ತಂತ್ರಜ್ಞಾನ ಬಳಕೆಯಿಂದ ಪಾರದರ್ಶಕ ಆಡಳಿತ: ಸಿದ್ದರಾಮಯ್ಯ

| Published : Aug 28 2024, 01:39 AM IST

ಸಾರಾಂಶ

ರಾಜ್ಯದ ಅಭಿವೃದ್ಧಿ ಗುರಿ ತಲುಪಲು ತಂತ್ರಜ್ಞಾನ ಬಳಕೆ ಮಾಡಿಕೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ನೀತಿ ಆಯೋಗದ ಸಭೆಯಲ್ಲಿ ಅವರು ಮಾತನಾಡಿದರು.

ಕನ್ನಡ ಪ್ರಭ ವಾರ್ತೆ ಬೆಂಗಳೂರು

ಪರಿಣಾಮಕಾರಿ ಆಡಳಿತದ ಮೂಲಕ ರಾಜ್ಯದ ಅಭಿವೃದ್ಧಿ ಗುರಿ ತಲುಪಲು ರಾಜ್ಯ ಸರ್ಕಾರ ತಂತ್ರಜ್ಞಾನ ನವ ಬಗೆಯ ಪರಿಹಾರಗಳ ಮೇಲೆ ಬಂಡವಾಳ ಹೂಡಿಕೆ ಮಾಡಿ ಆಡಳಿತ ಪ್ರಕ್ರಿಯೆಯಲ್ಲಿ ಹೆಚ್ಚಿನ ಪಾರದರ್ಶಕತೆ, ಕಾರ್ಯಕ್ಷಮತೆ ತರುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮಂಗಳವಾರ ವಿಧಾನಸೌಧದಲ್ಲಿ ‘ನೀತಿ ಆಯೋಗ’ದ ಉಪಾಧ್ಯಕ್ಷ ಸುಮನ್‌ ಬೆರಿ ಅವರ ಜೊತೆ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸುಸ್ಥಿರತೆ ಸರ್ಕಾರದ ಮುಖ್ಯ ಗುರಿಯಾಗಿದೆ. ಇಂಗಾಲ ಅಂಶವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಪರಿಸರ ರಕ್ಷಣೆ ಮೂಲಕ ವಿವಿಧ ನೀತಿಗಳನ್ನು ಜಾರಿಗೆ ತರಲು ಸರ್ಕಾರ ಬದ್ಧತೆಯಾಗಿದೆ. ಉದಾಹರಣೆಗೆ ರಾಜ್ಯದಲ್ಲಿ ಒಟ್ಟು ಉತ್ಪಾದಿತ 32 ಗಿಗಾ ವ್ಯಾಟ್‌ನಲ್ಲಿ ಮರುಬಳಕೆಯ ಇಂಧನ ಉತ್ಪಾದನೆ ಶೇ. 53ರಷ್ಟಿದೆ. ಜೊತೆಗೆ ಪ್ರಾಕೃತಿಕ ಸಂಪನ್ಮೂಲ ರಕ್ಷಣೆ ಹಾಗೂ ಸುಸ್ಥಿರ ಕೃಷಿ ಪದ್ಧತಿಗೆ ಪ್ರೋತ್ಸಾಹ ನೀಡಲು ಪ್ರಯತ್ನಿಸಲಾಗುತ್ತಿದೆ ಎಂದು ವಿವರಿಸಿದರು.

ರಾಜ್ಯದಲ್ಲಿ ಪಾರದರ್ಶಕ, ಕಾರ್ಯಕ್ಷಮತೆ ಹೆಚ್ಚಿಸಲು ಬಲಿಷ್ಠವಾದ ಇ-ಆಡಳಿತ ವ್ಯವಸ್ಥೆ ಜಾರಿಗೆ ತಂದಿದ್ದೇವೆ. ಇದರ ಪರಿಣಾಮವಾಗಿ ಕೇವಲ ಮೂರು ತಿಂಗಳಿಗಿಂತ ಕಡಿಮೆ ಆವಧಿಯಲ್ಲಿ ಡಿಬಿಟಿ ಮೂಲಕ ₹54 ಸಾವಿರ ಕೋಟಿಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಲಾಗಿದೆ. ಸರ್ಕಾರದ ಒಟ್ಟಾರೆ ಗುರಿ ಸರ್ಕಾರದ ಸೇವೆಯನ್ನು ಇನ್ನಷ್ಟು ಉತ್ತಮಗೊಳಿಸುವುದಾಗಿದೆ. ಸರ್ಕಾರ ಹಾಗೂ ನೀತಿ ಆಯೋಗ ಜೊತೆಯಾಗಿ ಜನರ ಜೀವನದಲ್ಲಿ ಸಕಾರಾತ್ಮಕ ಪರಿಣಾಮ ಬೀರಲು ಕೈ ಜೋಡಿಸೋಣ ಎಂದು ಹೇಳಿದರು.

ಸಭೆಯಲ್ಲಿ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್‌, ಅಪರ ಮುಖ್ಯಕಾರ್ಯದರ್ಶಿ ಎಲ್‌.ಕೆ. ಅತೀಕ್‌, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.