಟಿಗೆ ಹಾಸುಹೊಕ್ಕಾಗಿದೆ. ಹಾಗಾಗಿ ಆಧುನಿಕತೆಯನ್ನು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಬಳಸಿಕೊಳ್ಳಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಇಮಾಮಸಾಬ್‌ ವಲ್ಲೆಪ್ಪನವರ ಹೇಳಿದರು.

ಧಾರವಾಡ: ಜಾನಪದವನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಲು ಮಕ್ಕಳಲ್ಲಿ ಜಾನಪದ ಕಲೆಯನ್ನು ರೂಢಿ ಮಾಡಬೇಕು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಲಾವಿದ ಇಮಾಮಸಾಬ್‌ ವಲ್ಲೆಪ್ಪನವರ ಹೇಳಿದರು.

ಇಲ್ಲಿಯ ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜತೆಗೂಡಿ ರಾ.ಹ. ದೇಶಪಾಂಡೆ ಭವನದಲ್ಲಿ ಆಯೋಜಿಸಿದ್ದ ಜಾನಪದ ಸಂಭ್ರಮ ಹಾಗೂ ಶಹನಾಯಿ ವಾದನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರಸ್ತುತ ಆಧುನಿಕತೆಯ ಪ್ರಭಾವ ನಮ್ಮನ್ನು ನಾವೇ ಮರೆತುಕೊಳ್ಳುವಷ್ಟರ ಮಟ್ಟಿಗೆ ಹಾಸುಹೊಕ್ಕಾಗಿದೆ. ಹಾಗಾಗಿ ಆಧುನಿಕತೆಯನ್ನು ಅವಶ್ಯಕತೆಗೆ ತಕ್ಕಷ್ಟು ಮಾತ್ರ ಬಳಸಿಕೊಳ್ಳಬೇಕು. ತಾಯಿ ಹುಟ್ಟಿನಿಂದ ತಮ್ಮ ಮಕ್ಕಳನ್ನು ಹಾಲುಣಿಸಿ ಬೆಳೆಸುತ್ತಾಳೆ. ಹಾಗೆಯೇ ಜನಪದ ಕಲೆ ಸಹ ಮನೆಯಿಂದಲೇ ಬೆಳೆದಿದ್ದು, ಪ್ರತಿಯೊಬ್ಬರಲ್ಲಿಯೂ ಹುಟ್ಟಿನಿಂದ ಒಂದು ಪ್ರತಿಭೆ ಇರುತ್ತದೆ ಎಂದರು.

ಕಲಾವಿದ ಡಾ. ಪ್ರಕಾಶ ಮಲ್ಲಿಗವಾಡ, ಉನ್ನತ ವ್ಯಾಸಂಗ ಮಾಡಿದವರಿಗೆ, ಪಠ್ಯೇತರ ಅಭ್ಯಸಿಸುವ ವಿದ್ಯಾರ್ಥಿಗಳಿಗೆ ಮಾತ್ರ ಜಾನಪದ ವಿವಿಯಲ್ಲಿ ಸೂಕ್ತ ಸಹಕಾರ ಸಿಗುತ್ತಿದೆ. ನಿಜವಾದ ಕಲಾವಿದರಿಗೆ ಜಾನಪದ ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಗೌರವ ಸಿಗುತ್ತಿಲ್ಲ. ಜಾನಪದ ಕಲಾವಿದರು ಜಾನಪದ ಹಾಡುಗಳ ಮೂಲಕ ತಮ್ಮದೇ ವೈಶಿಷ್ಟ್ಯದಿಂದ ಗುರುತಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಜಾನಪದ ವಿವಿ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಹಿರಿಯ ಜಾನಪದ ತಜ್ಞ ಡಾ. ರಾಮು ಮೂಲಗಿ ಅಧ್ಯಕ್ಷತೆ ವಹಿಸಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ಪಾಶ್ಚಾತ್ಯ ಸಂಸ್ಕೃತಿಗಳು ಹರಿದಾಡುತ್ತಿವೆ. ಆದರೆ, ಪಾಶ್ಚಾತ್ಯ ಸಂಸ್ಕೃತಿಯನ್ನು ಮೆಟ್ಟಿ ನಿಲ್ಲುವಂತಂಹ ಶಕ್ತಿ ನಮ್ಮ ಜಾನಪದ ಕಲೆಗೆ ಮಾತ್ರ ಇದೆ. ಯುವಕರಲ್ಲಿ ಜಾನಪದದ ಕುರಿತು ತಿಳಿವಳಿಕೆ ಮತ್ತು ಅದರ ಪ್ರಾಯೋಗಿಕ ತರಬೇತಿಯ ಅವಶ್ಯಕತೆ ಇದೆ. ಆದರೆ, ಇಂದು ಇಡೀ ಕರ್ನಾಟಕದಲ್ಲಿ ಜಾನಪದ ಕಲೆ ಉಳಿದಿದ್ದು, ಉತ್ತರ ಕರ್ನಾಟಕದಲ್ಲಿ ಮಾತ್ರ. ಈ ಸಂಸ್ಕೃತಿಯ ಉಳಿವಿನ ಕಾರ್ಯದ ಜತೆಯಲ್ಲಿಯೆ ಸಾಮಾಜಿಕ ಕಾರ್ಯವನ್ನೂ ರೂಢಿಸಿಕೊಳ್ಳಬೇಕಾಗಿದೆ ಎಂದರು.

ಜಾನಪದ ವಿವಿ ಸಹಾಯಕ ಕುಲಸಚಿವ ಶಹಜಹಾನ ಮುದಕವಿ, ಎಲ್ಲ ಕಲಾವಿದರಿಗೆ ಗೌರವ ನೀಡುವ ನಿಟ್ಟಿನಲ್ಲಿ ವಿವಿ ಕೆಲಸ ಮಾಡುತ್ತಿದೆ. ಇಷ್ಟಾಗಿಯೂ ನಿಜವಾದ ಜಾನಪದ ಕಲಾವಿದರಿಗೆ ವಿಶ್ವವಿದ್ಯಾಲಯ ಮುಂಬರುವ ದಿನಗಳಲ್ಲಿ ಸೂಕ್ತ ಗೌರವ ನೀಡುವ ಜತೆಗೆ, ಅವರಿಗೆ ಆದರ-ಆತಿಥ್ಯದ ಜತೆಗೆ ಸೂಕ್ತ ಸ್ಥಾನಮಾನ ನೀಡುವುದಾಗಿ ಹೇಳಿದರು. ಕಲಾವಿದರು ವಿವಿಯಲ್ಲಿ ಪ್ರವೇಶ ಪಡೆದು ಜಾನಪದ ಕಲೆಗಳ ಬಗ್ಗೆ ಅಧ್ಯಯನ ಮಾಡಿಕೊಳ್ಳಬೇಕು ಎಂದರು.

ಯುವ ಕಲಾವಿದ ಶ್ರೀಧರ ಭಜಂತ್ರಿ ಅವರಿಗೆ “ಮೋಹರಿ ಸಾಧಕ” ಹಾಗೂ ಇಮಾಮಸಾಬ್ ವಲ್ಲೇಪ್ಪನವರ ಅವರಿಗೆ “ಜಾನಪದ ಜಂಗಮ” ಬಿರುದು ನೀಡಿ ಗೌರವಿಸಲಾಯಿತು. ಸಂಘಟಕ ಸಂತೋಷ ಗಜಾನನ ಮಹಾಲೆ ಪ್ರಾಸ್ತಾವಿಕ ಮಾತನಾಡಿದರು. ಬದರಿನಾಥ ಕೊರ್ಲಹಳ್ಳಿ ಸ್ವಾಗತಗೀತೆ ಪ್ರಸ್ತುತ ಪಡಿಸಿದರು. ಅಪೂರ್ವಾ ಮಹಾಲೆ, ಸ್ನೇಹಾ ಮಹಾಲೆ, ಸುಭಾಶ ಭಜಂತ್ರಿ, ಪ್ರಣವ ಮಹಾಲೆ, ನಾಗಲಿಂಗ ಪಾಟೀಲ ಹಾಗೂ ಸೋಹನ ಮಹಾಲೆ ಇದ್ದರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ನಂತರ ಯುವ ಕಲಾವಿದ ಶ್ರೀಧರ ಭಜಂತ್ರಿ ಅವರಿಂದ ಶಹನಾಯಿ ವಾದನ ಹಾಗೂ ಇಮಾಮಸಾಬ್ ವಲ್ಲೇಪ್ಪನವರ ಸಂಗಡಿಗರಿಂದ ಜಾನಪದ ಗೀತೆಗಳು ನಡೆದವು.