ಗ್ಯಾರಂಟಿ ಹೆಸರಲ್ಲಿ ನಡೆಯುತ್ತಿದೆ ಖಜಾನೆ ಲೂಟಿ

| Published : Sep 07 2024, 01:30 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ: ಸಾಮಾಜಿಕ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗರಣದಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಆರೋಪ ಬಂದ ತಕ್ಷಣ ರಾಜೀನಾಮೆ ಕೊಡಬೇಕಾಗಿತ್ತು. ಮೊದಲಿದ್ದ ಸಿದ್ದರಾಮಯ್ಯ ಈಗ ಇಲ್ಲ. ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಖಜಾನೆ ಲೂಟಿ ಆಗುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ:

ಸಾಮಾಜಿಕ ಹಿನ್ನೆಲೆಯಿಂದ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಗರಣದಲ್ಲಿ ಸಿಕ್ಕು ಒದ್ದಾಡುತ್ತಿದ್ದಾರೆ. ಆರೋಪ ಬಂದ ತಕ್ಷಣ ರಾಜೀನಾಮೆ ಕೊಡಬೇಕಾಗಿತ್ತು. ಮೊದಲಿದ್ದ ಸಿದ್ದರಾಮಯ್ಯ ಈಗ ಇಲ್ಲ. ಗ್ಯಾರಂಟಿ ಹೆಸರಿನಲ್ಲಿ ರಾಜ್ಯದ ಖಜಾನೆ ಲೂಟಿ ಆಗುತ್ತಿದೆ ಎಂದು ಸಂಸದ ರಮೇಶ ಜಿಗಜಿಣಗಿ ಆರೋಪಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಪೂರ್ವತಯಾರಿ ಮಾಡಿಕೊಳ್ಳದೆ ಬಡ ಜನರ ಅಭಿವೃದ್ಧಿಗೆ ಇಟ್ಟ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಶಾಸಕ ರಾಜುಗೌಡ ಪಾಟೀಲ ಕುದುರಿಸಾಲವಾಡಗಿ ಮಾತನಾಡಿ, ಸಂಸದರ ಮಾರ್ಗದರ್ಶನದಲ್ಲಿ ಎರಡು ಪಕ್ಷದ ನಾಯಕರು ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧಿಕಾರ ಹಂಚಿಕೆ ಮಾಡಿಕೊಂಡು ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿ ಜಯಭೇರಿ ಬಾರಿಸಿದ್ದೇವೆ. ಪಪಂ ಚುನಾವಣೆಯಲ್ಲಿ ಕುರುಬ ಸಮುದಾಯಕ್ಕೆ ಪ್ರಾತಿನಿಧ್ಯ ನೀಡಲಾಗಿದ್ದು, ಮತ್ತೊಮ್ಮೆ ಮೈತ್ರಿ ಪಕ್ಷದ ಮುಖಂಡರು ಅಧ್ಯಕ್ಷ ಸ್ಥಾನ ನೀಡುವ ಮೂಲಕ ಕುರುಬ ಸಮಾಜಕ್ಕೆ ರಾಜಕೀಯ ಪ್ರಾತಿನಿಧ್ಯ ನೀಡಲಾಗಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಯುವ ನಾಯಕನನ್ನು ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಅಭಿವೃದ್ಧಿಗೆ ಕಾಳಜಿ ವಹಿಸುವಂತೆ ಶುಭ ಹಾರೈಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ(ಕೂಚಬಾಳ) ಹಾಗೂ ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಮಾಡಗಿ ಮಾತನಾಡಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷ ಹೊಂದಾಣಿಕೆಯಿಂದ ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಸಂಸದರಾದ ರಮೇಶ ಜಿಗಜಿಣಗಿ ಅವರ ಮಾರ್ಗದರ್ಶನದಲ್ಲಿ, ಶಾಸಕರಾದ ರಾಜುಗೌಡ ಪಾಟೀಲ ಹಾಗೂ ಮಾಜಿ ಶಾಸಕರಾದ ಸೋಮನಗೌಡ ಪಾಟೀಲ ಸಾಸನೂರ ಅವರ ನೇತೃತ್ವದಲ್ಲಿ ಮೈತ್ರಿ ಅಭ್ಯರ್ಥಿಗಳು ಪಪಂ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಯಲ್ಲಿ 11 ಮತಗಳನ್ನು ಪಡೆಯುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯಲಾಗಿದೆ. ಕಾಂಗ್ರೆಸ್ ವಿರುದ್ಧ ಹೋರಾಡಲು ಎರಡು ಪಕ್ಷಗಳು ಒಗ್ಗಟ್ಟಾಗಿ ಹೋರಾಡಬೇಕಿದೆ. ಮೈತ್ರಿ ಪಕ್ಷದ ಸದಸ್ಯರು ಜನರ ನಿರೀಕ್ಷೆಯಂತೆ ಬರುವಂತ ದಿನಗಳಲ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿ ಜವಾಬ್ದಾರಿ ಮೆರೆಯಬೇಕಾಗಿದೆ ಎಂದು ಸಲಹೆ ನೀಡಿದರು.

ಈ ವೇಳೆ ಮಾಜಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ, ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ರಿಯಾಜ್‌ ಯಲಿಗಾರ, ಜೆಡಿಎಸ್ ತಾಲೂಕು ಅಧ್ಯಕ್ಷ ಸಾಯಿಬಣ್ಣ ಬಾಗೇವಾಡಿ, ಮಂಡಲ ಅಧ್ಯಕ್ಷ ಅವ್ವಣ್ಣ ಗ್ವಾತಗಿ, ಪಪಂ ಸದಸ್ಯರಾದ ಕಾಸುಗೌಡ ಬಿರಾದಾರ, ಶಾಂತಯ್ಯ ಜಡಿಮಠ, ಸುಮಂಗಲ ಸೇಬೆನವರ, ಸಿಂಧೂರ ಡಾಲೇರ, ರತ್ನಬಾಯಿ ದೇವೂರ, ಮಂಗಳೇಶ್ವರ ಕಡ್ಲೇವಾಡ, ದಾನಾಬಾಯಿ ಚವ್ಹಾಣ, ಮುಖಂಡರಾದ ಎ.ಡಿ.ಮುಲ್ಲಾ, ಮುನೀರ್ ಅಹ್ಮದ್ ಮಳಖೇಡ, ಮಳನಗೌಡ ಬಿರಾದಾರ, ಪ್ರಭುಗೌಡ ಬಿರಾದಾರ(ಅಸ್ಕಿ), ಶೇಖರಗೌಡ, ಸಿದ್ದು ಬುಳ್ಳಾ, ಭೀಮನಗೌಡ ಸಿದರಡ್ಡಿ, ಪ್ರಕಾಶ ದೊಡಮನಿ, ಮಹಾಂತೇಶ ಬಿರಾದಾರ, ಶಿವಪುತ್ರ ಸಾತಿಹಾಳ, ಗುರುನಾಥ ಮುರಡಿ, ಭೀಮನಗೌಡ ಲಚ್ಯಾಣ, ಹುಸೇನ ಗೌಂಡಿ, ಬಸಪ್ಪ ದೇವಣಗಾಂವ, ಸೋಮು ದೇವೂರ, ಕಾಸು ವಡ್ಡವಡಗಿ, ವೀರೇಶ ಕುದುರಿ, ಶಿವರಾಜ ತಳವಾರ ಸೇರಿ ಎರಡು ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.----------

ಕೋಟ್‌.....

ಕಾಂಗ್ರೆಸ್‌ ಸರ್ಕಾರ ಅಸ್ಥಿತ್ವಕ್ಕೆ ಬಂದಾಗಿಂದ ಅಭಿವೃದ್ಧಿ ಕಾಮಗಾರಿಗಳು ಬಹುತೇಕ ಸ್ಥಗಿತಗೊಂಡಿವೆ. ಗ್ಯಾರಂಟಿ ಯೋಜನೆಗಳಿಗೆ ಹಣಕಾಸಿನ ಪೂರ್ವತಯಾರಿ ಮಾಡಿಕೊಳ್ಳದೆ ಬಡ ಜನರ ಅಭಿವೃದ್ಧಿಗೆ ಇಟ್ಟ ಹಣವನ್ನು ಗ್ಯಾರಂಟಿಗಳಿಗೆ ಬಳಸಲಾಗಿದೆ.

- ರಮೇಶ ಜಿಗಜಿಣಗಿ, ಸಂಸದ