ಸಾರಾಂಶ
ಧಾರವಾಡ:
ರೈತರ ಸುಗ್ಗಿ ಸಂಭ್ರಮದ ಸಂಕ್ರಮಣ ಹಬ್ಬವನ್ನು ಜಿಲ್ಲಾದ್ಯಂತ ಸಂಭ್ರಮದಿಂದ ಮಂಗಳವಾರ ಆಚರಿಸಲಾಯಿತು.ಸಂಕ್ರಾಂತಿ ಹಿನ್ನಲೆಯಲ್ಲಿ ಕೆರೆ, ನದಿಗಳಿಗೆ ಪುಣ್ಯಸ್ನಾನಕ್ಕೆ ಹೋಗುವುದು ಪ್ರತೀತಿ. ಅಂತೆಯೇ ಮಂಗಳವಾರ ಕೆಲಗೇರಿ, ಸಾಧನಕೇರಿ ಉದ್ಯಾನವನ, ನೀರಸಾಗರಕ್ಕೆ ಹೋಗಿ ಹಬ್ಬ ಆಚರಿಸಿದರು. ಕಿತ್ತೂರು ಚೆನ್ನಮ್ಮ ಪಾರ್ಕ್, ಬೇಂದ್ರೆ ಉದ್ಯಾನ ಸೇರಿ ಬಹುತೇಕ ಉದ್ಯಾನಗಳು ಮಕ್ಕಳು, ಮಹಿಳೆಯರಿಂದ ತುಂಬಿದ್ದವು. ಅಲ್ಲದೇ ಗ್ರಾಮೀಣ ಭಾಗದಲ್ಲಂತೂ ಬೆಳಗ್ಗೆಯಿಂದ ಹಬ್ಬದ ವಾತವಾರಣ ಇಮ್ಮಡಿಗೊಂಡಿತ್ತು. ಸಿಹಿ ತಿಂಡಿ, ಸಜ್ಜೆ-ಜೋಳದ ರೊಟ್ಟಿ, ಇತರ ಭಕ್ಷ್ಯಗಳೊಂದಿಗೆ ಕುಟುಂಬದ ಸದಸ್ಯರು, ಸಂಬಂಧಿಕರು ಹಾಗೂ ಸ್ನೇಹಿತರ ಜತೆಗೂಡಿ ಭರ್ಜರಿ ಭೋಜನ ಸವಿದರು.
ನಿಗದಿ, ಮನಗುಂಡಿ, ಮನಸೂರು, ದೇವರಹುಬ್ಬಳ್ಳಿ, ದೇವಗಿರಿ, ಲಾಳಗಟ್ಟಿ, ಮುರಕಟ್ಟಿ, ಅಮ್ಮಿನಭಾವಿ, ಉಪ್ಪಿನಬೆಟಗೇರಿ, ಮರೇವಾಡ, ಯಾದವಾಡ, ಕೋಟೂರು, ಲೋಕೂರು ಮುಂತಾದ ಕಡೆಗೆ ಸಂಕ್ರಾಂತಿ ಆಚರಣೆ ವಿಶೇಷವಾಗಿತ್ತು.ಇಲ್ಲಿಯ ಹೊಸ ಎಪಿಎಂಸಿ ಮಟ್ಟಿಪ್ಲಾಟ್‌ನ ಸರಸ್ವತಿ ಜ್ಞಾನ ಮಹಿಳಾ ಮಂಡಳದಿಂದ ಪತ್ರೇಶ್ವರ ಮಠದ ಆವರಣದಲ್ಲಿ ಸಂಕ್ರಾಂತಿ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಮನೆಯಲ್ಲಿ ಸಿದ್ಧಪಡಿಸಿದ ಹಬ್ಬದ ಅಡುಗೆಯೊಂದಿಗೆ ಒಂದಾದ ಮಹಿಳೆಯರು, ಸಾಂಪ್ರದಾಯಿಕವಾಗಿ ಸಡಗರ, ಸಂಭ್ರಮದಿಂದ ಸಂಕ್ರಾಂತಿ ಆಚರಿಸಿದರು. ಜೋಳದ ರೊಟ್ಟಿ, ಸಜ್ಜೆರೊಟ್ಟಿ, ಎಣಗಾಯಿ ಪಲ್ಯ, ಮಡಕಿಕಾಳು, ಅವರೆಕಾಳು, ಬದನೆಕಾಯಿ ಭರ್ತಾ, ಶೇಂಗಾ ಹೊಳಿಗೆ, ಕಡ್ಲಿಚಟ್ನಿ, ಗುರೆಳ್ಳ ಚಟ್ನಿ, ಶೇಂಗಾ ಚಟ್ನಿ, ಮೊಸರು, ಕೆಂಪು ಖಾರದಚಟ್ನಿ, ಜೋಳದ ವಡಿ, ಜುಣಕದ ವಡಿ, ಉಪ್ಪಿನಕಾಯಿ, ಮಾದಲಿ ಹಾಲು, ತುಪ್ಪ, ಅನ್ನ,ಸಾರು ಸೇರಿದಂತೆ ವಿವಿಧ ಭಕ್ಷ್ಯ ಭೋಜನದೊಂದಿಗೆ ಸಂಕ್ರಾಂತಿ ಭೋಗಿ ಊಟ ಸವಿದರು. ಇದಾದ ಬಳಿಕ ಮಹಿಳೆಯರು ವಿವಿಧ ಆಟ ಆಡಿದಲ್ಲದೇ ಸಂಕ್ರಾಂತಿ ಹಾಡುಗಳನ್ನು ಹಾಡಿ ಸಂಭ್ರಮಿಸಿದರು.
ಈ ವೇ:ಎ ಮಂಡಳ ಅಧ್ಯಕ್ಷೆ ನೇಹಾ ಬುದ್ನಿ, ದ್ರಾಕ್ಷಾಯಣಿ ಬುದ್ನಿ, ಸುನಂದಾ ಹಿರೇಮಠ, ವಿದ್ಯಾ, ವಿಜಯಲಕ್ಷ್ಮೀ, ಸಹನಾ, ಗಾಯತ್ರಿ, ಸುಮಾ, ಸರೋಜಾ, ಕಾದಂಬರಿ ಇದ್ದರು.