ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳು ವ್ಯಾಪಕವಾಗಿ ವಿಸ್ತರಣೆಯಾಗುತ್ತಿವೆ. ಇದರಿಂದ ಭಾರತ ವಿಶ್ವದಲ್ಲೇ ಮೆಡಿಕಲ್ ಹಬ್ ಆಗಿ ಹೊರಹೊಮ್ಮುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಹುಬ್ಬಳ್ಳಿ: ಆರೋಗ್ಯ ಕ್ಷೇತ್ರದಲ್ಲಿ ಮೂಲಸೌಕರ್ಯಗಳು ವ್ಯಾಪಕವಾಗಿ ವಿಸ್ತರಣೆಯಾಗುತ್ತಿವೆ. ಇದರಿಂದ ಭಾರತ ವಿಶ್ವದಲ್ಲೇ ಮೆಡಿಕಲ್ ಹಬ್ ಆಗಿ ಹೊರಹೊಮ್ಮುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಎಂ.ಎಂ. ಜೋಶಿ ನೇತ್ರ ಸಂಸ್ಥೆ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಎರಡು ದಿನಗಳ ರಾಷ್ಟ್ರೀಯ ನೇತ್ರ ತಜ್ಞರ ಸಮ್ಮೇಳನ "ಐ ಫೆಸ್ಟ್-2025 " ಸಮಾರೋಪದಲ್ಲಿ ಮಾತನಾಡಿದರು.

ಭಾರತ ವಿಶ್ವದಲ್ಲೇ ಉತ್ತಮ ಯುವ ಸಂಪನ್ಮೂಲ ಹೊಂದಿದೆ. ಇತ್ತೀಚಿನ ವರ್ಷಗಳಲ್ಲಿ ದೇಶ ಜಗತ್ತಿನ ಉತ್ಪಾದನಾ ರಾಷ್ಟ್ರವಾಗಿ ಪರಿಗಣನೆಗೆ ಒಳಗಾಗಿದೆ. ವಿಶ್ವದ 4ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದ್ದು, ಅಭಿವೃದ್ಧಿಯಲ್ಲಿ ವೇಗ ಪಡೆಯುತ್ತಿದೆ ಎಂದರು.

ನೇತ್ರ ಸಮಸ್ಯೆ ಹೆಚ್ಚಳ

ಅಖಿಲ ಭಾರತ ನೇತ್ರ ಸಂಸ್ಥೆ ಅಧ್ಯಕ್ಷ ಡಾ. ಪಾರ್ಥ ಬಿಸ್ವಾಸ್ ಮಾತನಾಡಿ, ಮೊಬೈಲ್ ಮತ್ತು ಕಂಪ್ಯೂಟರ್‌ಗಳ ಹೆಚ್ಚೆಚ್ಚು ಬಳಕೆ ಹಾಗೂ ಜೀವಶೈಲಿಯಿಂದ ನೇತ್ರ ಸಮಸ್ಯೆಗಳು ಹೆಚ್ಚುತ್ತಿವೆ. 2050ರ ವೇಳೆಗೆ ಭಾರತದಲ್ಲಿ ಇಬ್ಬರು ಮಕ್ಕಳಲ್ಲಿ ಒಬ್ಬರಿಗೆ ಕಣ್ಣಿನ ತೊಂದರೆ ಮತ್ತು ಕನ್ನಡಕಗಳ ನಂಬರ್‌ಗಳಲ್ಲಿ ಭಾರಿ ವ್ಯತ್ಯಾಸಗಳು ಕಾಣಿಸಿಕೊಳ್ಳಲಿವೆ. ಈ ಕುರಿತಾಗಿ ಸರ್ಕಾರಗಳು, ನೇತ್ರ ಸಂಸ್ಥೆಗಳು ಜಾಗೃತ ವಹಿಸಬೇಕಿದೆ. ಕಠಿಣ ಸವಾಲುಗಳು ಎದುರಾಗುವ ಸಾಧ್ಯತೆಗಳಿವೆ ಎಂದರು.

ಎಂಎಂ ಜೋಶಿ ನೇತ್ರ ಸಂಸ್ಥೆ ನಿರ್ದೇಶಕ ಡಾ. ಶ್ರೀನಿವಾಸ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಡಾ. ಸುನೀಲ ಬಿರಾದಾರ, ಡಾ. ಕೆ.ವಿ. ಸತ್ಯಮೂರ್ತಿ, ಕೆ.ಎಸ್. ಗುರುಪ್ರಸಾದ, ಡಾ. ವಿಜಯ ಸಜ್ಜನರ, ಡಾ. ವಿಜಯಲಕ್ಷ್ಮೀ ಕೋರಿ, ಡಾ. ಗಿರಿರಾಜ ವಿಭೂತಿ ಸೇರಿದಂತೆ ಹಲವರಿದ್ದರು.

ಶನಿವಾರ ಜರುಗಿದ ಮೊದಲ ದಿನದ ಕಾರ್ಯಕ್ರಮದಲ್ಲಿ ಸಂಕೀರ್ಣ ಕಣ್ಣಿನ ಶಸಚಿಕಿತ್ಸೆಗಳ ನೇರ ಪ್ರದರ್ಶನ ನಡೆಯಿತು. ಜತೆಗೆ ತಜ್ಞ ವೈದ್ಯರಿಂದ ಉಪನ್ಯಾಸ, ವಿಚಾರ ಸಂಕಿರಣ ಮತ್ತು ಸಂವಾದಗಳನ್ನೊಳಗೊಂಡ ಸಮ್ಮೇಳನದಲ್ಲಿ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ನೇತ್ರ ಕ್ಷೇತ್ರದಲ್ಲಿನ ವಿದ್ಯಮಾನಗಳ ಬಗ್ಗೆ ಅರ್ಥಪೂರ್ಣ ವಿಷಯಗಳು ಹೊರಹೊಮ್ಮಿದವು. 600ಕ್ಕೂ ಹೆಚ್ಚು ನೇತ್ರಶಾಸಜ್ಞರು ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.ಪ್ರಶಸ್ತಿ ಪ್ರದಾನ

ಸಮಾರೋಪದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು, ಕಣ್ಣಿನ ಚಿಕಿತ್ಸೆ ಮತ್ತು ಚಿಕಿತ್ಸಾ ವಲಯದ ಸಂಶೋಧನೆಯಲ್ಲಿ ಸಾಧನೆಗೈದ ಡಾ. ಅನಿಲ್ ಕುಲಕರ್ಣಿ ಅವರಿಗೆ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಿದರು. ಇದಲ್ಲದೇ ಡಾ. ಸಂಜಯ್ ಕುಮಾರ್ ಮಿಶ್ರಾ ಅವರಿಗೆ ಪದ್ಮಶ್ರೀ ಡಾ. ಎಂ.ಎಂ. ಜೋಶಿ ನಯನಶ್ರೀ ಉತ್ಕೃಷ್ಟ ಸೇವಾ ಪ್ರಶಸ್ತಿ, ಡಾ. ಗಿರೀಶ್ ಶಿವ ರಾವ್ ಅವರಿಗೆ ಪದ್ಮಶ್ರೀ ಡಾ. ಎಂ.ಎಂ. ಜೋಶಿ ಅತ್ಯುತ್ತಮ ಭಾಷಣ ಪ್ರಶಸ್ತಿ ಮತ್ತು ಡಾ. ಪಾರ್ಥ ಬಿಸ್ವಾಸ್ ಅವರಿಗೆ ಪದ್ಮಶ್ರೀ ಡಾ. ಎಂ.ಎಂ. ಅನುಕರಣೀಯ ಸೇವಾ ಪ್ರಶಸ್ತಿ ನೀಡಿ ಪ್ರದಾನ ಮಾಡಿದರು.