ಸಾರಾಂಶ
ಕನ್ನಡಪ್ರಭ ವಾರ್ತೆ ರಾಯಚೂರು
ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರಯಾಣಿಕರು ಇಡೀ ದಿನ ಪರದಾಡಿದ ಘಟನೆಗಳು ಮಂಗಳವಾರ ಘಟಿಸಿದವು.ಜಿಲ್ಲಾ ಕೇಂದ್ರವಾದ ರಾಯಚೂರು ನಗರ ಸೇರಿದಂತೆ ವಿವಿಧ ತಾಲೂಕು ಹಾಗೂ ಗ್ರಾಮೀಣ ಭಾಗದಲ್ಲಿ ಮುಷ್ಕರದ ಬಿಸಿ ಬೆಳಗ್ಗೆಯಿಂದಲೇ ಆರಂಭ ಕಂಡಿತು. ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿಲ್ಲುತ್ತಿದ್ದ ನೂರಾರು ಬಸ್ಗಳು ಮರೆಯಾಗಿದ್ದವು. ವಿವಿಧ ಪ್ರದೇಶಗಳಿಗೆ ತೆರಳಲು ನಿಲ್ದಾಣಕ್ಕೆ ಆಗಮಿಸಿದ್ದ ಜನರು ಕಾದು ಕಾದು ಸುಸ್ತಾದರು. ಜಿಲ್ಲೆಯಲ್ಲಿ ನಿತ್ಯ 380 ಬಸ್‌ಳನ್ನು ಓಡಿಸಲಾಗುತ್ತಿದ್ದು ಮುಷ್ಕರ ಹಿನ್ನೆಲೆಯಲ್ಲಿ ನಗರ ಸೇರಿ ಸುತ್ತ ಮುತ್ತಲಿನ ಊರುಗಳಿಗೆ 170 ಬಸ್‌ಗಳನ್ನು ಬಿಡಲಾಗಿತ್ತು. ಶೇ.49 ರಷ್ಟು ಮಾತ್ರ ಬಸ್‌ಗಳನ್ನು ಚಲಾಯಿಸಲಾಯಿತು.
ಖಾಸಗಿ ದುಬಾರಿ ಹಣ ವಸೂಲಿ: ಮುಷ್ಕರ ಹಿನ್ನೆಲೆಯಲ್ಲಿ ಪ್ರಯಾಣಿಕರ ಪರದಾಟದ ಲಾಭ ಪಡೆದ ಖಾಸಗಿ ವಾಹನ ಚಾಲಕರು ದುಬಾರಿ ಹಣವನ್ನು ಪಡೆದು ಊರುಗಳಿಗೆ ಬಿಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿ ಕಂಡುಬಂದವು.ಬಸ್‌ಗಳು ಇಲ್ಲದೆ ನಿಲ್ದಾಣ ಬಿಕೋ
ಸಿಂಧನೂರು: ನಗರದ ಬಸ್ ನಿಲ್ದಾಣ ಬಸ್‌ಗಳು ಇಲ್ಲದೆ ಬಿಕೋ ಎನ್ನುತ್ತಿತ್ತು. ದೂರದೂರಿನ ಬಸ್‌ಗಳು ಡಿಪೋ ಮುಂದೆ ನಿಂತಿದ್ದವು. ಆದರೆ ಪ್ರಯಾಣಿಕರು ಪರದಾಡುವುದು ಕಂಡುಬಂತು.ಬೆಳಿಗ್ಗೆಯಿಂದ ಕೆಲ ಬಸ್‌ಗಳು ಮಾತ್ರ ವಿವಿಧ ಊರುಗಳಿಗೆ ತೆರಳಿದವು. ಸಾರಿಗೆ ಸಂಸ್ಥೆಯ ಖಾಯಂ ನೌಕರರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಗುತ್ತಿಗೆ ಆಧಾರದ ಮೇಲೆ ನೇಮಕವಾಗಿದ್ದ ನೌಕರರು ಕರ್ತವ್ಯ ನಿರ್ವಹಿಸಿದರು. ಆಗಸ್ಟ್ 4ರಂದು ವಿವಿಧ ಕಡೆಗೆ ಕರ್ತವ್ಯದ ಮೇಲೆ ತೆರಳಿದ್ದ ಕಂಡಕ್ಟರ್ ಮತ್ತು ಡ್ರೆöÊವರ್ಗಳು ಪ್ರಯಾಣಿಕರಿಂದ ಸಂಗ್ರಹಿಸಿದ್ದ ಹಣವನ್ನು ಸ್ವೀಕರಿಸದೆ ಮಂಗಳವಾರವೂ ಒತ್ತಾಯಪೂರ್ವಕವಾಗಿ ತಮಗೆ ಕರ್ತವ್ಯ ನಿಭಾಯಿಸುವಂತೆ ಹೇಳಿದ್ದರಿಂದ ತಾವು ಕರ್ತವ್ಯದಲ್ಲಿ ಭಾಗವಹಿಸಿ ರುವುದಾಗಿ ನೌಕರರು ತಮ್ಮ ಅಳಲು ತೋಡಿಕೊಂಡರು.
ನಗರದ ಸಾರಿಗೆ ಘಟಕದಲ್ಲಿ 98 ಬಸ್‌ಗಳಿದ್ದು, 93 ರೂಟ್‌ಗಳಿವೆ. ಬೆಳಿಗ್ಗೆ 30 ಬಸ್‌ಗಳನ್ನು ರೂಟ್‌ಗೆ ಕಳಿಸಲಾಗಿದೆ. 25 ಬಸ್‌ಗಳು ಸಂಚರಿಸದೆ ಡಿಪೋದಲ್ಲಿ ನಿಂತಿವೆ, 30 ಡ್ರೈವರ್, 30 ಕಂಡಕ್ಟರ್ ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ಸಾರಿಗೆ ಘಟಕ ವ್ಯವಸ್ಥಾಪಕ ಹೊನ್ನಪ್ಪ ತಿಳಿಸಿದರು.ನಗರ ಪೊಲೀಸ್ ಠಾಣೆಯ ಪಿ.ಐ.ದುರ್ಗಪ್ಪ ಡೊಳ್ಳಿನ್ ಹಾಗೂ ಸಂಚಾರಿ ಪೊಲೀಸ್ ಠಾಣೆಯ ಎ.ಎಸ್.ಐ ಅಶೋಕ ಮತ್ತು ಸಿಬ್ಬಂದಿ ದೂರದ ಊರುಗಳಿಗೆ ಹೋಗುವ ಪ್ರಯಾಣಿಕರಿಗೆ ಬಸ್ ಹಾಗೂ ಖಾಸಗಿ ವಾಹನಗಳ ಅನುಕೂಲ ಮಾಡಿಕೊಟ್ಟರು.