ಪ್ರಯಾಣ ಬಲು ಹಿಂಸೆ ಜೀವ ಹಿಂಡುತ್ತಿದೆ ರಸ್ತೆ

| Published : Mar 17 2025, 12:32 AM IST

ಸಾರಾಂಶ

ಗುಳೇದಗುಡ್ಡ ತಾಲೂಕಿನ ನಾಗರಾಳ ಎಸ್.ಪಿ. ಗ್ರಾಮದಿಂದ ಚಿಮ್ಮಲಗಿ, ಮಂಗಳಗುಡ್ಡ, ಕಾಟಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಹಲವು ತಿಂಗಳುಗಳೇ ಕಳೆದರೂ ಪಿಡಬ್ಲ್ಯುಡಿ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.

ಡಾ.ಸಿ.ಎಂ. ಜೋಶಿ

ಕನ್ನಡಪ್ರಭ ವಾರ್ತೆ ಗುಳೇದಗುಡ್ಡ

ತಾಲೂಕಿನ ನಾಗರಾಳ ಎಸ್.ಪಿ. ಗ್ರಾಮದಿಂದ ಚಿಮ್ಮಲಗಿ, ಮಂಗಳಗುಡ್ಡ, ಕಾಟಾಪುರ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕೂಡು ರಸ್ತೆ ಕಾಮಗಾರಿ ಅರ್ಧಕ್ಕೆ ನಿಂತು ಹಲವು ತಿಂಗಳುಗಳೇ ಕಳೆದರೂ ಪಿಡಬ್ಲ್ಯುಡಿ ಅಧಿಕಾರಿಗಳು, ಜನಪ್ರತಿನಿಧಿಗಳು ಮೌನಕ್ಕೆ ಶರಣಾಗಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಮಲಪ್ರಭಾ ನದಿ ಆಚೆ ಕಾಟಾಪುರ, ಮಂಗಳಗುಡ್ಡ ಮತ್ತು ಚಿಮ್ಮಲಗಿ ಗ್ರಾಮಗಳು ಗುಳೇದಗುಡ್ಡ ತಾಲೂಕಿನ ವ್ಯಾಪ್ತಿಗೆ ಸೇರುತ್ತವೆ. ಈ ಭಾಗದ ಜನ ತಾಲೂಕು ಕೇಂದ್ರಕ್ಕೆ ವ್ಯವಹಾರ, ವ್ಯಾಪಾರ, ಆಸ್ಪತ್ರೆ ಹೀಗೆ ವಿವಿಧ ಅಗತ್ಯ ಕಾರ್ಯಗಳಿಗೆ ಬಂದು ಹೋಗಲು ವರ್ಷದಿಂದ ಅಸಾಧ್ಯವೆಂಬಂತಾಗಿದೆ.

ಪ್ರಯಾಣಕ್ಕೆ ನಿತ್ಯ ನರಕಯಾತನೆ: ₹ 50 ಲಕ್ಷಕ್ಕೂ ಅಧಿಕ ಅನುದಾನದಲ್ಲಿ 4 ಕಿ.ಮಿ. ರಸ್ತೆ ಕಾಮಗಾರಿ ಮಾಡಲಾಗುತ್ತಿದೆ. ವರ್ಷದ ಹಿಂದೆಯೇ ಲೋಕೋಪಯೋಗಿ ಇಲಾಖೆ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಂಡರೂ ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ಮುಹೂತ್ರ ಕೂಡಿಬರುತ್ತಿಲ್ಲ.

ರಸ್ತೆ ಅಗೆದು ಖಡಿ ಹಾಕಿ ಹೋಗಿದ್ದಾರೆ, 4 ಕಿಮೀ ರಸ್ತೆ ಕ್ರಮಿಸಲು ಅರ್ಧ ಗಂಟೆ ಸಮಯ ಹಿಡಿಯುತ್ತದೆ. ಈ ರಸ್ತೆಯಲ್ಲಿ ಪ್ರಯಾಣಿಸುವುದು ವಾಹನ ಸವಾರರಿಗೆ ನಿತ್ಯ ನರಕಯಾತನೆ ಆಗಿದೆ. ದ್ವಿಚಕ್ರವಾಹನ ಸವಾರರಂತೂ ಕೈಯಲ್ಲಿ ಜೀವ ಹಿಡಿದುಕೊಂಡೇ ಪ್ರಯಾಣಿಸುವ ಸ್ಥಿತಿ ಇದೆ. ಖಡಿಗಳ ಮಧ್ಯೆ ದ್ವಿಚಕ್ರವಾಹನ ಬ್ಯಾಲೆನ್ಸ್‌ ಹಿಡಿದು ಸಾಗುವುದು ಹರಸಾಹಸವೇ ಆಗಿದೆ. ಸ್ವಲ್ಪ ಯಾಮಾರಿದರೂ ಸ್ಕಿಡ್‌ ಆಗೋದು ಗ್ಯಾರಂಟಿ. ಇಂತಹ ಅಪಘಾತದಲ್ಲಿ ಅನೇಕ ಬೈಕ್‌ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳಿವೆ.

ರಾತ್ರಿ ಪ್ರಯಾಣ ಅಪಾಯಕಾರಿ:

ಇನ್ನು ನಾಲ್ಕು ಚಕ್ರಗಳ ವಾಹನ ಸವಾರರದೂ ಅದೇ ಸ್ಥಿತಿ. ವೇಗವಾಗಿ ಚಲಿಸಿದರೆ ಟಯರ್‌ ಗೆ ಹಾನಿ ಆಗುವ ಆತಂಕ. ಜೊತೆಗೆ ವಾಹನದಲ್ಲಿ ಹೋಗುವುದು ಚಕ್ಕಡಿಯಲ್ಲಿ ಹೋದಂತಹ ಅನುಭವ ಆಗುತ್ತದೆ. ರಾತ್ರಿ ಹೊತ್ತು ಈ ರಸ್ತೆ ಮೇಲೆ ಪ್ರಯಾಣಿಸುವುದು ಮಾತ್ರ ಅಸಾಧ್ಯವಾದ ಮಾತು.

ಸಂಜೆ ಆದರೆ ಸಾಕು, ನಾಗರಾಳ ಗ್ರಾಮದಿಂದ ಸಂಚರಿಸುವವರು ಪಟ್ಟದಕಲ್ಲ ಮೂಲಕ ಹೋಗಬಹುದಾದರೂ 3 ಕಿ.ಮೀ. ಪ್ರಯಾಣದ ಬದಲಿಗೆ 15 ಕಿ.ಮೀ.ಸುತ್ತು ಹಾಕಿಕೊಂಡು ಹೋಗಬೇಕಾಗುತ್ತದೆ. ಅನಿವಾರ್ಯ ಎಂದು ಈ ರಸ್ತೆ ಮೂಲಕ ಸಂಚರಿಸಿದರೆ ಏನಾದರೂ ಅನಾಹುತ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ ಗ್ರಾಮಸ್ಥರು.

ಜಾತ್ರೆಗಾದರೂ ಕಾಮಗಾರಿ ಮುಗಿಸಿ: ಪ್ರತಿ ಮೂರು ವರ್ಷಕ್ಕೊಮ್ಮೆ ಮಂಗಳಗುಡ್ಡ ಮಂಗಳಾದೇವಿ ಜಾತ್ರೆ ಮಾರ್ಚ್ ಕೊನೆಯವಾರ ಸುಮಾರು ಇಪ್ಪತ್ತು ದಿನಗಳವರೆಗೆ ಅದ್ಧೂರಿಯಾಗಿ ನಡೆಯುತ್ತದೆ. ರಾಜ್ಯದ ಬೇರೆ ಬೇರೆ ಕಡೆಗಳಿಂದ ಲಕ್ಷಕ್ಕೂ ಅಧಿಕ ಭಕ್ತರು ಜಾತ್ರೆಗೆ ಬರುತ್ತಾರೆ. ಹೆಚ್ಚಿನ ಭಕ್ತರು ಇದೇ ರಸ್ತೆಯ ಮೂಲಕ ಪ್ರಯಾಣಿಸಬೇಕು. ರಸ್ತೆ ಸ್ಥಿತಿ ನೋಡಿ ಅನೇಕ ಭಕ್ತರು ಜಾತ್ರೆಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಈ ವರ್ಷ ಮಾರ್ಚ್‌ ಕೊನೆಯ ವಾರ ಜಾತ್ರೆ ಇದ್ದು, ಅಷ್ಟರೊಳಗೆ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ಅದು ಸಾಧ್ಯವಾಗದಿದ್ದರೆ ಕನಿಷ್ಠಪಕ್ಷ ಖಡಿಯ ಮೇಲೆ ಮಣ್ಣು ಹಾಕುವ ಕಾಮಗಾರಿಯನ್ನಾದರೂ ಮಾಡಬೇಕು ಎಂದು ಮಂಗಳಗುಡ್ಡ ಗ್ರಾಪಂ ಮಾಜಿ ಅಧ್ಯಕ್ಷೆ ನೇತ್ರಾ ಮಂಜುನಾಥ ಪಾಟೀಲ ಆಗ್ರಹಿಸಿದ್ದಾರೆ.ರಸ್ತೆ ಕಾಮಗಾರಿ ಸ್ಥಗಿತಗೊಳಿಸಿದ್ದರಿಂದ ಬೈಕ್ ಸವಾರರಿಗೆ ತೊಂದರೆಯಾಗಿದೆ. ರಾತ್ರಿಯಂತೂ ಈ ರಸ್ತೆ ಮೇಲೆ ಪ್ರಯಾಣಿಸುವುದು ಅಪಾಯಕ್ಕೆ ಆಹ್ವಾನ ನೀಡಿದಂತೆ. ಗುಳೇದಗುಡ್ಡ ತಾಲೂಕು ಕೇಂದ್ರ ಸ್ಥಳಕ್ಕೆ ಬರಲು ಇದೊಂದೇ ದಾರಿ. ನಿತ್ಯ ನರಕಯಾತನೆ ಅನುಭವಿಸುತ್ತಿದ್ದೇವೆ. ಶೀಘ್ರ ರಸ್ತೆ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳು ಕ್ರಮಕೈಗೊಳ್ಳಬೇಕು.

-ಮಲ್ಲು ಹುನಗುಂಡಿ ಚಿಮ್ಮಲಗಿ ಗ್ರಾಮಒಬ್ಬ ರೈತ ರಸ್ತೆ ಕಾಮಗಾರಿ ವಿರೋಧಿಸಿದ್ದಾರೆ. ಅಲ್ಲದೆ ಹಲವು ತಾಂತ್ರಿಕ ಕಾರಣಗಳಿಂದ ಈ ರಸ್ತೆ ಕಾಮಗಾರಿ ಸ್ಥಗಿತಗೊಳಿಸಲಾಗಿದೆ. ಆದಷ್ಟು ಬೇಗ ಕಾಮಗಾರಿ ಆರಂಭಿಸುತ್ತೇವೆ.

- ವೈ.ಎಫ್. ಆಡಿನ ಸಹಾಯಕ ಎಂಜಿನಿಯರ್‌, ಪಿಡಬ್ಲ್ಯುಡಿ ಬಾದಾಮಿ