ಸಾರಾಂಶ
ಹಳಿಯಾಳ: ಆಡಳಿತದಲ್ಲಿ ತಂತ್ರಜ್ಞಾನ ಅಳವಡಿಸಿಕೊಂಡ ಮೇಲೆ ಸಾರ್ವಜನಿಕರ ಕೆಲಸಗಳು ವಿಳಂಬವಾಗುತ್ತಿದೆ. ಭ್ರಷ್ಟತೆಗೆ ಪೂರ್ಣವಿರಾಮ ನೀಡಬೇಕಾಗಿದೆ, ಆಡಳಿತದಲ್ಲಿ ಪಾರದರ್ಶಕತೆ ತರಬೇಕಾಗಿದೆ ಎಂದು ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ಹಿರಿಯ ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.
ಗುರುವಾರ ತಾಲೂಕಾಡಳಿತ ಸೌಧದ ಆವರಣದಲ್ಲಿ ನಡೆದ 78ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಆನ್‌ಲೈನ್ ವ್ಯವಸ್ಥೆ ಬರುವ ಮುನ್ನ ಸಾರ್ವಜನಿಕರ ಕೆಲಸಗಳು ಬಹುಬೇಗ ಆಗುತ್ತಿದ್ದವು. ತಂತ್ರಜ್ಞಾನ ವ್ಯವಸ್ಥೆ ಅಳವಡಿಸಿಕೊಂಡ ಮೇಲೆ ಸಕಾಲದಲ್ಲಿ ನಡೆಯುತ್ತಿಲ್ಲ. ಕಾರಣವಿಷ್ಟೇ, ಮಾನವನ ಬುದ್ಧಿ ಭ್ರಷ್ಟವಾಗಿ, ಭಕ್ಷೀಸು ಪಡೆಯದೇ ಯಾವುದೇ ಫೈಲ್ ಮುಂದೆ ಹೋಗದಂತಹ ವ್ಯವಸ್ಥೆ ಬಂದಿದೆ ಎಂದು ಹೇಳಿದರು.ರಾಜಕೀಯದಲ್ಲಿ ನಮ್ಮಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ ಅದರ ದುಷ್ಪರಿಣಾಮಗಳು ಅಭಿವೃದ್ಧಿ ಮೇಲೆ ಬೀಳಬಾರದು. ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ, ಮತ್ಸರ, ಮತೀಯ-ಧಾರ್ಮಿಕ ಕಲಹಗಳು ಕೊನೆಯಾಗಬೇಕಾಗಿದೆ ಎಂದರು.
ಸಾವಿರಾರು ದೇಶಭಕ್ತರ ಹೋರಾಟ, ತ್ಯಾಗ, ಪರಿಶ್ರಮಗಳ ಫಲವನ್ನು ನಾವಿಂದೂ ಅನುಭವಿಸುತ್ತಿದ್ದು, ಇಂದು ನಮ್ಮ ಕೈಯಲ್ಲಿರುವ ಸ್ವಾತಂತ್ರ್ಯದ ದೀವಿಗೆಯನ್ನು ಮುಂದಿನ ತಲೆಮಾರಿಗೆ ಜಾಗರೂಕತೆಯಿಂದ ತಲುಪಿಸುವ ಅತ್ಯಂತ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಹೊಣೆಗಾರಿಕೆ ಅರಿತು ನಾವು ಮುನ್ನಡೆಯಬೇಕಾಗಿದೆ ಎಂದರು.ದೇಶದ ಅಭಿವೃದ್ಧಿಗೆ ಮಾರಕವಾಗಿರುವ ಬಡತನ, ನಿರಕ್ಷರತೆ ಮತ್ತು ನಿರುದ್ಯೋಗ, ಬೆಲೆಯೇರಿಕೆ ಸಮಸ್ಯೆಗಳ ನಿವಾರಣೆಗೆ ಪಕ್ಷಾತೀತವಾಗಿ ಹೋರಾಟ ಮಾಡುವ ಅವಶ್ಯಕತೆಯಿದೆ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಪ್ರವೀಣ ಹುಚ್ಚಣ್ಣನವರ ಅವರು, ಯುವಶಕ್ತಿಗೆ ಹಾಗೂ ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ತಿಳಿವಳಿಕೆ ಪರಿಚಯ ಕೊಡಬೇಕು ಎಂದರು.ಸ್ವಾತಂತ್ರ್ಯೋತ್ಸವ ನಿಮಿತ್ತ ಶಾಲಾ-ಕಾಲೇಜು ಮಕ್ಕಳಿಗಾಗಿ ಆಯೋಜಿಸಿದ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಹಾಗೂ ಪಾಕಿಸ್ತಾನ ಯುದ್ಧದಲ್ಲಿ ಭಾಗವಹಿಸಿ ಮಾಜಿ ಯೋಧ ಡಿಸೋಜಾ ಅವರನ್ನು ಸನ್ಮಾನಿಸಲಾಯಿತು.
ತಾಪಂ ಇಒ ಪರಶುರಾಮ ಘಸ್ತೆ, ಬಿಇಒ ಪ್ರಮೋದ ಮಹಾಲೆ, ಸಿಪಿಐ ಜೈಪಾಲ ಪಾಟೀಲ, ಮುಖ್ಯಾಧಿಕಾರಿ ಅಶೋಕ ಸಾಳೆಣ್ಣನವರ, ಸಹಾಯಕ ಕೃಷಿ ನಿರ್ದೇಶಕ ಪಿ.ಐ. ಮಾನೆ, ವಿಪ ಮಾಜಿ ಸದಸ್ಯ ಎಸ್.ಎಲ್. ಘೋಟ್ನೇಕರ, ಪುರಸಭಾ ಮಾಜಿ ಅಧ್ಯಕ್ಷ ಅಜರ ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣಾ ಮಾದರ, ಫಯಾಜ್ ಶೇಖ್, ಅಲಿಂ ಬಸರಿಕಟ್ಟಿ ಹಾಗೂ ಇತರರು ಇದ್ದರು.ಸಂಭ್ರಮಾಚರಣೆ: ತಾಲೂಕಿನೆಲ್ಲೆಡೆ ಸ್ವಾತಂತ್ರ್ಯೋತ್ಸವದ ನಿಮಿತ್ತ ವಿವಿಧ ಸ್ಫರ್ಧೆಗಳು , ಸಾಂಸ್ಕೃತಿಕ ಸಮಾರಂಭಗಳು ನಡೆದವು.