ಪೌರಕಾರ್ಮಿಕರ ತಲೆ ಮೇಲೆ ಮಲ ಹೊರಿಸಿ ಸಾಗಾಣಿಕೆ

| Published : Apr 17 2024, 01:25 AM IST

ಸಾರಾಂಶ

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಪೌರಕಾರ್ಮಿಕರ ತಲೆಯ ಮೇಲೆ ಮಲ ಹೊರಿಸಿ ಸಾಗಾಣಿಕೆ ಎಂಬ ಸಾರ್ವಜನಿಕರ ದೂರಿನ‌ ಅನ್ವಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ‌‌ ನೀಡಿ ಪರಿಶೀಲಿಸಿದ್ದಾರೆ.

ಕನ್ನಡಪ್ರಭವಾರ್ತೆ ಹನೂರು

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಪೌರಕಾರ್ಮಿಕರ ತಲೆಯ ಮೇಲೆ ಮಲ ಹೊರಿಸಿ ಸಾಗಾಣಿಕೆ ಎಂಬ ಸಾರ್ವಜನಿಕರ ದೂರಿನ‌ ಅನ್ವಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭೇಟಿ‌‌ ನೀಡಿ ಪರಿಶೀಲಿಸಿದ್ದಾರೆ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಶೌಚಾಲಯದ ಬಳಿ ಮಲ ಹಾಗೂ ತ್ಯಾಜ್ಯವನ್ನು ಯಂತ್ರದಿಂದ ಹೊರ ತೆಗೆದು ದೂರ ಸಾಗಿಸುವಾಗ ಯಂತ್ರದಿಂದ ಸೋರಿಕೆಯಾಗಿ ರಸ್ತೆಯಲ್ಲಿ ಹರಡಲಾಗಿತ್ತು. ಇದರಿಂದ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಇತ್ತು. ಬಳಿಕ ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಪೌರಕಾರ್ಮಿಕ ನೆರವಿನಿಂದ ರಸ್ತೆಯಲ್ಲಿ ಚೆಲ್ಲಿ ಹೋಗಿದ್ದ ಶೌಚಾಲಯದ ಮಲ ಮತ್ತು ತ್ಯಾಜ್ಯವನ್ನು ಪೌರ ಕಾರ್ಮಿಕರ ಮೂಲಕ ಪ್ಲಾಸ್ಟಿಕ್ ಬಾಂಡಲಿಯಿಂದ ತೆಗೆಸಲಾಗಿದೆ ಎಂಬ ದೂರಿನನ್ವಯ ಸಮಾಜ ಕಲ್ಯಾಣ ಇಲಾಖೆ ಪ್ರಕರಣವನ್ನುಗಂಭೀರವಾಗಿ ಪರಿಗಣಿಸಿ ಘಟನಾ ಸ್ಥಳಕ್ಕೆ ಆಗಮಿಸಿದ ಸಮಾಜ ಕಲ್ಯಾಣ ಇಲಾಖೆ ನೋಡಲ್ ಅಧಿಕಾರಿ ಜನಾರ್ದನ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ ಬಿ, ಹನೂರು ತಹಸೀಲ್ದಾರ ವೈ.ಕೆ ಗುರುಪ್ರಸಾದ್, ಇಂಜಿನಿಯರ್ ತನುಜ್, ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಧರ್ ಹಾಗೂ ಪೌರ ಕಾರ್ಮಿಕರಿಂದ ಮಾಹಿತಿ ಪಡೆದುಕೊಂಡರು.

ಪ್ರಕರಣದ ಬಗ್ಗೆ ಸರ್ಕಾರಕ್ಕೆ ಎರಡು ದಿನಗಳಲ್ಲಿ ಸಮಗ್ರ ಮಾಹಿತಿ ನೀಡುವ ಸಲುವಾಗಿ ಅಧಿಕಾರಿಗಳ ತಂಡ ಘಟನೆಯ ಬಗ್ಗೆ ವರದಿ ಸಿದ್ದಪಡಿಸುತ್ತಿದೆ. ಈ ನಡುವೆ ಹನೂರು ಪಟ್ಟಣ ಪೊಲೀಸ್ ಠಾಣೆಯಲ್ಲಿ ತನಿಖಾ ತಂಡದವರು ಕರ್ತವ್ಯ ಲೋಪ ಹಾಗೂ ಪೌರ ಕಾರ್ಮಿಕರ ತಲೆ ಮೇಲೆ ಮಲ ಹೊರಿಸಿ ಸಾಗಾಣಿಕೆ ಮಾಡಿದ ಆರೋಪದ ಮೇಲೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಶ್ರೀಧರ್ ಹಾಗೂ ಆರೋಗ್ಯ ನಿರೀಕ್ಷಕಿ ಭೂಮಿಕಾ ಅವರ ವಿರುದ್ದ ದೂರು ದಾಖಲಿಸಿದ್ದಾರೆ.