ಸಾರಾಂಶ
ಸಾರಿಗೆ ನೌಕರರು ಯಾವುದೇ ರೀತಿಯಿಂದಲೂ ಹೊಣೆಗಾರರಲ್ಲ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ 'ಶಕ್ತಿ' ಯೋಜನೆಯಿಂದ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದ ಲಾಭ ದೊರೆತಿದೆ.
ಹೊಸಪೇಟೆ: ನಾಲ್ಕು ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ ಸಂಪೂರ್ಣ ಅನುದಾನ ಬಿಡುಗಡೆ ಮಾಡುವಂತೆ ವೇತನ ಪರಿಷ್ಕರಿಸುವುದು ಸೇರಿದಂತೆ ಸುಮಾರು ಎಂಟು ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯಾದ್ಯಂತ ಡಿ.31ರಂದು ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಜಿ.ಶ್ರೀನಿವಾಸಲು ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ವೇತನ ಹೆಚ್ಚಳ 38 ತಿಂಗಳ ಬಾಕಿ ಉಳಿಯಲು ಸರ್ಕಾರ ಹಾಗೂ ಆಡಳಿತ ವರ್ಗದ ವಿಳಂಬ ಧೋರಣೆಯೇ ಕಾರಣವಾಗಿದೆ. ಸಾರಿಗೆ ನೌಕರರು ಯಾವುದೇ ರೀತಿಯಿಂದಲೂ ಹೊಣೆಗಾರರಲ್ಲ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ''ಶಕ್ತಿ'' ಯೋಜನೆಯಿಂದ ಸರ್ಕಾರಕ್ಕೆ ಹಾಗೂ ಸಾರ್ವಜನಿಕರಿಗೆ ದೊಡ್ಡ ಪ್ರಮಾಣದ ಲಾಭ ದೊರೆತಿದೆ. ಹಲವು ಹತ್ತು ಸಮಸ್ಯೆಗಳನ್ನು ಅನುಭವಿಸಿ ಸಾರಿಗೆ ಕಾರ್ಮಿಕರು ಈ ಯೋಜನೆಯನ್ನು ಯಶಸ್ವಿಗೊಳಿಸಿ ಹೈರಾಣಾಗಿದ್ದಾರೆ. 38 ತಿಂಗಳ ಬಾಕಿ ಹಣ, ಜನವರಿ ಒಂದರಿಂದ ಹೊಸ ವೇತನ ಮತ್ತಿತರ ಬೇಡಿಕೆಗಗನ್ನು ಈಡೇರಿಸಬೇಕಾಗಿರುವುದು ಸರ್ಕಾರದ ಹಾಗೂ ಆಡಳಿತ ವರ್ಗದ ಜವಾಬ್ದಾರಿಯಾಗಿದೆ ಎಂದರು.ಒಂದು ವರ್ಷದಿಂದ ಹಲವು ಬಾರಿ ಮನವಿ ಸಲ್ಲಿಸಿ ತಾಳ್ಮೆಯಿಂದ ಶಾಂತಿಯುತ ಧರಣಿ, ಉಪವಾಸ ಸತ್ಯಾಗ್ರಹ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಸರ್ಕಾರ ಒತ್ತಾಯಿಸಿದ್ದೇವೆ. ನಮ್ಮ ನ್ಯಾಯಯುತ ಬೇಡಿಕೆಗಳ ಬಗ್ಗೆ ನಿರ್ಲಕ್ಷ್ಯ ಧೋರಣೆ ತಳೆದಿರುವ ರಾಜ್ಯ ಸರ್ಕಾರವನ್ನು ಎಚ್ಚರಿಸಿ ನಮ್ಮ ಬೇಡಿಕೆಗಳನ್ನು ಪಡೆಯಲು ಅನಿರ್ದಿಷ್ಟ ಮುಷ್ಕರ ಬಿಟ್ಟರೆ ನಮಗೆ ಅನ್ಯ ಮಾರ್ಗವಿಲ್ಲ ಎಂದು ತಿಳಿಸಿದ್ದಾರೆ.
ಮುಖಂಡರಾದ ಜೆ.ಕೋಟ್ರೇಶ್, ಎಂ.ವೆಂಕಟೇಶ್, ವಿ.ಕೆ.ಹಿರೇಮಠ, ಶಿವಾನಂದ ಭಂಡಾರಿ ಇದ್ದರು.ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಸಂಚಾಲಕ ಜಿ.ಶ್ರೀನಿವಾಸಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.