ಸಾರಾಂಶ
ತಾಲೂಕಿನ ವಿವಿಧೆಡೆಗಳಿಂದ ನಗರದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಬಸ್‌ಗಳಲ್ಲಿ ಜೋತು ಬಿದ್ದು ಪ್ರಯಾಣ ಮಾಡುವಂತಾಗಿದ್ದು, ಆಯ ತಪ್ಪಿದರೆ ಪ್ರಾಣಕ್ಕೆ ಕುತ್ತಾಗುವ ಆತಂಕ ಎದುರಾಗಿದೆ.
ಅಸಮರ್ಪಕ ಸಾರಿಗೆ ವ್ಯವಸ್ಥೆ, ಆಯ ತಪ್ಪಿದರೆ ವಿದ್ಯಾರ್ಥಿಗಳ ಪ್ರಾಣಕ್ಕೆ ಕುತ್ತು
ಮನವಿ ನೀಡಿದರೂ ಆಗದ ಪ್ರಯೋಜನಎಚ್. ಮಲ್ಲಿಕಾರ್ಜುನಕನ್ನಡಪ್ರಭ ವಾರ್ತೆ ಸಿರುಗುಪ್ಪ
ತಾಲೂಕಿನ ವಿವಿಧೆಡೆಗಳಿಂದ ನಗರದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಬಸ್‌ಗಳಲ್ಲಿ ಜೋತು ಬಿದ್ದು ಪ್ರಯಾಣ ಮಾಡುವಂತಾಗಿದ್ದು, ಆಯ ತಪ್ಪಿದರೆ ಪ್ರಾಣಕ್ಕೆ ಕುತ್ತಾಗುವ ಆತಂಕ ಎದುರಾಗಿದೆ.ತಾಲೂಕು ಕೇಂದ್ರ ಹಾಗೂ ಬಳ್ಳಾರಿ ಜಿಲ್ಲಾ ಕೇಂದ್ರಕ್ಕೆ ತೆರಳಲು ಗ್ರಾಮೀಣ ಭಾಗದ ಬಹುತೇಕ ಪ್ರದೇಶಗಳಿಂದ ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಇಲ್ಲದಿರುವುದೇ ಇಂತಹ ಸ್ಥಿತಿಗೆ ಕಾರಣ. ಒಮ್ಮೊಮ್ಮೆ ವಿದ್ಯಾರ್ಥಿನಿಯರು ಸಹ ಜಾಗವಿಲ್ಲದೆ ಬಸ್‌ನ ಬಾಗಿಲಲ್ಲೇ ನಿಂತು ಪ್ರಯಾಣಿಸುವ ದೃಶ್ಯಗಳು ಕಂಡು ಬರುತ್ತಿದೆ. ವಿದ್ಯಾರ್ಥಿಗಳಿಗೆ ಸಮರ್ಪಕ ಬಸ್ ಸೌಕರ್ಯ ಕಲ್ಪಿಸದ ಕ.ಕ.ರಾ. ರಸ್ತೆ ಸಾರಿಗೆ ಇಲಾಖೆಯ ಕಾರ್ಯವೈಖರಿಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಿರುಗುಪ್ಪ ತಾಲೂಕಿನ ಮಣ್ಣೂರು ಸೂಗೂರು, ರುದ್ರಪಾದ, ಉಡೇಗೋಳ, ನಿಟ್ಟೂರು, ಹೆರಕಲ್ಲು, ಕೆಂಚನಗುಡ್ಡ ಹಾಗೂ ನಡವಿ ಗ್ರಾಮದಿಂದ ಸಿರುಗುಪ್ಪದ ಶಾಲಾ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ತೀರಾ ಕಡಿಮೆ. ಇದು ಹಿಂದಿನಿಂದಲೂ ಈ ಭಾಗದ ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆ. ಈ ಗ್ರಾಮಗಳಿಗೆ ಪೂರಕ ಬಸ್ ಸೌಲಭ್ಯಗಳನ್ನು ಕಲ್ಪಿಸುವತ್ತ ಸಾರಿಗೆ ಇಲಾಖೆ ಗಮನ ಹರಿಸಿಲ್ಲ. ಜನಪ್ರತಿನಿಧಿಗಳು ಸಹ ಹೆಚ್ಚು ಕಾಳಜಿ ವಹಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಸಮಸ್ಯೆ ಮುಂದುವರಿದಿದೆ ಎಂಬುದು ಸಾರ್ವಜನಿಕರ ಆರೋಪ. ಹಾಗಂತ ಗ್ರಾಮಸ್ಥರು ಸುಮ್ಮನೆ ಕುಳಿತಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದಾರೆ. ಆದರೆ, ಜನರ ಬೇಡಿಕೆ ಮಾತ್ರ ಈಡೇರಿಸುವ ಕಾಳಜಿಯನ್ನು ಯಾರೂ ವಹಿಸಿಲ್ಲ ಎಂಬುದು ವಿಪರ್ಯಾಸ. ಬಸ್ ಸೌಲಭ್ಯದ ಕೊರತೆಯಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಸಮಸ್ಯೆಯಾಗಿದೆ. ನಿತ್ಯವೂ ತರಗತಿಗಳಿಗೆ ತಡವಾಗಿ ಹೋಗುವಂತಾಗಿದೆ. ಹೀಗಾಗಿ ಬಸ್ ಪಾಸ್ ಮಾಡಿಸಿದ್ದರೂ ಆಟೋ, ಬೈಕ್ ಸೇರಿದಂತೆ ರಸ್ತೆಯಲ್ಲಿ ಓಡಾಡುವ ವಾಹನಗಳಿಗೆ ಕೈಯೊಡ್ಡಿ ಶಾಲಾ-ಕಾಲೇಜು ತಲುಪುವಂತಾಗಿದೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಳ್ಳುತ್ತಾರೆ. ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ದೃಷ್ಟಿಯಿಂದಾದರೂ ಬಸ್ ಸೌಕರ್ಯ ಕಲ್ಪಿಸಬೇಕು ಎಂದು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.ಗ್ರಾಮೀಣ ಭಾಗದಲ್ಲಿ ಸರಿಯಾದ ಸಮಯ ಮತ್ತು ಬಸ್‌ಗಳು ಬಾರದೆ ಇರುವುದರಿಂದ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು. ಇಲ್ಲದೇ ಹೋದರೆ ಅದೆಷ್ಟೋ ಜನ ಶಿಕ್ಷಣದಿಂದ ದೂರ ಉಳಿಯುವ ಪರಿಸ್ಥಿತಿ ಬರಲಿದೆ ಎಂದು ಹೆರಕಲ್ ಗ್ರಾಮದ ವಿದ್ಯಾರ್ಥಿ ವೀರೇಶ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಾಗುತ್ತಿರುವ ಬಸ್ ಸೌಕರ್ಯದ ಸಮಸ್ಯೆ ಕುರಿತು ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು. ಕೂಡಲೇ ಪೂರಕ ಕ್ರಮ ವಹಿಸಲಾಗುವುದು ಎನ್ನುತ್ತಾರೆ ಸಿರುಗುಪ್ಪದ ಬಸ್ ಡಿಪೋ ಮ್ಯಾನೇಜರ್ ಉಮಾ ಮಹೇಶ.