ಸಾರಾಂಶ
ಕನ್ನಡಪ್ರಭ ವಾರ್ತೆ, ಭಾಲ್ಕಿ
ಸದಾ ಆರ್ಥಿಕವಾಗಿ ನಷ್ಟದಲ್ಲಿರುತ್ತಿದ್ದ ರಾಜ್ಯದ ಸಾರಿಗೆ ಸಂಸ್ಥೆಯು ಶಕ್ತಿ ಯೋಜನೆ ಅನುಷ್ಠಾನದಿಂದ ಲಾಭದತ್ತ ಮರಳಿದೆ ಎಂದು ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹಣಮಂತರಾವ್ ಚವ್ಹಾಣ್ ಹೇಳಿದರು.ಅವರು ಪಟ್ಟಣದ ತಾಪಂ ಸಭಾಂಗಣದಲ್ಲಿ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ತಾಲೂಕಿನಲ್ಲಿ ಸಾರಿಗೆ ಸಂಸ್ಥೆಯ ಪ್ರತಿ ತಿಂಗಳು ಮೂರ್ನಾಲ್ಕು ಲಕ್ಷ ರು.ಲಾಭ ಆಗುತ್ತಿದೆ. ಇದರಿಂದ ಚಾಲಕರು, ನಿರ್ವಾಹಕರಿಗೆ ಸಕಾಲಕ್ಕೆ ವೇತನವಾಗುತ್ತಿದೆ. ಆದರೆ ಬಸ್ ನಿಲ್ದಾಣ, ಕೋರಿಕೆ ಮೇರೆಗಿನ ನಿಲ್ದಾಣ, ರಸ್ತೆ ಪಕ್ಕದಲ್ಲಿ ವಿವಿಧೆಡೆ ಸಂಚರಿಸಲು ಮಹಿಳೆಯರು ನಿಂತಿದ್ದರೆ ಸಾರಿಗೆಯ ಕೆಲ ಚಾಲಕರು ಕಂಡೂ ಕಾಣದಂತೆ ಬಸ್‌ನ್ನು ಓಡಿಸಿಕೊಂಡು ಹೋಗುತ್ತಿದ್ದಾರೆ ಎನ್ನುವ ದೂರುಗಳು ಬರುತ್ತಿವೆ ಇಂತಹ ಘಟನೆ ಮರುಕಳಿಸಿದರೆ ತಕ್ಷಣ ಬಸ್ ಚಾಲಕನ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾರಿಗೆ ಸಂಸ್ಥೆಯ ಡಿಪೋ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ಗೃಹ ಲಕ್ಷ್ಮೀ ಯೋಜನೆ ಅರ್ಹ ಫಲಾನುಭವಿಗಳಿಗೆ ಸಿಗುವಂತೆ ನೋಡಿಕೊಳ್ಳಬೇಕು. ಇನ್ನೂ ನಾಲ್ಕೈದು ಸಾವಿರ ಫಲಾನುಭವಿಗಳು ಈ ಯೋಜನೆ ಯಿಂದ ವಂಚಿತರಾಗಿದ್ದಾರೆ. ಕೂಡಲೇ ಬಿಟ್ಟು ಹೋಗಿರುವ ಫಲಾನುಭವಿಗಳ ಹೆಸರು ಪತ್ತೆ ಹಚ್ಚಿ ಎಲ್ಲರಿಗೂ ಯೋಜನೆಯ ಲಾಭ ಸಿಗುವಂತೆ ಮಾಡಬೇಕು. ಅನ್ನ ಭಾಗ್ಯ ಯೋಜನೆ ಎಲ್ಲರಿಗೂ ದಕ್ಕಬೇಕು ಎಂದು ತಿಳಿಸಿದರು.ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಸದಸ್ಯ ಧನರಾಜ ಪಾಟೀಲ್, ಜೈಶ್ರೀ ಮಾನಕಾರ, ಮಂಗಳಾ ಬಾಬುರಾವ್ ಮಾತನಾಡಿ, ಬಸ್‌ನಲ್ಲಿ ಸಂಚರಿಸುವ ಮಹಿಳೆಯರನ್ನು ಬಸ್‌ನ ನಿರ್ವಾಹಕರು ನಿಂದಿ ಸುತ್ತಿದ್ದಾರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದರು.
ಸಭೆಗೆ ವಿಳಂಬವಾಗ ಆಗಮಿಸಿದ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು ಸಭೆಯ ಅಧ್ಯಕ್ಷ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಹಣಮಂತರಾವ್ ಚವ್ಹಾಣ್ ತರಾಟೆಗೆ ತೆಗೆದುಕೊಂಡರು.ಈ ಸಂದರ್ಭದಲ್ಲಿ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಟಾನ ಸಮಿತಿ ಉಪಾಧ್ಯಕ್ಷ ಶೇಖ ಅಬ್ದುಲ್ ನಸೀರ್, ಸದಸ್ಯರಾದ ವಿಲಾಸ ಪಾಟೀಲ್, ಸಂಗಮೇಶ ವಾಲೆ, ಓಂಕಾರ ರಾಮಶೆಟ್ಟಿ, ಪಾಂಡುರಂಗ ಕಣಜೆ, ದಿಲೀಪ ಪಾಟೀಲ್, ಸಂಜುಕುಮಾರ ಶಂಕರೆಪ್ಪ, ಸತೀಶ ಮಾಳಗೆ, ಕೈಲಾಸ ಶಿವಾಜಿ, ಗೋಪಾಲ ಸೂರ್ಯವಂಶಿ, ತಾಪಂ ಅಧಿಕಾರಿ ಸೂರ್ಯಕಾಂತ ಬಿರಾದಾರ್ ಇದ್ದರು.