ರಾಜ್ಯದಲ್ಲಿ ಬೆಲೆ ಏರಿಕೆ, ಹಣಕಾಸು ನಿರ್ವಹಣೆ ವೈಫಲ್ಯಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಇದು ಕಾಂಗ್ರೆಸ್ನ ತಪ್ಪಲ್ಲ, ಕಾಂಗ್ರೆಸ್ನ ಡಿಎನ್ಎಯಲ್ಲೇ ಸಮಸ್ಯೆ ಇದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಕೊಪ್ಪಳ: ರಾಜ್ಯದಲ್ಲಿ ಬೆಲೆ ಏರಿಕೆ, ಹಣಕಾಸು ನಿರ್ವಹಣೆ ವೈಫಲ್ಯಕ್ಕೆ ಕಾಂಗ್ರೆಸ್ ಸರ್ಕಾರವೇ ಕಾರಣ. ಇದು ಕಾಂಗ್ರೆಸ್ನ ತಪ್ಪಲ್ಲ, ಕಾಂಗ್ರೆಸ್ನ ಡಿಎನ್ಎಯಲ್ಲೇ ಸಮಸ್ಯೆ ಇದೆ ಎಂದು ಮಾಜಿ ಸಚಿವ ಬಿ. ಶ್ರೀರಾಮುಲು ವಾಗ್ದಾಳಿ ನಡೆಸಿದರು.
ಕೊಪ್ಪಳದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ ಯಾವ ಗಳಿಗೆಯಲ್ಲಿ ರಾಜ್ಯಕ್ಕೆ ಕಾಲಿಟ್ಟರೋ ಗೊತ್ತಿಲ್ಲ. ರಾಜ್ಯದಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಬರಗಾಲ ಎದುರಾಗಿದೆ. ಜನರು ನೆಮ್ಮದಿಯಿಂದ ಬದುಕುವ ಪರಿಸ್ಥಿತಿ ಇಲ್ಲ. ಮುಖ್ಯಮಂತ್ರಿಗೆ ವಿಶಾಲ ಹೃದಯ ಇರಬೇಕು. ರೈತರು, ಜನಸಾಮಾನ್ಯರ ನಡುವೆ ಬೆಳೆದು ಬಂದ ನಾಯಕನಿಗೆ ಮಾತ್ರ ಜನರ ಕಷ್ಟ ಅರ್ಥವಾಗುತ್ತದೆ ಎಂದರು.ಬರ ಪರಿಹಾರವನ್ನು ಕೂಲಿ ನೀಡುವ ರೀತಿಯಲ್ಲಿ ಕೊಡುತ್ತಿದ್ದಾರೆ. ಮೊದಲು ₹5 ಸಾವಿರ ನೀಡಿದ್ದರೆ ಜನರಿಗೆ ಖುಷಿಯಾಗುತ್ತಿತ್ತು. ಮೊದಲು ₹2,500 ಎಂದು ಹೇಳಿ ಈಗ ₹5 ಸಾವಿರ ಎನ್ನುತ್ತಿದ್ದಾರೆ. ಇದು ಕಾಯಿಪಲ್ಲೆ ವ್ಯಾಪಾರವೇ ಎಂದು ಪ್ರಶ್ನಿಸಿದರು.
ಹಾಲಿನ ದರ ಹೆಚ್ಚಿಸಿದ್ದಾರೆ. ಮೊಸರಿನ ದರದ ಬಗ್ಗೆ ಚೌಕಾಸಿ ಮಾಡುತ್ತಿದ್ದಾರೆ. ದಿನನಿತ್ಯದ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ರೈತರ ನೋವು ಅರಿಯುವ ಮುಖ್ಯಮಂತ್ರಿ ಆಗಿದ್ದರೆ ಸರಿಯಾದ ನಿರ್ಧಾರ ಕೈಗೊಳ್ಳುತ್ತಿದ್ದರು. ರಾಜ್ಯದಲ್ಲಿ ಇರುವುದು ರಿಯಲ್ ಎಸ್ಟೇಟ್ ಮುಖ್ಯಮಂತ್ರಿ. ಜನರ ವಕ್ತಾರರಾಗಬೇಕಿದ್ದ ಸಿಎಂ, ಹೈಕಮಾಂಡ್ ಹಾಗೂ ರಾಹುಲ್ ಗಾಂಧಿ ಅವರ ವಕ್ತಾರರಾಗಿದ್ದಾರೆ. ದೆಹಲಿ ಮೆಚ್ಚಿಸಲು ಖಜಾನೆ ಖಾಲಿ ಮಾಡಿಕೊಂಡು ಕುಳಿತಿದ್ದಾರೆ ಎಂದು ಆರೋಪಿಸಿದರು.ಕಬ್ಬು ಬೆಳೆಗಾರರ ಬಳಿ ಹೋದಾಗ ಕಿಸೆಯಲ್ಲಿ ಹಣವಿಲ್ಲ ಎನ್ನುತ್ತಾರೆ. ಕೇಳಿದರೆ ಪ್ರಧಾನಿಗೆ ಪತ್ರ ಬರೆದಿದ್ದೇನೆ ಎನ್ನುತ್ತಾರೆ. ರಾಜ್ಯದಲ್ಲಿ ಬಸ್ ದರ ಏರಿಕೆ ಮಾಡಿದ್ದಾರೆ. ನಾಲ್ಕು ಸಾರಿಗೆ ನಿಗಮಗಳಿಗೆ ₹4,500 ಕೋಟಿ ಬಾಕಿ ಉಳಿಸಿಕೊಂಡು, ಹಣ ಕೇಳಿದರೆ ಜನರ ಮೇಲೆ ಹೊರೆ ಹಾಕುತ್ತಿದ್ದಾರೆ. ಯಡಿಯೂರಪ್ಪ ಸರ್ಕಾರದಲ್ಲಿ ರೈತರಿಗೆ ಪ್ರೋತ್ಸಾಹಧನ ನೀಡಲಾಗುತ್ತಿತ್ತು. ಈಗ ಜನರ ಹಣವನ್ನೇ ಕಿತ್ತುಕೊಳ್ಳುತ್ತಿದ್ದಾರೆ ಎಂದರು.
ಬರಿಗೈ ಮುಖ್ಯಮಂತ್ರಿ: ಮುಖ್ಯಮಂತ್ರಿಗೆ ಶಾಸಕರ ಬೆಂಬಲವಿಲ್ಲ, ಸಚಿವರ ಬಲವಿಲ್ಲ, ಅಧಿಕಾರಿಗಳು ಮಾತು ಕೇಳುತ್ತಿಲ್ಲ, ಖಜಾನೆಯಲ್ಲಿ ಹಣವಿಲ್ಲ. ಸರ್ಕಾರ ನಡೆಸಲು ಸಾಧ್ಯವಾಗುತ್ತಿಲ್ಲ. ವ್ಯಾಪಾರದ ರೀತಿಯಲ್ಲಿ ರಾಜಕಾರಣ ಮಾಡುತ್ತೇನೆ ಎಂದುಕೊಂಡಿದ್ದಾರೆ. ನಾವು ಬಹಳ ದಿನಗಳಿಂದ ಅವರನ್ನು ನೋಡಿದ್ದೇವೆ. ಸಚಿವರಾಗಿದ್ದಾಗ, ಉಪಮುಖ್ಯಮಂತ್ರಿಯಾಗಿದ್ದಾಗ ಗಟ್ಟಿಮನುಷ್ಯ ಎಂದುಕೊಂಡಿದ್ದೆವು. ಆದರೆ ಮುಖ್ಯಮಂತ್ರಿ ಆದ ಬಳಿಕ ಇಷ್ಟು ಕೆಟ್ಟ ಪರಿಸ್ಥಿತಿ ಬರುತ್ತದೆ ಎಂದು ನಿರೀಕ್ಷಿಸಿರಲಿಲ್ಲ. ಬಂಡೆಯಲ್ಲಿ ಏನೂ ಉಳಿದಿಲ್ಲ, ನುಚ್ಚುನೂರಾಗಿದೆ ಎಂದು ವ್ಯಂಗ್ಯವಾಡಿದರು.ಕರ್ನಾಟಕದ ಮುಖ್ಯಮಂತ್ರಿ ಹಾಗೂ ತೆಲಂಗಾಣದ ಮುಖ್ಯಮಂತ್ರಿ ರೇವಂತ ರೆಡ್ಡಿ ಇಬ್ಬರೂ ಹಣವಿಲ್ಲ ಎನ್ನುತ್ತಿದ್ದಾರೆ. ಎಲ್ಲರಿಗೂ ಆಶ್ವಾಸನೆ ನೀಡಿರುವ ಸಿಎಂ ಈಗ ಎಲ್ಲೆಡೆ ಖಜಾನೆ ಖಾಲಿಯಾಗಿದೆ ಎಂದು ಹೇಳುತ್ತಿದ್ದಾರೆ ಎಂದು ಶ್ರೀರಾಮುಲು ಟೀಕಿಸಿದರು.