ಸಾರಾಂಶ
ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಕೇಂದ್ರಸರ್ಕಾರ ರಾಷ್ಟ್ರೀಯ ಯೋಜನೆಯಡಿ ಹಲವಾರು ಯೋಜನೆಗಳನ್ನು ಜಾರಿಗೆ ತಂದು ಲಕ್ಷಾಂತರ ಫಲಾನುಭವಿಗಳಿಗೆ ಸೌಕರ್ಯ ನೀಡುತ್ತಿದೆ. ವಿಶೇಷವಾಗಿ ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ ಕಾರ್ಯಕ್ರಮದ ಮೂಲಕ ಗರ್ಭಿಣಿ ಮತ್ತು ಬಾಣಂತಿಯರ ಕಲ್ಯಾಣಕ್ಕಾಗಿ ವಿನೂತನ ಯೋಜನೆ ಜಾರಿಗೆ ತಂದು ಇದರಿಂದ ಗರ್ಭಿಣಿಯರ ಆರೋಗ್ಯ ಸುಧಾರಣೆ ಜತೆಗೆ ಶಿಶುಗಳ ಸಾವನ್ನೂ ನಿಯಂತ್ರಿಸಬಹುದಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಯೋಜನೆ ಜಾರಿಗೆ ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ಸಿವಿಲ್ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ಶಮೀರ್ ಪಿ.ನಂದ್ಯಾಲ ತಿಳಿಸಿದರು.ಗುರುವಾರ ತಾಪಂ ಕಾರ್ಯಾಲಯದಲ್ಲಿ ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ, ಶಿಶುಅಭಿವೃದ್ಧಿ ಯೋಜನೆಯಡಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಈ ಯೋಜನೆಯಿಂದ ಗರ್ಭಿಣಿ ಮಹಿಳೆಯರು ಮತ್ತು ಬಾಣಂತಿಯರು ಯಾವುದೇ ರೀತಿಯ ಆರೋಗ್ಯದ ಸಮಸ್ಯೆಗಳಿಲ್ಲದೆ ನೆಮ್ಮದಿಯಿಂದ ಇರಬಹುದು ಎಂದು ಹೇಳಿದರು.
ಜೆಎಂಎಫ್‌ಸಿ ನ್ಯಾ.ಎಚ್.ಆರ್.ಹೇಮಾ ಮಾತನಾಡಿ, ಇತ್ತೀಚಿನ ವರ್ಷಗಳಲ್ಲಿ ಸರ್ಕಾರ ಮತ್ತು ಆರೋಗ್ಯ ಇಲಾಖೆಯ ಮುಂಜಾಗ್ರತಾ ಕ್ರಮದಿಂದ ಗರ್ಭಿಣಿ ಮಹಿಳೆಯರು ಆರೋಗ್ಯ ಸುಧಾರಣೆಯ ಜೊತೆಗೆ ಶಿಶುಗಳ ಸಂರಕ್ಷಣೆಯಾಗುತ್ತಿದೆ. ಸರ್ಕಾರದ ಈ ಎಲ್ಲಾ ಯೋಜನೆಗಳು ಸಫಲವಾಗಬೇಕಾದರೆ ಅನುಷ್ಠಾನದಲ್ಲಿ ಹೆಚ್ಚು ಜಾಗೃತಿ ಅಗತ್ಯವೆಂದರು.ಅಪರ ಸಿವಿಲ್ ನ್ಯಾಯಾಧೀಶ ಬಿ.ಆರ್.ಪುನೀತ್ ಮಾತನಾಡಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತನ್ನ ಅನೇಕ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವಲ್ಲಿ ಹೆಚ್ಚು ಪಾರದರ್ಶಕತೆಯನ್ನು ಅನುಸರಿಸಬೇಕಿದೆ. ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಗರ್ಭಿಣಿ ಮಹಿಳೆ ಮತ್ತು ಬಾಣಂತಿಯರ ಆರೋಗ್ಯದ ಬಗ್ಗೆ ಹೆಚ್ಚು ಗಮನನೀಡಬೇಕಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಸಿಡಿಪಿಒ ಎಸ್.ರಾಜಾನಾಯ್ಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಗರ್ಭಿಣಿ ಮತ್ತು ಬಾಣಂತಿಯರ ಆರೋಗ್ಯ ಸುಧಾರಣೆಯ ಬಗ್ಗೆ ಹಲವಾರು ರೂಪುರೇಷೆಗಳನ್ನು ರೂಪಿಸಿ ಇಲಾಖೆಯ ಮಾರ್ಗದರ್ಶನದಡಿ ಕಾಲ, ಕಾಲಕ್ಕೆ ತಪಾಸಣೆ ಮತ್ತು ಪೌಷ್ಠಿಕಾಂಶದ ಆಹಾರವನ್ನು ನೀಡಲಾಗುತ್ತಿದೆ.ತಾಲೂಕಿನಾದ್ಯಂತ ಒಟ್ಟು 503 ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ 2120 ಗರ್ಭಿಣಿ ಮಹಿಳೆಯರು, 1569 ಬಾಣಂತಿಯರಿಗೆ ಈ ಯೋಜನೆಯ ಸೌಲಭ್ಯ ದೊರೆಯುತ್ತಿದೆ ಎಂದರು. ಇಲಾಖೆಯ ಎಲ್ಲಾ ಹಂತದ ಅಧಿಕಾರಿಗಳು, ಸಿಬ್ಬಂದಿ ವರ್ಗ ಯೋಜನೆ ಅನುಷ್ಠಾನದಲ್ಲಿ ಲೋಪವಾಗದಂತೆ ಜಾಗೃತೆ ವಹಿಸುತ್ತಿದ್ದಾರೆಂದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಎಚ್.ಶಶಿಧರ, ವಕೀಲರ ಸಂಘದ ತಾಲೂಕು ಅಧ್ಯಕ್ಷ ಕೆ.ಎಂ.ನಾಗರಾಜು, ಉಪಾಧ್ಯಕ್ಷ ಪಾಲಯ್ಯ, ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ರುದ್ರಯ್ಯ, ಮೆಡಿಕಲ್ ಅಸೋಷಿಯೇಷನ್ ಕಾರ್ಯದರ್ಶಿ ಡಾ.ಅರುಣ್‌ಕುಮಾರ್ ಮುಂತಾದವರು ಭಾಗವಹಿಸಿದ್ದರು.