ಡಿ.7 ರಂದು ಭಾನುವಾರ ಜಿಲ್ಲಾ ಕೇಂದ್ರದ ಹಳೇ ಬಾಗಲಕೋಟೆ, ವಿದ್ಯಾಗಿರಿ ಮತ್ತು ನವನಗರ ಸೇರಿ ಒಟ್ಟು 33 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆಯನ್ನು ಪಾರದರ್ಶಕ ಮತ್ತು ಕಟ್ಟುನಿಟ್ಟಾಗಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಡಿ.7 ರಂದು ಭಾನುವಾರ ಜಿಲ್ಲಾ ಕೇಂದ್ರದ ಹಳೇ ಬಾಗಲಕೋಟೆ, ವಿದ್ಯಾಗಿರಿ ಮತ್ತು ನವನಗರ ಸೇರಿ ಒಟ್ಟು 33 ಪರೀಕ್ಷಾ ಕೇಂದ್ರಗಳಲ್ಲಿ ಟಿಇಟಿ ಪರೀಕ್ಷೆಯನ್ನು ಪಾರದರ್ಶಕ ಮತ್ತು ಕಟ್ಟುನಿಟ್ಟಾಗಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಸಂಗಪ್ಪ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಟಿಇಟಿ ಪರೀಕ್ಷೆ 2025 ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಟಿಇಟಿ ಪರೀಕ್ಷೆಯ ಪತ್ರಿಕೆ-1 ನ್ನು ಬೆಳಗ್ಗೆ 9.30 ರಿಂದ 12 ಗಂಟೆಯವರೆಗೆ ಹಳೇ ಬಾಗಲಕೋಟದ 12 ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಪತ್ರಿಕೆ-2 ಅನ್ನು ಮಧ್ಯಾಹ್ನ 2 ರಿಂದ ಸಂಜೆ 4.30 ರವರೆಗೆ ನಡೆಸಲಾಗುತ್ತಿದ್ದು ಒಟ್ಟು 9075 ಪರೀಕ್ಷಾರ್ಥಿಗಳು ಹಾಜರಾಗಲಿದ್ದಾರೆ ಎಂದರು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಓರ್ವ ಎ ಅಥವಾ ಬಿ ವೃಂದದ ಅಧಿಕಾರಿಯನ್ನು ಸ್ಥಾನಿಕ ಜಾಗೃತ ಅಧಿಕಾರಿಯಾಗಿ ಹಾಗೂ ತಲಾ 5-6 ಕೇಂದ್ರಕ್ಕೆ ಓರ್ವ ಎ ವೃಂದದ ಜಿಲ್ಲಾಮಟ್ಟದ ಅಧಿಕಾರಿಯನ್ನು ವೀಕ್ಷಕರನ್ನಾಗಿ ನೇಮಕ ಮಾಡಿ ನಿಯೋಜಿಸಲಾಗುತ್ತಿದ್ದು, ಎಲ್ಲೂ ಲೋಪದೋಷಗಳು ಉಂಟಾಗದಂತೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೇಲ್ವಿಚಾರಣೆ ಮಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಹಂತದ ಅಧಿಕಾರಿಗಳಿಗೆ ಅವರು ಸೂಚಿಸಿದರು.ಪರೀಕ್ಷಾರ್ಥಿಗಳು ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶಿಸುವ ಮೊದಲು ಪ್ರವೇಶ ಪತ್ರದಲ್ಲಿನ ಭಾವಚಿತ್ರದೊಂದಿಗೆ ಮುಖಚಹರೆಯನ್ನು ತಾಳೆ ನೋಡುವುದು ಹಾಗೂ ಫ್ರಿಸ್ಕಿಂಗ್ ಕಾರ್ಯದ ನಂತರವೇ ಪರೀಕ್ಷಾ ಕೇಂದ್ರ/ಕೊಠಡಿಯೊಳಗೆ ಪ್ರವೇಶ ನೀಡತಕ್ಕದ್ದು, ವಿಶೇಷ ಅಗತ್ಯಯುಳ್ಳ ಅಭ್ಯರ್ಥಿಗಳಿಗೆ ಸೂಕ್ತ ಆಸನ ವ್ಯವಸ್ಥೆ ಹಾಗೂ ಅಂಗವಿಕಲತೆಯ ಪ್ರಮಾಣವನ್ನಾಧರಿಸಿ ಪರೀಕ್ಷೆ ಬರೆಯಲು ನಿಯಮಾನುಸಾರ ಹೆಚ್ಚಿನ ಕಾಲಾವಕಾಶ ನೀಡಲು ಮುಖ್ಯ ಅಧೀಕ್ಷಕರು ಕ್ರಮ ಕೈಗೊಳ್ಳಬೇಕು. ಸಿಸಿ ಕ್ಯಾಮರಾ, ಪ್ರಿಸ್ಕಿಂಗ್ ಹಾಗೂ ಬಾಡಿ ಕ್ಯಾಮೆರಾ ವ್ಯವಸ್ಥೆಯನ್ನು ಪರೀಕ್ಷಾ ಪ್ರಾಧಿಕಾರ ಮಾಡುತ್ತಿದ್ದು ಸಿಸಿ ಕ್ಯಾಮೆರಾಗಳಿಗೆ ವೆಬ್‌ಕಾಸ್ಟಿಂಗ್ ಜಿಲ್ಲಾ ಹಾಗೂ ರಾಜ್ಯ ಹಂತದಲ್ಲಿ ಡಿಡಿಪಿಐ ನಿರ್ವಹಿಸಬೇಕು. ಒಟ್ಟಾರೆ ಪರೀಕ್ಷಾ ಪೂರ್ವ, ಪರೀಕ್ಷಾ ಅವಧಿ ಹಾಗೂ ಪರೀಕ್ಷಾ ನಂತರದ ಕಾರ್ಯಗಳನ್ನು ಅಚ್ಚುಕಟ್ಟಾಗಿ ಎಲ್ಲ ಅಧಿಕಾರಿ ಮತ್ತು ಸಿಬ್ಬಂದಿ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಶಿಧರ ಕುರೇರ್, ಅಪರ ಜಿಲ್ಲಾಧಿಕಾರಿ ಅಶೋಕ ತೇಲಿ, ಡಿಡಿಪಿಐ ಅಜೀತ್ ಮನ್ನಿಕೇರಿ ಸೇರಿದಂತೆ ಇತರರು ಹಾಜರಿದ್ದರು.