ಸಾರಾಂಶ
ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಮಡಿಕೇರಿಯ ಘಟಕ ನಾಮಕಾವಸ್ಥೆಗೆ ಎಂಬಂತಾಗಿದ್ದು, ಸಾರ್ವಜನಿಕ ಸೇವೆಯಿಂದ ದೂರ ಉಳಿದಿದ್ದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಮಡಿಕೇರಿ ಘಟಕ ನಾಮಕಾವಸ್ಥೆಗೆ ಎಂಬಂತಾಗಿದ್ದು, ಸಾರ್ವಜನಿಕ ಸೇವೆಯಿಂದ ದೂರ ಉಳಿದಿದ್ದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಪ್ರತಿನಿತ್ಯ ಒಂದಿಲ್ಲೊಂದು ಸಮಸ್ಯೆ ಎದುರಾಗುತ್ತಿದ್ದು ಮಡಿಕೇರಿಯಿಂದ ಸೋಮವಾರಪೇಟೆಗೆ ಸಮರ್ಪಕ ಬಸ್ ವ್ಯವಸ್ಥೆ ಇಲ್ಲದೆ ಸರಕಾರಿ ನೌಕರರು, ಖಾಸಗಿ ಉದ್ಯೋಗಕ್ಕೆ ತೆರಳುವವರು, ಶಾಲಾ ಮಕ್ಕಳಿಗೆ ಸಮಸ್ಯೆಯಾಗುತ್ತಿದೆ. ಮಡಿಕೇರಿಯಿಂದ ಸೋಮವಾರಪೇಟೆ ಭಾಗಕ್ಕೆ ಬೆಳಿಗ್ಗೆ 7.45 ರ ನಂತರ 9 ಗಂಟೆಯವರೆಗೆ ಬಸ್ ವ್ಯವಸ್ಥೆ ಇಲ್ಲ. 8.30ರ ಬಸ್ ವಾರದ ಮೂರು ದಿವಸ ಇದ್ದರೆ ಉಳಿದ ನಾಲ್ಕು ದಿನಗಳು ಬರುವುದೇ ಇಲ್ಲ. ಬಸ್ ಒಳಗಡೆ ಶುಚಿತ್ವ ಇಲ್ಲದೆ ವಾರಗಳೇ ಕಳೆದಿರುತ್ತದೆ.
ಶಾಸಕ ಡಾ.ಮಂತರ್‌ಗೌಡರ ಉಪಸ್ಥಿಯಲ್ಲಿ ಇತ್ತೀಚೆಗೆ ಸಭೆ ನಡೆದಿದೆ. ಆದರೆ ಡಿಪೋ ವ್ಯವಸ್ಥಾಪಕರು ಗಮನ ಹರಿಸುತ್ತಿಲ್ಲ. ಅದರಲ್ಲೂ ಸೋಮವಾರಪೇಟೆ ಭಾಗಕ್ಕೆ ಸಂಪೂರ್ಣ ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ ಎಂದು ಪ್ರತಿನಿತ್ಯ ಬಸ್‌ನಲ್ಲಿ ತೆರಳುತ್ತಿರುವ ನೌಕರರು ಮತ್ತು ವಿದ್ಯಾರ್ಥಿಗಳು ಕನ್ನಡಪ್ರಭದೊಂದಿಗೆ ತಮ್ಮ ಅಳಲನ್ನು ವ್ಯಕ್ತ ಪಡಿಸಿದ್ದಾರೆ. ಶನಿವಾರ ಬೆಳಗ್ಗೆ 7. 45 ರ ನಂತರ 8.45ರವರೆಗೆ ಯಾವುದೇ ಬಸ್ ವ್ಯವಸ್ಥೆ ಇರಲಿಲ್ಲ. ನಂತರ ಬಂದ ಬಸ್ ಮಕ್ಕಂದೂರು ಬಳಿ ದುರಸ್ತಿಗೀಡಾಗಿದೆ. ಪ್ರಯಾಣಿಕರು ಸಂಸ್ಥೆಗೆ ಹಿಡಿ ಶಾಪ ಹಾಕುತ್ತಾ 9.15 ರ ಬಸ್‌ನಲ್ಲಿ ತೆರಳಿದ್ದಾರೆ.