ಸಾರಿಗೆ ಮುಷ್ಕರ: ಕೆ.ಆರ್.ಪೇಟೆ ಗ್ರಾಮೀಣ ಪ್ರದೇಶದ ಸಂಚಾರ ಅಸ್ತವ್ಯಸ್ತ

| Published : Aug 05 2025, 11:45 PM IST

ಸಾರಿಗೆ ಮುಷ್ಕರ: ಕೆ.ಆರ್.ಪೇಟೆ ಗ್ರಾಮೀಣ ಪ್ರದೇಶದ ಸಂಚಾರ ಅಸ್ತವ್ಯಸ್ತ
Share this Article
  • FB
  • TW
  • Linkdin
  • Email

ಸಾರಾಂಶ

ಕೆ.ಆರ್.ಪೇಟೆ ಪಟ್ಟಣದ ಮಾರ್ಗವಾಗಿ ನಾಡಿನ ಇತರೆ ಜಿಲ್ಲೆಗಳನ್ನು ಸಂಪರ್ಕಿಸುವ ಹೊರಗಿನ ಡಿಪೋಗಳ ಬಸ್ ಸಂಚಾರವೂ ಸ್ಥಗಿತಗೊಂಡಿದ್ದರಿಂದ ಪಟ್ಟಣದಿಂದ ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೋಗ್ಗ ಸೇರಿದಂತೆ ದಕ್ಷಿಣ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯ ಕೊಂಡಿ ಕಳಚಿ ಬಿದ್ದಿತ್ತು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಸಾರಿಗೆ ನೌಕರರ ಮುಷ್ಕರದಿಂದಾಗಿ ಮಂಗಳವಾರ ಸಾರಿಗೆ ಬಸ್‌ಗಳು ಸಂಚಾರಕ್ಕಿಳಿಯದಿದ್ದರಿಂದ ಗ್ರಾಮೀಣ ಪ್ರದೇಶದ ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ಮುಷ್ಕರದಿಂದಾಗಿ ಕೆ.ಆರ್‌.ಪೇಟೆ ಬಸ್‌ ಡಿಪೋ ಹಾಗೂ ನಿಲ್ದಾಣದಿಂದ ಯಾವುದೇ ಬಸ್‌ ಸಂಚಾರಕ್ಕಿಳಿಯಲಿಲ್ಲ. ಇದರಿಂದ ಪ್ರಯಾಣಿಕರ ಪರದಾಟ ಹೇಳತೀರದಾಗಿತ್ತು. ಪಟ್ಟಣದ ಮಾರ್ಗವಾಗಿ ನಾಡಿನ ಇತರೆ ಜಿಲ್ಲೆಗಳನ್ನು ಸಂಪರ್ಕಿಸುವ ಹೊರಗಿನ ಡಿಪೋಗಳ ಬಸ್ ಸಂಚಾರವೂ ಸ್ಥಗಿತಗೊಂಡಿದ್ದರಿಂದ ಪಟ್ಟಣದಿಂದ ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಕೊಡಗು, ಚಿಕ್ಕಮಗಳೂರು, ಶಿವಮೋಗ್ಗ ಸೇರಿದಂತೆ ದಕ್ಷಿಣ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಸಾರಿಗೆ ವ್ಯವಸ್ಥೆಯ ಕೊಂಡಿ ಕಳಚಿ ಬಿದ್ದಿತ್ತು.

ಇದರ ಪರಿಣಾಮ ದೈನಂದಿನ ವ್ಯವಹಾರಗಳಿಗೆ ನಿತ್ಯ ಸಂಚರಿಸುವ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದರು. ಪಟ್ಟಣದ ವಿವಿಧ ಶಾಲಾ-ಕಾಲೇಜುಗಳಿಗೆ ಗ್ರಾಮೀಣ ಪ್ರದೇಶದಿಂದ ಆಗಮಿಸುವ ವಿದ್ಯಾರ್ಥಿಗಳಿಗೂ ಸಾರಿಗೆ ಮುಷ್ಕರದ ಬಿಸಿ ತಟ್ಟಿತ್ತು. ಬಹುತೇಕ ಶಾಲಾ-ಕಾಲೇಜುಗಳಲ್ಲಿ ಹಾಜರಾತಿಯ ಕೊರತೆ ಕಾಣುತ್ತಿತ್ತು. ಗ್ರಾಮೀಣ ಸಾರಿಗೆ ಸಂಪರ್ಕ ಕಡಿತಗೊಂಡಿದ್ದ ಪರಿಣಾಮ ಪಟ್ಟಣದ ದೈನಂದಿನ ವಾಣಿಜ್ಯ ವ್ಯಹಾರಗಳೂ ಕುಂಠಿತಗೊಂಡಿದ್ದವು. ಬಸ್ ಸಂಚಾರವಿಲ್ಲದೆ ಪಟ್ಟಣದ ಸಾರಿಗೆ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು.

ಪಟ್ಟಣದ ಬಸ್ ಡಿಪೋನಲ್ಲಿ 76 ಬಸ್‌ಗಳಿದ್ದು ಚಾಲಕರು ಮತ್ತು ನಿರ್ವಾಹಕರು 152 ಜನರಿದ್ದಾರೆ. ನಿತ್ಯ 70 ಷೆಡ್ಯೂಲ್ ಬಸ್ ಸಂಚಾರ ನಡೆಯುತ್ತಿತ್ತು. ಸಾರಿಗೆ ನೌಕರರ ಮುಷ್ಕರದ ಪರಿಣಾಮ ಡಿಪೋನಿಂದ ಒಂದೇ ಒಂದು ಬಸ್‌ ರಸ್ತೆಗೆ ಇಳಿಯಲಿಲ್ಲ. ಅಹಿತಕರ ಘಟನೆಗಳು ನಡೆಯದಂತೆ ಡಿಪೋ ಮ್ಯಾನೇಜರ್ ಉಮಾ ಮಹೇಶ್ವರಿ ಡಿಪೋ ಬಾಗಿಲು ಬಂದ್ ಮಾಡಿಸಿ ಕಾವಲು ವ್ಯವಸ್ಥೆ ಮಾಡಿದ್ದರು. ಮತ್ತಷ್ಟು ಬಸ್‌ಗಳನ್ನು ಚಲಾಯಿಸದೆ ಸಾರಿಗೆ ಇಲಾಖೆಯ ಚಾಲಕರು ಬಸ್ ನಿಲ್ದಾಣದಲ್ಲಿಯೇ ಬಸ್‌ಗಳನ್ನು ಸಾಲಾಗಿ ನಿಲ್ಲಿಸಿ ಮುಷ್ಕರಕ್ಕೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದರು.

ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಖಾಸಗಿ ವಾಹನಗಳ ವ್ಯವಸ್ಥೆ ಮಾಡುವುದಾಗಿ ರಾಜ್ಯ ಸರ್ಕಾರ ಜನರಿಗೆ ಭರವಸೆ ನೀಡಿದ್ದರೂ ಅದು ಪೊಳ್ಳು ಭರವಸೆಯಾಗಿಯೇ ಉಳಿಯಿತು. ಸುಗಮ ಸಂಚಾರಕ್ಕಾಗಿ ಪಟ್ಟಣದ ಬಸ್ ಡಿಪೋ ಮೂಲಕ 54 ಖಾಸಗಿ ವಾಹನಗಳಿಗೆ ಬೇಡಿಕೆ ಸಲ್ಲಿಸಿದ್ದರೂ ಆರ್.ಟಿ.ಓ ಇಲಾಖೆ ಕೇವಲ 11 ವಾಹನಗಳ ವ್ಯವಸ್ಥೆ ಮಾಡಿತ್ತು. ಇದರಿಂದ ಸಾರ್ವಜನಿಕರಿಗೆ ಅಗತ್ಯ ಸಾರಿಗೆ ವ್ಯವಸ್ಥೆಯ ಕೊರತೆ ಎದುರಾಗಿತ್ತು. ಸಾರಿಗೆ ಇಲಾಖಾ ನೌಕರರ ಮುಷ್ಕರದ ಲಾಭ ಪಡೆದ ಖಾಸಗಿ ವಾಹನಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಒಳಗಿನಿಂದಲೇ ಪ್ರಯಾಣಿಕರನ್ನು ಹತ್ತಿಸಿಕೊಂಡು ಅವರು ತಲುಪಬೇಕಾದ ನಿರ್ದಿಷ್ಟ ಸ್ಥಳಗಳಿಗೆ ದುಬಾರಿ ಹಣ ಪಡೆದು ತಲುಪಿಸುತ್ತಿದ್ದದ್ದು ವಿಶೇಷವಾಗಿತ್ತು.