ಸ್ವತಂತ್ರ ಕೃತಿ ಜತೆಗೆ ಅನುವಾದವೂ ಬೇಕು: ಡಾ.ಚಿನ್ನಪ್ಪ ಗೌಡ

| Published : Mar 15 2025, 01:02 AM IST

ಸಾರಾಂಶ

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ ಹಿರಿಯ ಸಾಹಿತಿಗಳ ಸಂಪರ್ಕ ಅಭಿಯಾನದಡಿ ಗುರುವಾರ ಸ್ವಗೃಹದಲ್ಲಿ ಗೌರವ ಸ್ವೀಕರಿಸಿದ ವಿಶ್ರಾಂತ ಕುಲಪತಿ, ಹಿರಿಯ ಸಾಹಿತಿ ಡಾ.ಕೆ. ಚಿನ್ನಪ್ಪ ಗೌಡ, ಸಾಹಿತ್ಯ ಕ್ಷೇತ್ರದಲ್ಲಿ ಅನುವಾದ ಕೃತಿಗಳೂ ಸ್ವತಂತ್ರ ಕೃತಿಯಷ್ಟೇ ಮಹತ್ವ ಪಡೆದಿವೆ ಎಂದರು.

ಕನ್ನಡಪ್ರಭ ವಾರ್ತೆ ಮಂಗಳೂರು

ದೇಶದ ಬಹು ಭಾಷೆಗಳಲ್ಲಿ ನಮ್ಮ ಸಂಸ್ಕೃತಿ ಅಡಕವಾಗಿದ್ದು, ಭಾರತೀಯ ಸಾಹಿತ್ಯದ ವ್ಯಾಪ್ತಿ, ವೈವಿಧ್ಯತೆ ಅಗಾಧವಾಗಿದೆ. ಸ್ವತಂತ್ರ ಕೃತಿ ರಚನೆಯ ಜತೆಗೆ ಇತರ ಭಾಷೆಯ ಪ್ರಮುಖ ಕೃತಿಗಳನ್ನು ಅನುವಾದ ಮಾಡುವ ಮೂಲಕ ನಮ್ಮ ಸಾಹಿತ್ಯಿಕ ಪರಂಪರೆಯನ್ನು ಎಲ್ಲೆಡೆ ಪಸರಿಸಲು ಸಾಹಿತಿಗಳು ಪ್ರಯತ್ನಿಸಬೇಕು ಎಂದು ವಿಶ್ರಾಂತ ಕುಲಪತಿ, ಹಿರಿಯ ಸಾಹಿತಿ ಡಾ.ಕೆ. ಚಿನ್ನಪ್ಪ ಗೌಡ ಹೇಳಿದ್ದಾರೆ.

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಯೋಜಿಸಿದ ಹಿರಿಯ ಸಾಹಿತಿಗಳ ಸಂಪರ್ಕ ಅಭಿಯಾನದಡಿ ಗುರುವಾರ ಸ್ವಗೃಹದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಸಾಹಿತ್ಯ ಕ್ಷೇತ್ರದಲ್ಲಿ ಅನುವಾದ ಕೃತಿಗಳೂ ಸ್ವತಂತ್ರ ಕೃತಿಯಷ್ಟೇ ಮಹತ್ವ ಪಡೆದಿವೆ ಎಂದರು.

ಸಾಹಿತ್ಯ ಸಮ್ಮೇಳನಗಳಲ್ಲಿ ಹಿಂದಿನ ಸಾಹಿತ್ಯ, ಸಮಕಾಲೀನ ಸಾಹಿತ್ಯದ ಬಗ್ಗೆ ಚಿಂತನ ಮಂಥನ ನಡೆಯಬೇಕು. ಆದರೆ ಇತ್ತೀಚಿನ ಸಾಹಿತ್ಯ ಸಮ್ಮೇಳನಗಳಲ್ಲಿ ರಾಜಕೀಯವೂ ಸೇರಿದಂತೆ ಇತರ ವಿಷಯಗಳ ಬಗ್ಗೆಯೇ ಹೆಚ್ಚು ಚರ್ಚೆ ನಡೆಯುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಸಾಹಿತ್ಯ ಸಮ್ಮೇಳನ ಸಾಹಿತ್ಯ ಕ್ಷೇತ್ರದ ಬೆಳವಣಿಗೆಗೆ ಪೂರಕವಾಗಿರಬೇಕು. ಶಿಕ್ಷಣ ವ್ಯವಸ್ಥೆ ಸಾಹಿತ್ಯಕ್ಕೆ ಹೆಚ್ಚಿನ ಶಕ್ತಿ ನೀಡಬಲ್ಲದು. ವಿಶ್ವ ವಿದ್ಯಾನಿಲಯಗಳಲ್ಲಿ ಸಾಹಿತ್ಯದ ಚಟುವಟಿಕೆ ನಿರಂತರವಾಗಿ ನಡೆಯಬೇಕು ಎಂದು ಡಾ.ಕೆ.ಚಿನ್ನಪ್ಪ ಗೌಡ ಅಭಿಪ್ರಾಯಪಟ್ಟರು.

ಅಭಾಸಾಪ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಪಿ.ಬಿ. ಹರೀಶ್ ರೈ, ಸಮಿತಿ ಸದಸ್ಯ ಡಾ.ಸುರೇಶ್ ನೆಗಳಗುಳಿ, ಸಾಹಿತ್ಯ ಕೂಟದ ಮುಖ್ಯಸ್ಥೆ ಗೀತಾ ಲಕ್ಷ್ಮೀಶ್, ಉಳ್ಳಾಲ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವಸಂತ ಕೊಣಾಜೆ ಇದ್ದರು. ಅಭಾಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಮಂಗಲಾ ರತ್ನಾಕರ್ ಸ್ವಾಗತಿಸಿದರು. ಖಜಾಂಚಿ ಭಾಸ್ಕರ ರೈ ಕಟ್ಟ ವಂದಿಸಿದರು.