ಸಾರಾಂಶ
ಕಾರವಾರ: ಯಾವುದೇ ಸಂಘಟನೆಯಿರಲಿ, ಅದು ಸದಾ ತನ್ನ ಉದ್ದೇಶಿತ ಸಮಾಜಮುಖಿ ಚಟುವಟಿಕೆಗಳ ಜತೆಗೆ ಕ್ರಿಯಾಶೀಲ, ಪಾರದರ್ಶಕತೆಯಿಂದಿರಬೇಕು. ಅದೇ ಸಂಘಟನೆಯ ನಿಜವಾದ ಯಶಸ್ಸು. ಜಿಲ್ಲಾ ಕಸಾಪ ಕಾರ್ಯ ನಿರ್ವಹಿಸುತ್ತಿದೆ ಎಂಬ ಅಭಿಮಾನ ನಮಗಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್. ವಾಸರೆ ನುಡಿದರು.
ಅವರು ಭಾನುವಾರ ನಗರದ ಹೊಟೇಲ್ ಈಡನ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಕಸಾಪ ಆಜೀವ ಸದಸ್ಯರ ಸಭೆ ಹಾಗೂ ವಾರ್ಷಿಕ ಲೆಕ್ಕಪತ್ರ ಮಂಡನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಸಾಪಗೆ ರಾಜ್ಯ ಸಮಿತಿಯಿಂದ ಹಾಗೂ ಇತರೆಡೆಯಿಂದ ಬಂದ ನೆರವು ಹಾಗೂ ಖರ್ಚುಗಳ ಲೆಕ್ಕಪತ್ರದ ವ್ಯವಹಾರವನ್ನು ಅತ್ಯಂತ ಶಿಸ್ತುಬದ್ಧವಾಗಿ ಇಡಲಾಗಿದೆ. ಅದನ್ನು ಆಡಿಟ್ ಮಾಡಿಸಿ ರಾಜ್ಯ ಸಮಿತಿಗೆ ಸಲ್ಲಿಸುವ ಜೊತೆಗೆ ಪ್ರತಿ ವರ್ಷ ಆಜೀವ ಸದಸ್ಯರ ಸಭೆಯನ್ನು ಕರೆದು ನಮ್ಮ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿದ್ದೇವೆ. ಸಾಹಿತ್ಯ ಪರಿಷತ್ತಿನ ಲೆಕ್ಕಪತ್ರ ವ್ಯವಹಾರ ತೆರೆದ ಪುಸ್ತಕದ ಹಾಗೆ ಮುಕ್ತವಾಗಿದೆ ಎಂದರು.ಕಸಾಪ ಜಿಲ್ಲಾ ಗೌರವ ಕಾರ್ಯದರ್ಶಿ ಪಿ.ಆರ್. ನಾಯ್ಕ ಲೆಕ್ಕಪತ್ರವನ್ನು ಮಂಡಿಸಿ, 2024-2025ನೇ ಸಾಲಿನಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನ, ನಿರ್ವಹಣಾ ಅನುದಾನ ಸೇರಿದಂತೆ ರಾಜ್ಯ ಸಾಹಿತ್ಯ ಪರಿಷತ್ತಿನಿಂದ 9,98,547 ರು. ಬಂದಿದ್ದು ಇದನ್ನು ನಿಯಮಾನುಸಾರ 8,92,2091 ರು. ಖರ್ಚುಮಾಡಲಾಗಿದೆ. 97,256 ರು. ಶಿಲ್ಕು ಉಳಿದಿರುತ್ತದೆ. ಈಗಾಗಲೇ ಇದರ ಆಡಿಟ್ ಮಾಡಿಸಲಾಗಿದ್ದು, ಕೇಂದ್ರ ಸಮಿತಿಗೆ ಸಲ್ಲಿಸಲಾಗುತ್ತದೆ ಎಂದು ಹೇಳಿ ದಾನಿಗಳನ್ನು ಸ್ಮರಿಸಿದರು.
ಜಿಲ್ಲಾ ಗೌರವ ಕಾರ್ಯದರ್ಶಿ ಜಾರ್ಜ್ ಫರ್ನಾಂಡೀಸ್, ಜಿಲ್ಲಾ ಕಸಾಪ ರಾಜ್ಯಕ್ಕೆ ಮಾದರಿ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದಕ್ಕೆ ರಾಜ್ಯಾಧ್ಯಕ್ಷರು ಪ್ರಶಂಸನಾ ಪತ್ರ ನೀಡಿರುವುದೇ ನಿದರ್ಶನವಾಗಿದೆ. ಅನುದಾನ ಇಲ್ಲದಿದ್ದರೂ ಸಮ್ಮೇಳನ ನಡೆಸುತ್ತಿರುವುದು ನಮ್ಮ ಹೆಮ್ಮೆಯಾಗಿದೆ ಎಂದರು.ಕಾರವಾರ ತಾಲೂಕು ಕಸಾಪ ಅಧ್ಯಕ್ಷ ರಾಮಾ ನಾಯ್ಕ ಸ್ವಾಗತಿಸಿದರು. ಆಜೀವ ಸದಸ್ಯರ ಪರವಾಗಿ ಅಂಕೋಲೆಯ ಮೋಹನ ಹಬ್ಬು, ಡಾ. ಮಹೇಶ ಗೋಳಿಕಟ್ಟೆ, ಟಿ.ಬಿ. ಹರಿಕಾಂತ, ಜಿ.ಡಿ. ಮನೋಜೆ, ಮಾಧವ ನಾಯಕ, ಯಮುನಾ ಗಾಂವ್ಕರ್ ಮತ್ತಿತರರು ಮಾತನಾಡಿದರು.
ಮುರ್ತುಜಾ ಹುಸೇನ್ ವಂದಿಸಿದರು. ಪಿ.ಎಂ. ಮುಕ್ರಿ ವಾರ್ಷಿಕ ವರದಿ ವಾಚಿಸಿದರು. ಜಯಶೀಲ ಆಗೇರ ಪರಿಚಯಿಸಿದರು. ಸಿದ್ದಪ್ಪ ಬಿರಾದಾರ ನಿರೂಪಿಸಿದರು. ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕರಿಗೆ ಕಸಾಪ ಸನ್ಮಾನ ಪ್ರಸಕ್ತ ಸಾಲಿನಲ್ಲಿ ಉತ್ತಮ ಶಿಕ್ಷಕ ರಾಜ್ಯ ಪ್ರಶಸ್ತಿಗೆ ಭಾಜನರಾದ ಪಿ.ಆರ್. ನಾಯ್ಕ ಹೊಳೆಗದ್ದೆ, ಶ್ರೀಧರ ಶೇಟ್ ಶಿರಾಲಿ ಹಾಗೂ ಗೋಪಾಲ ನಾಯ್ಕ ಸಿದ್ದಾಪುರ ಅವರನ್ನು ಜಿಲ್ಲಾ ಕಸಾಪದಿಂದ ಸನ್ಮಾನಿಸಿ ಗೌರವಿಸಲಾಯಿತು.