ಸಾರಾಂಶ
ಕನ್ನಡಪ್ರಭ ವಾರ್ತೆ, ಶೃಂಗೇರಿ
ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಆರಂಭಿಸಿರುವ ಮುಷ್ಕರದಿಂದ ಶೃಂಗೇರಿಯಲ್ಲಿ ಸರ್ಕಾರಿ ಬಸ್ ಇಲ್ಲದೇ ವಿದ್ಯಾರ್ಥಿಗಳು, ಜನಸಾಮಾನ್ಯರು ಪರದಾಡುವ ಪರಿಸ್ಥಿತಿ ಕಂಡುಬಂದಿತು.ಚಿಕ್ಕಮಗಳೂರು, ಶಿವಮೊಗ್ಗ, ಬೆಂಗಳೂರು, ಮೈಸೂರು,ಉಡುಪಿ ವಿವಿಧೆಡೆಗಳಿಗೆ ಸಂಚರಿಸುವ ಸರ್ಕಾರಿ ಬಸ್ ಗಳು ಸಂಚಾರ ಸ್ಥಗಿತಗೊಳಿಸಿ ನಿಲ್ದಾಣದಲ್ಲಿ ಸಾಲುಗಟ್ಟಿ ನಿಂತಿದ್ದವು. ಚಿಕ್ಕಮಗಳೂರು, ಕಡೂರು, ತರಿಕೇರೆ, ಬೀರೂರು ಮಾರ್ಗ ದಲ್ಲಿ ಹೆಚ್ಚಾಗಿ ಸರ್ಕಾರಿ ಬಸ್ ಗಳನ್ನೇ ಅವಲಂಬಿಸಿರುವುದರಿಂದ ಬಸ್ ನಿಲ್ದಾಣದಲ್ಲಿ ಜನ ಪರ ದಾಡುತ್ತಿದ್ದರು. ಸರ್ಕಾರಿ, ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು. ಚಿಕ್ಕಮಗಳೂರು, ಬಾಳೆಹೊನ್ನೂರು, ಜಯಪುರ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ ಗಳು ಕಡಿಮೆಯಿದೆ. ಹೆಚ್ಚಾಗಿ ಸರ್ಕಾರಿ ಬಸ್ ಗಳೇ ಇರುವುದರಿಂದ ಮುಷ್ಕರದ ಪರಿಣಾಮ ಬಸ್ ಇಲ್ಲದೆ ವಿದ್ಯಾರ್ಥಿಗಳಿಗೆ ಬರಲಾರದಂತಹ ಸ್ಥಿತಿ ಉಂಟಾಗಿದೆ
ಸರ್ಕಾರದ ಶಕ್ತಿ ಯೋಜನೆಯಡಿ ಉಚಿತ ಪ್ರಯಾಣದಿಂದ ದಿನನಿತ್ಯ ಸಾವಿರಾರು ಮಂದಿ ಶೃಂಗೇರಿಗೆ ಭೇಟಿ ನೀಡುತ್ತಿದ್ದು, ಮಂಗಳವಾರ ಜನ ಇರಲಿಲಲ್ಲ. ಕೆಲವರು ಬಸ್ ನಿಲ್ದಾಣದಲ್ಲಿ ಕಾಯುತ್ತಿರುವುದು ಕಂಡುಬಂದಿತು. ಸಾರಿಗೆ ಮುಷ್ಕರದಿಂದ ಅಗತ್ಯ ಕೆಲಸ ಕಾರ್ಯಗಳಿಗೆ ತೆರಳ ಬೇಕಾದವರಿಗೆ ಮಂಗಳವಾರ ಸಾಕಷ್ಟು ತೊಂದರೆಯಾಗಿತ್ತು.ಸದಾ ಪ್ರಯಾಣಿಕರಿಂದ ತುಂಬಿರುತ್ತಿದ್ದ ಬಸ್ ನಿಲ್ದಾಣದಲ್ಲಿ ಮಂಗಳವಾರ ಮುಷ್ಕರದ ಪರಿಣಾಮ ಪ್ರಯಾಣಿಕರ ಸಂಖ್ಯೆ ವಿರಳವಾಗಿತ್ತು. ಶೃಂಗೇರಿ ಪಟ್ಟಣ, ಶ್ರೀಮಠದಲ್ಲಿಯೂ ಸಂಖ್ಯೆ ಕಡಿಮೆಯಿತ್ತು. ಖಾಸಗಿ ಬಸ್ ಸಂಚಾರ, ಆಟೋ ಟ್ಯಾಕ್ಸಿಗಳ ಓಡಾಟ ಎಂದಿನಂತೆ ಇತ್ತು.
5 ಶ್ರೀ ಚಿತ್ರ 1-ಶೃಂಗೇರಿ ಬಸ್ ನಿಲ್ದಾಣದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಂಚಾರ ಸ್ಥಗಿತಗೊಳಿಸಿ ಸಾಲುಗಟ್ಟಿ ನಿಂತಿರುವ ಸರ್ಕಾರಿ ಬಸ್ ಗಳು.