ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಾರಿಗೆ ನೌಕರರ ಸಂಘ ಕರೆ ನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಾದ್ಯಂತ ಉತ್ತಮ ಬೆಂಬಲ ವ್ಯಕ್ತವಾಯಿತು. ಮಂಗಳವಾರ ಜಿಲ್ಲೆಯ ಎಲ್ಲೆಡೆ ಬಸ್ ಸಂಚಾರ ಬಂದ್ ಆಗಿದ್ದರಿಂದ ಪ್ರಯಾಣಿಕರು ಪರದಾಡಿದರು.ನಗರದಲ್ಲಿ ಸೋಮವಾರ ರಾತ್ರಿ ಅನ್ಯ ಡಿಪೋಗಳಲ್ಲಿ ಉಳಿದುಕೊಂಡಿದ್ದ ಬಸ್‌ಗಳು ಮಂಗಳವಾರ ಬೆಳಗ್ಗೆ ಪೊಲೀಸರ ಬೆಂಗಾವಲಿನಲ್ಲಿ ಘಟಕಕ್ಕೆ ಮರಳಿದ್ದು ಹೊರತುಪಡಿಸಿದರೆ ಇನ್ನುಳಿದಂತೆ ಬಸ್‌ಗಳ ಸಂಚಾರ ವಿರಳವಾಗಿತ್ತು. ಬಸ್ ನಿಲ್ದಾಣಗಳಿಂದ ಖಾಸಗಿ ವಾಹನಗಳು ಸಾರ್ವಜನಿಕರನ್ನು ತುಂಬಿಕೊಂಡು ಹೊರಟ್ಟಿದ್ದ ಚಿತ್ರಣ ಸಾಮಾನ್ಯವಾಗಿತ್ತು. ದೊಡ್ಡ ಊರುಗಳಿಗೆ ವಾಹನಗಳ ಸೌಕರ್ಯ ಇತ್ತಾದರೂ ಗ್ರಾಮೀಣ ಪ್ರದೇಶದಿಂದ ಬಂದಿದ್ದ ಜನರು ಬಸ್‌ಗಳಿಲ್ಲದೆ ಪರದಾಡಿದರು.
ಶಾಲಾ ಕಾಲೇಜು ವಿದ್ಯಾರ್ಥಿಗಳು ಬಸ್ ಇಲ್ಲದೆ ಪರದಾಡಿದರು. ಮಧ್ಯಾಹ್ನದವರೆಗೂ ಬಸ್ ದಾರಿ ಕಾಯ್ದು ಮಧ್ಯಾಹ್ನದ ನಂತರ ಬಸ್ ಸಂಚಾರ ಆರಂಭವಾದ ಬಳಿಕ ಊರುಗಳಿಗೆ ತೆರಳಿದರು.ಮುಧೋಳದಲ್ಲಿ ಬಸ್ ಸಂಚಾರ ಯಥಾಸ್ಥಿತಿ:
ಜಿಲ್ಲೆಯ ಮುಧೋಳ ಡಿಪೋದ 62 ಬಸ್‌ಗಳ ಪೈಕಿ 57 ಮಾರ್ಗದ ಬಸ್‌ಗಳು ಕಾರ್ಯನಿರ್ವಹಿಸಿದವು. ಇನ್ನುಳಿದಂತೆ ಬಾಗಲಕೋಟೆ ಡಿಪೋದಲ್ಲಿ 17, ಜಮಖಂಡಿ ಡಿಪೋದಲ್ಲಿ 7 ಬಸ್‌ಗಳು ಕಾರ್ಯರ್ವಹಿಸಿವೆ ಎಂದು ವಿಭಾಗೀಯ ಸಾರಿಗೆ ನಿಯಂತ್ರಣಾಧಿಕಾರಿಗಳು ಮಾಹಿತಿ ನೀಡಿದರು. ಬಹುತೇಕ ಕಡೆಗಳಲ್ಲಿ ಅನ್ಯ ಡಿಪೋಗಳಿಗೆ ತೆರಳಿದ್ದ ಬಸ್‌ಗಳೇ ಮಂಗಳವಾರ ಒಂದೇ ಟ್ರಿಪ್‌ನಲ್ಲಿ ಪ್ರಯಾಣಿಕರನ್ನು ತುಂಬಿಕೊಂಡು ಸ್ವಸ್ಥಾನಕ್ಕೆ ಮರಳಿದ್ದು ಬಿಟ್ಟರೆ ನಿತ್ಯದಂತೆ ಕಾರ್ಯನಿರ್ವಹಿಸಲಿಲ್ಲ.ಮುಧೋಳ ಹೊಳತುಪಡಿಸಿ ಜಿಲ್ಲಾ ಕೇಂದ್ರ ಸ್ಥಾನ ಬಾಗಲಕೋಟೆ, ಜಮಖಂಡಿ, ರಬಕವಿ-ಬನಹಟ್ಟಿ, ಬಾದಾಮಿ, ಇಳಕಲ್ಲ, ಹುನಗುಂದ, ಗುಳೇದಗುಡ್ಡ, ಬೀಳಗಿ ಸೇರಿದಂತೆ ಎಲ್ಲ ಘಟಕಗಳಲ್ಲಿ ಬಸ್ ಸಂಚಾರ ಸಂಪೂರ್ಣ ಸ್ತಬ್ಧಗೊಂಡಿತ್ತು. ಬಸ್ ನಿಲ್ದಾಣಗಳು ಬೀಕೋ ಎನ್ನುತ್ತಿದ್ದವು. ಮುಷ್ಕರದ ಕುರಿತು ಮೊದಲೇ ಮಾಹಿತಿ ನೀಡಿದ್ದರೂ ಸಹ ಕೆಲವು ಪ್ರಯಾಣಿಕರು ನಿಲ್ದಾಣಕ್ಕೆ ಆಗಮಿಸಿದ್ದರು. ಬಸ್‌ಗಳು ಇಲ್ಲ ಎನ್ನುವುದು ಗೊತ್ತಾಗುತ್ತಿದ್ದಂತೆ ಖಾಸಗಿ ವಾಹನಗಳಿಗೆ ಮೊರೆ ಹೋದರು.
ಆಸ್ಪತ್ರೆ, ಶಾಲಾ, ಕಾಲೇಜು, ಸಭೆ, ಸಮಾರಂಭ, ಶ್ರಾವಣ ಮಾಸದ ನಿಮಿತ್ತ ದೇವಸ್ಥಾನಗಳಿಗೆ ತೆರಳುತ್ತಿದ್ದ ಸಾರ್ವಜನಿಕರು ಬಸ್ ಇಲ್ಲದೆ ಪರದಾಡಿದರು. ಖಾಸಗಿ ವಾಹನಗಳು ಬಸ್ ನಿಲ್ದಾಣದಲ್ಲಿ ನಿಂತು ಪ್ರಯಾಣಿಕರನ್ನು ಕರೆದೊಯ್ದದವು. ಖಾಸಗಿ ವಾಹನಗಳೇ ಬೋರ್ಡ್ ಹಾಕಿಕೊಂಡು ಸಂಚಾರ ನಡೆಸಿದ್ದು ಕಂಡು ಬಂತು. ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳು ಪ್ರಯಾಣಿಕರಿಗೆ ಖಾಸಗಿ ವಾಹನಗಳಲ್ಲಿ ತೆರಳುವಂತೆ ಮಾರ್ಗದರ್ಶನ ಮಾಡುತ್ತಿದ್ದರು.ಬುಧವಾರ ಬೆಳಗ್ಗೆಯಿಂದ ಎಂದಿನಂತೆ ವಾಹನಗಳು ನಿಗದಿತ ರೂಟ್‌ಗಳಲ್ಲಿ ಸಂಚರಿಸಲಿವೆ ಎಂದು ಸಾರಿಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿಲ್ದಾಣದಲ್ಲೇ ನಿಂತ ಬಸ್ ಗಳು: ಬಾಗಲಕೋಟೆಯಲ್ಲಿ ಬೆಳಗಿನಿಂದಲೇ ಬಸ್ ಗಳು ಕಾರ್ಯಾಚರಣೆಗೆ ಇಳಿಯದ ಕಾರಣ ನಿಲ್ದಾಣದಲ್ಲಿಯೇ ನಿಂತಲ್ಲೇ ನಿಂತಿದ್ದವು. 500ಕ್ಕೂ ಅಧಿಕ ಬಸ್ ಗಳು ಜಿಲ್ಲೆಯಿಂದ ಹೊರ ಹೋಗಬೇಕಿತ್ತು. ಆದರೆ, ಬಹತೇಕ ಬಸ್‌ಗಳು ಸಂಚಾರ ನಡೆಸಲಿಲ್ಲ. ಮುಷ್ಕರ ಹಿನ್ನೆಲೆಯಲ್ಲಿ ನಿಲ್ದಾಣದ ಸುತ್ತ ಸೂಕ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.ರಾತ್ರಿ ಮಂಗಳೂರಿನಿಂದ ಬಿಟ್ಟು ಬೆಳಗ್ಗೆ ಬಂದ ಬಸ್ ಮಾತ್ರ ಬೀಳಗಿ ಕಡೆಗೆ ಪ್ರಯಾಣ ಬೆಳೆಸಿತ್ತು, ಮುಂಜಾಗ್ರತೆ ಕ್ರಮವಾಗಿ ನಿಲ್ದಾಣದ ಸುತ್ತಮುತ್ತ 1ಕಿಮೀ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ನಿಲ್ದಾಣಗಳಲ್ಲಿ ಪೊಲೀಸರು ಬೀಡುಬಿಟ್ಟಿದ್ದರು.
ನಿಲ್ದಾಣದೊಳಗೆ ಖಾಸಗಿ ವಾಹನಗಳು: ಆರ್.ಟಿ.ಒ ಅಧಿಕಾರಿಗಳು ಮತ್ತು ಪೊಲೀಸರ ಭದ್ರತೆಯಲ್ಲಿ ಬಸ್ ನಿಲ್ದಾಣದಲ್ಲಿ ಖಾಸಗಿ ವಾಹನಗಳು ನಿಲ್ದಾಣದೊಳಗೆ ನಿಂತಿದ್ದವು. ಬಾಗಲಕೋಟೆ ಕೇಂದ್ರ ಬಸ್ ನಿಲ್ದಾಣದಲ್ಲಿ ಬಂದು ಖಾಸಗಿ ಲಕ್ಸುರಿ ಬಸ್ ಮತ್ತು ಕ್ರೂಸರ್ ವಾಹನಗಳಲ್ಲಿ ಬಾಗಲಕೋಟೆಯಿಂದ ಬೇರೆ ಬೇರೆ ಊರುಗಳಿಗೆ ಪ್ರಯಾಣಿಕರು ತೆರಳಿದರು. ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳ ಸೂಚನೆ ಹಿನ್ನೆಲೆ ಖಾಸಗಿ ವಾಹನಗಳು ಪ್ರಯಾಣಿಕರಿಂದ ಬಸ್ ದರ ಇದ್ದಷ್ಟೆ ಪಡೆದು ಸೇವೆ ನೀಡಿದವು.