ಗದಗ: ಮುಂಬರುವ ಮುಂಗಾರು ಹಂಗಾಮಿಗೆ ಜಿಲ್ಲೆಯ ರೈತರಿಗೆ ಯಾವುದೇ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಹಾಗೇ ರಸಗೊಬ್ಬರ ಪೂರೈಕೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್‌ ತಿಳಿಸಿದರು.ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜರುಗಿದ 2026- 27ನೇ ಸಾಲಿನ ಜಿಲ್ಲಾ ಮಟ್ಟದ ಕೃಷಿ ಪರಿಕರಗಳ ಉಸ್ತುವಾರಿ ಸಮಿತಿ ಮತ್ತು ಜಾಗೃತಿ ಸಮಿತಿ ಸಭೆ ಹಾಗೂ ಮುಂಗಾರು ಹಂಗಾಮಿನ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ರೈತರಿಗೆ ರಸಗೊಬ್ಬರ ವಿತರಣೆಯಲ್ಲಿ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು. ಸಹಕಾರಿ ಸಂಘಗಳ ಮೂಲಕ ರಸಗೊಬ್ಬರ ಮಾರಾಟವನ್ನು ಚುರುಕುಗೊಳಿಸಬೇಕು. ರಸಗೊಬ್ಬರ ಪೂರೈಕೆಯ ಸರಪಳಿಯಲ್ಲಿ ಯಾವುದೇ ವಿಳಂಬವಾಗಬಾರದು.

ಕಂಪನಿಗಳಿಂದ ರಸಗೊಬ್ಬರ ಬಿಡುಗಡೆಯಾದ ತಕ್ಷಣ, ಅದು ಪಾಯಿಂಟ್ ಆಫ್ ಸೇಲ್ ಯಂತ್ರಗಳಲ್ಲಿ ಸರಿಯಾಗಿ ದಾಖಲಾಗುತ್ತಿದೆಯೇ ಎಂಬುದನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡಬೇಕು. ತುರ್ತು ಸಂದರ್ಭಗಳಿಗಾಗಿ ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದ ರಸಗೊಬ್ಬರವನ್ನು ಬಫರ್ ಸ್ಟಾಕ್ ಆಗಿ ಕಾಯ್ದಿರಿಸಲು ಮತ್ತು ಅದರ ಸಕಾಲಿಕ ವಿತರಣೆಗೆ ಕ್ರಮ ಕೈಗೊಳ್ಳಬೇಕು. ರೈತರಿಗೆ ಸಕಾಲದಲ್ಲಿ ಗೊಬ್ಬರ ಸಿಗುವಂತೆ ವ್ಯವಸ್ಥೆ ಮಾಡಬೇಕೆಂದರು.ಜಿಲ್ಲೆಗೆ ಸರಬರಾಜಾಗುವ ರಸಗೊಬ್ಬರವನ್ನು ಕಂಪನಿಗಳು ಡೀಲರ್‌ಗಳಿಗೆ ಹಂಚಿಕೆ ಮಾಡುವಾಗ ಪಾರದರ್ಶಕತೆ ಕಾಯ್ದುಕೊಳ್ಳಬೇಕು. ಯಾವ ಡೀಲರ್‌ಗೆ ಎಷ್ಟು ಪ್ರಮಾಣದ ಗೊಬ್ಬರ ಹಂಚಿಕೆಯಾಗಿದೆ ಎಂಬ ಮಾಹಿತಿ ಕೃಷಿ ಇಲಾಖೆಗೆ ಮುಂಚಿತವಾಗಿ ಸಲ್ಲಿಸಬೇಕು. ಕೆಲವು ಡೀಲರ್‌ಗಳು ಅಥವಾ ಮಧ್ಯವರ್ತಿಗಳು ರಸಗೊಬ್ಬರವನ್ನು ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸುವುದನ್ನು ತಡೆಗಟ್ಟಲು ಕೃಷಿ ಇಲಾಖೆ ಅಧಿಕಾರಿಗಳು ನಿರಂತರ ನಿಗಾ ವಹಿಸಬೇಕು ಎಂದು ಸೂಚಿಸಿದರು.

ಕೇವಲ ಯುರಿಯಾ ಅಥವಾ ಡಿಎಪಿ ಗೊಬ್ಬರಗಳ ಮೇಲೆ ಅವಲಂಬಿತವಾಗದೆ, ಮಣ್ಣಿನ ಗುಣಮಟ್ಟಕ್ಕೆ ಅನುಗುಣವಾಗಿ ಕಾಂಪ್ಲೆಕ್ಸ್‌ ಗೊಬ್ಬರಗಳನ್ನು ಬಳಸುವಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಫೀಲ್ಡ್ ಮಟ್ಟದಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕೇವಲ ಅಂಕಿ-ಅಂಶಗಳನ್ನು ನೀಡದೆ, ವಾಸ್ತವದಲ್ಲಿ ರೈತರಿಗೆ ತಲುಪಿರುವ ಸೌಲಭ್ಯಗಳ ಬಗ್ಗೆ ನಿಗಾ ವಹಿಸಬೇಕು. ಯಾವುದೇ ಹಂತದಲ್ಲಿ ಭ್ರಷ್ಟಾಚಾರ ಅಥವಾ ನಿರ್ಲಕ್ಷ್ಯ ಕಂಡುಬಂದಲ್ಲಿ ಕಟ್ಟುನಿಟ್ಟಿನ ಕ್ರಮ ಅನಿವಾರ್ಯ ಎಂದು ಎಚ್ಚರಿಕೆ ನೀಡಿದರು.

ಜಂಟಿ ಕೃಷಿ ನಿರ್ದೇಶಕಿ ಚೇತನಾ ಪಾಟೀಲ ಮಾತನಾಡಿ, ಜಿಲ್ಲೆಯಲ್ಲಿ ಮುಂಗಾರು ಹಂಗಾಮು ಮುಕ್ತಾಯವಾಗುವ(ಏಪ್ರಿಲ್- ಸೆಪ್ಟೆಂಬರ್‌) ವರೆಗೆ ಒಟ್ಟು 67536 ಮೆಟ್ರಿಕ್ ಟನ್ ರಸಗೊಬ್ಬರಗಳ ಅಗತ್ಯವಿದೆ. ಈಗಾಗಲೇ ಸುಮಾರು 13842 ಮೆಟ್ರಿಕ್ ಟನ್ ರಸಗೊಬ್ಬರವನ್ನು ಜಿಲ್ಲೆಯಲ್ಲಿ ದಾಸ್ತಾನು ಮಾಡಲಾಗಿದೆ. ಮುಂಗಾರು ಹಂಗಾಮಿಗೆ ಒಟ್ಟಾರೆಯಾಗಿ ಯೂರಿಯಾ ರಸಗೊಬ್ಬರ 28531 ಮೆಟ್ರಿಕ್ ಟನ್ ಬೇಡಿಕೆ ಇದ್ದು, ಅದರಲ್ಲಿ ಈಗಾಗಲೇ 4492 ಮೆಟ್ರಿಕ್ ಟನ್ ದಾಸ್ತಾನು ಮಾಡಲಾಗಿದೆ. ಮುಂಗಾರು ಚಟುವಟಿಕೆ ಪ್ರಾರಂಭವಾಗುತ್ತಲೇ ಹಂತ ಹಂತವಾಗಿ ಸಕಾಲಕ್ಕೆ ಯೂರಿಯಾ ರಸಗೊಬ್ಬರಗಳ ಸರಬರಾಜಿಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ವೇಳೆ ಡಿವೈಎಸ್ಪಿ ಮಹಾಂತೇಶ್ ಸಜ್ಜನ, ಉಪವಿಭಾಗಾಧಿಕಾರಿ ಗಂಗಪ್ಪ ಎಂ. ಸೇರಿದಂತೆ ವಿವಿಧ ರಸಗೊಬ್ಬರ ಕಂಪನಿಗಳ ಜಿಲ್ಲಾ ಪ್ರತಿನಿಧಿಗಳು, ಕೃಷಿ ಅಧಿಕಾರಿಗಳು ಇದ್ದರು.