ಸಾರಾಂಶ
ಕುಮಟಾ: ಕ್ಷೇತ್ರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪಿಸಬೇಕೆಂಬ ನಮ್ಮ ಪ್ರಯತ್ನಕ್ಕೆ ಪ್ರಸ್ತುತ ಸರ್ಕಾರದ ಧೋರಣೆಯಿಂದ ಹಿನ್ನಡೆಯಾಗಿದ್ದರೂ ಜಿಲ್ಲೆಯ ಮೊಟ್ಟ ಮೊದಲ ಟ್ರಾಮಾ ಸೆಂಟರ್ ನಿರ್ಮಾಣದ ಹೋರಾಟ ಸಾಕಷ್ಟು ಅಡೆತಡೆಗಳ ನಡುವೆಯೂ ಯಶಸ್ವಿಯಾಗಿದ್ದು ಶೀಘ್ರ ಪೂರ್ಣಗೊಳ್ಳಲಿದೆ ಎಂದು ಶಾಸಕ ದಿನಕರ ಶೆಟ್ಟಿ ತಿಳಿಸಿದರು.
ತಾಲೂಕಾಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರಿಸಿ, ಬಿಇಎಲ್ ಕಂಪನಿಯ ಸಿಎಸ್ಆರ್ ನಿಧಿಯಡಿ ₹೨.೭೪ ಕೋಟಿ ವೆಚ್ಚದಲ್ಲಿ ೨೦೨೨ರಲ್ಲಿ ಆರಂಭಗೊಂಡ ಟ್ರಾಮಾ ಸೆಂಟರ್ ಕಾರ್ಯ ಒಂದು ಹಂತದಲ್ಲಿ ಗುತ್ತಿಗೆದಾರನ ಸಮಸ್ಯೆಯಿಂದ ನಿಂತಿತ್ತು. ಸಮಸ್ಯೆಗೆ ಕಾರಣವಾದ ಗುತ್ತಿಗೆ ಕಂಪನಿಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದ್ದು ಬಾಕಿ ಉಳಿದಿದ್ದ ಕಾಮಗಾರಿಗೆ ಈಗ ಪುನಃ ಟೆಂಡರ್ ಕರೆದು ಹೊಸ ಗುತ್ತಿಗೆ ನೀಡಲಾಗಿದೆ. ಟ್ರಾಮಾ ಸೆಂಟರ್ನ ಉಳಿದೆಲ್ಲ ಕಾಮಗಾರಿ ಮುಗಿದಿದ್ದು ಲಿಫ್ಟ್ ಅಳವಡಿಕೆ ಮಾತ್ರ ಬಾಕಿ ಇದೆ. ಟ್ರಾಮಾ ಸೆಂಟರ್ನ ಪ್ರಯೋಗಾಲಯ ಹಾಗೂ ಇತರ ಸಲಕರಣೆಗಳು ಈಗಾಗಲೇ ಬಂದಿದೆ ಎಂದರು.ಉಳಿದಂತೆ ಸರ್ಕಾರದ ಮುಂದೆ ಟ್ರಾಮಾ ಸೆಂಟರ್ಗೆ ಅಗತ್ಯ ವೈದ್ಯರು ಸಿಬ್ಬಂದಿ ನೇಮಕಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ನಮ್ಮ ಬೇಡಿಕೆಯಲ್ಲಿ ಅತಿ ಅಗತ್ಯವಿರುವ ಎಲುಬು, ಕೀಲುತಜ್ಞರು, ಅರವಳಿಕೆ ತಜ್ಞ, ಶುಷ್ರೂಷಕರು, ಪ್ರಯೋಗಾಲಯ ತಂತ್ರಜ್ಞರ ತಲಾ ಒಂದು ಹುದ್ದೆ ನೇಮಕಕ್ಕೆ ಸರ್ಕಾರ ಹಣಕಾಸು ಇಲಾಖೆ ಅನುಮತಿಸಿದೆ. ಅದರಂತೆ ಮೂಲತಃ ಕೋಡ್ಕಣಿಯ ಅನುಭವಿ ಎಲುಬು ಕೀಲು ತಜ್ಞ ಡಾ. ದೀಪಕ ನಾಯ್ಕ ಟ್ರಾಮಾ ಸೆಂಟರ್ ಗೆ ಸೇವೆ ನೀಡಲು ಒಪ್ಪಿದ್ದು ಅರವಳಿಕೆ ತಜ್ಞರ ನಿಯುಕ್ತಿ ಸದ್ಯವೇ ಮಾಡಲಾಗುವುದು. ಯಾವುದೇ ಆವಘಡ-ಅಪಘಾತ ಸಂದರ್ಭದಲ್ಲಿ ಜೀವವುಳಿಸುವ ನಿಟ್ಟಿನಲ್ಲಿ ಟ್ರಾಮಾ ಸೆಂಟರ್ ಕಾರ್ಯ ಮಹತ್ವದ್ದಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಏಕೈಕ ಟ್ರಾಮಾ ಸೆಂಟರ್ ಕುಮಟಾದಲ್ಲಿ ತೆರೆಯುವ ನಮ್ಮ ಸತತ ಹೋರಾಟದಿಂದ ಒಂದೆರಡು ತಿಂಗಳಲ್ಲಿ ಜನಸೇವೆಗೆ ಸಜ್ಜಾಗುತ್ತಿದೆ ಎಂದರು.
ತಾಲೂಕಾಸ್ಪತ್ರೆಯಲ್ಲಿ ಡ್ರೈನೇಜ್ ಸಮಸ್ಯೆ ನಿವಾರಣೆಗಾಗಿ ರೋಟರಿ ಕ್ಲಬ್ ಸಹಯೋಗದಲ್ಲಿ ₹೨೮ ಲಕ್ಷ ವೆಚ್ಚದಲ್ಲಿ ಕೊಳಚೆ ಶುದ್ಧೀಕರಣ ಘಟಕ ಅಳವಡಿಸುವ ಕಾರ್ಯ ಪ್ರಗತಿಯಲ್ಲಿದೆ. ನಮ್ಮ ತಾಲೂಕಾಸ್ಪತ್ರೆಯಲ್ಲಿ ಉತ್ತಮ ವೈದ್ಯಕೀಯ ಸೇವೆ ಇದೆ. ಐಸಿಯು, ಡಯಾಲಿಸಿಸ್, ವೆಂಟಿಲೇಟರ್ ಸಹಿತ ಸಕಲ ಸೌಲಭ್ಯಗಳು ಇದೆ ಎಂದರು.ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ ಮಾತನಾಡಿ, ಶಾಸಕರ ನಿರಂತರ ಪ್ರಯತ್ನ ಮಾತ್ರದಿಂದಲೇ ಸಾಧ್ಯವಾಗಿರುವ ಟ್ರಾಮಾ ಸೆಂಟರ್ನ ಕೆಳಮಹಡಿಯಲ್ಲಿ ೭ ಹಾಸಿಗೆಯ ತುರ್ತು ಚಿಕಿತ್ಸಾ ಘಟಕ, ಮೇಲಂತಸ್ತಿನಲ್ಲಿ ಶಸ್ತ್ರಚಿಕಿತ್ಸಾ ವ್ಯವಸ್ಥೆ ಇರಲಿದೆ. ಲಿಫ್ಟ ಅಳವಡಿಕೆಯ ಬಳಿಕ ಪ್ರಯೋಗಾಲಯ ಹಾಗೂ ಶಸ್ತ್ರಚಿಕಿತ್ಸೆ ಸಂಬಂಧಿತ ಯಂತ್ರೋಪಕರಣಗಳನ್ನು ಅಳವಡಿಸಲಾಗುವುದು. ಶಾಸಕ ದಿನಕರ ಶೆಟ್ಟಿ ಅವರ ನಿರಂತರ ಪ್ರಯತ್ನದ ಫಲವಾಗಿ ಟ್ರಾಮಾ ಸೆಂಟರ್ ಅಂತೂ ಲೋಕಾರ್ಪಣೆಗೆ ಸಿದ್ಧವಾಗುತ್ತಿರುವುದು ಸಂತೋಷದ ಸಂಗತಿ ಎಂದರು.
ಡಾ. ಶ್ರೀನಿವಾಸ ನಾಯಕ, ಡಾ. ಪಾಂಡುರಂಗ ದೇವಾಡಿಗ, ಡಾ.ಕೃಷ್ಣಾನಂದ ಪೈ ಇತರರು ಇದ್ದರು.