ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಕನ್ನಡದ ಪುಸ್ತಕ ಸಂಸ್ಕೃತಕ್ಕೆ ಅನುವಾದಗೊಳ್ಳುತ್ತಿರುವುದು ಸಂಸ್ಕೃತದ ಶುಭೋದಯವಾಗಿದೆ.ಎಲ್ಲೆಡೆ ಸಂಸ್ಕೃತದ ಗ್ರಂಥಗಳು ಇತರ ಭಾಷೆಗಳಿಗೆ ಅನುವಾದ ಗೊಳ್ಳುತ್ತಿದ್ದರೆ, ಇಲ್ಲಿ ಕನ್ನಡದಿಂಧ ಸಂಸ್ಕೃತಕ್ಕೆ ಅನುವಾದಗೊಳ್ಳುತ್ತಿರುವುದು ಹರ್ಷವನ್ನು ಹೊಸ ಭರವಸೆಯನ್ನೂ ಮೂಡಿಸುತ್ತಿದೆ. ಈ ಗ್ರಂಥವು ಭಾರತದೆಲ್ಲೆಡೆ ಪ್ರಸಿದ್ದಿಯನ್ನು ಪಡೆಯಲಿ. ಉಡುಪಿಯ ಸಂಸ್ಕೃತ ಕಾಲೇಜಿನ ಅನೇಕ ಸಾಧನೆಗಳಲ್ಲಿ ಇದೂ ಒಂದಾಗಿ ಸೇರುತ್ತಿರುವುದು ಸಂತಸ ತಂದಿದೆ. ಈ ಸತ್ಕಾರ್ಯದಲ್ಲಿ ಸಹಕರಿಸಿದ ಎಲ್ಲರಿಗೂ ಶ್ರೀಕೃಷ್ಣಮಧ್ವರ ಅನುಗ್ರಹವಿರಲಿ ಎಂದು ಪರ್ಯಾಯ ಪೀಠಾಧೀಶರಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಆಶಿರ್ವದಿಸಿದರು.
ಅವರು ಶ್ರೀಮನ್ಮಧ್ವಸಿದ್ಧಾಂತ ಪ್ರಬೋಧಕ ಸಂಸ್ಕೃತ ಸಂಶೋಧನ ಕೇಂದ್ರದಿಂದ ಪ್ರಕಾಶಿತವಾದ ಜ್ಯೋತಿಷಸೋಪಾನಮ್ ಎಂಬ ಸಂಸ್ಕೃತ ಆವೃತ್ತಿಯ ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು.ಈ ಸಂದರ್ಭದಲ್ಲಿ ಪರ್ಯಾಯ ಮಠದ ಕಿರಿಯ ಶ್ರೀಪಾದರಾದ ಶ್ರೀ ಸುಶ್ರೀಂದ್ರತೀರ್ಥಶ್ರೀಪಾದರು ಉಪಸ್ಥಿತರಿದ್ದರು.
ಪ್ರೊ. ಶಿವಪ್ರಸಾದ ತಂತ್ರಿ ಅವರು ಪುಸ್ತಕದ ಪರಿಚಯವನ್ನು ನಡೆಸಿಕೊಟ್ಟರು. ಗ್ರಂಥ ಪ್ರಕಾಶನಕ್ಕೆ ಧನ ಸಹಾಯ ಮಾಡಿದ ಪ್ರಸಿದ್ಧ ಉದ್ಯಮಿ ಅತುಲ್ ಕುಡ್ವ ಇವರು ಸಾಂದರ್ಭಿಕ ಮಾತನ್ನು ಆಡಿದರು.ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಎಸ್.ಎಮ್.ಎಸ್.ಪಿ.ಸಭೆಯ ಕಾರ್ಯದರ್ಶಗಳಾದ ವಿದ್ವಾನ್ ಗೋಪಾಲಕೃಷ್ಣ ಜೋಯೀಸ, ಕೋಶಾಧಿಕಾರಿಗಳಾದ ಚಂದ್ರಶೇಖರ ಆಚಾರ್ಯ, ಸಂಸ್ಕೃತ ಕಾಲೇಜಿನ ಪ್ರಾಂಶುಪಾಲರಾದ ಪ್ರೋ.ಸತ್ಯನಾರಾಯಣ ಆಚಾರ್ಯ, ಖ್ಯಾತ ಜ್ಯೋತಿಷಿಗಳಾದ ವಿದ್ವಾನ್ ಮುರಳೀಧರ ತಂತ್ರಿ ಉಪಸ್ಥಿತರಿದ್ದರು
ಸಂಸ್ಕೃತ ಕಾಲೇಜಿನ ವಿದ್ಯಾರ್ಥಿಗಳಾದ ಗಜಾನನ ಭಟ್ಟ, ಆದಿತ್ಯ ಎ.ಎಸ್. ಮತ್ತು ವಿನಯ ಹೆಗಡೆ ವೇದಘೋಷಗೈದರು. ಪ್ರಾಂಶುಪಾಲರು ಶ್ರೀಗಳವರನ್ನು ಮತ್ತು ಅತಿಥಿಗಳನ್ನು ಸ್ವಾಗತಿಸಿದರು. ಕಾಲೇಜಿನ ಅಧ್ಯಾಪಕರಾದ ವಿದ್ವಾನ್ ಶ್ರೀನಿವಾಸ ತಂತ್ರಿ ಧನ್ಯವಾದಗಳನ್ನು ಸಮರ್ಪಿಸಿದರು. ಡಾ. ರಾಧಾಕೃಷ್ಣ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.