ಸಾರಾಂಶ
ಬಸವರಾಜ ಹಿರೇಮಠ ಧಾರವಾಡ
ದೇವರು ವರ ನೀಡಿದರೂ, ಪೂಜಾರಿ ಕೊಡಲಿಲ್ಲ ಎಂಬ ಮಾತಿನಂತೆ ಸರ್ಕಾರ ನೀಡಿದ ಅನುದಾನವನ್ನು ಖಜಾನೆ ಇಲಾಖೆಯಿಂದ ಪಡೆದುಕೊಳ್ಳಲು ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.ಖಜಾನೆ ಇಲಾಖೆಯ ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಜಿಲ್ಲೆಯ 13 ಗ್ರಾಮಗಳ ಸ್ಮಶಾನ ಭೂಮಿ ಖರೀದಿಗೆ ಬಂದ ₹3.80 ಕೋಟಿ ಅನುದಾನ ಮರಳಿ ಹೋಗಿರುವುದು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳಿಗೆ ವಿವಿಧ ಬಿಲ್‌ಗಳ ಮೂಲಕ ಕೊಡಬೇಕಾದ ಅನುದಾನ ಅನವಶ್ಯಕ ಕಾರಣಗಳನ್ನು ನೀಡಿ ತಿರಸ್ಕರಿಸಲಾಗುತ್ತಿದೆ ಎಂಬ ದೊಡ್ಡ ಆರೋಪವನ್ನು ಖಜಾನೆ ಇಲಾಖೆ ಹೊತ್ತಿದೆ. ಇದು ವಿವಿಧ ಇಲಾಖೆ ಹಂತದಲ್ಲಿ ತೀವ್ರ ಸಂಚಲನ ಸಹ ಮೂಡಿಸಿದೆ.
ಮರಳಿ ಹೋದ ಸ್ಮಶಾನ ಹಣ:ಜಿಲ್ಲೆಯ ಸಾಕಷ್ಟು ಹಳ್ಳಿಗಳಲ್ಲಿ ರುದ್ರಭೂಮಿಗೆ ಜಾಗದ ಸಮಸ್ಯೆ ಇದೆ. ಜಿಲ್ಲಾಧಿಕಾರಿಗಳು ಆದಿಯಾಗಿ ಸ್ಥಳೀಯ ಶಾಸಕರುಗಳ ತೀವ್ರ ಪ್ರಯತ್ನದಿಂದ ಜಿಲ್ಲೆಯ 13 ಗ್ರಾಮಗಳಲ್ಲಿ ರುದ್ರಭೂಮಿಗೆ ಜಾಗ ಖರೀದಿಸಲು ₹3.80 ಕೋಟಿ ಅನುದಾನ ಬಂದಿತ್ತು. ಖಾಸಗಿಯವರಿಂದ ಜಮೀನು ಖರೀದಿಸಿ ಸ್ಮಶಾನ ಭೂಮಿ ಕಾಯ್ದಿರಿಸಲು ಜಿಲ್ಲಾ ಮಟ್ಟದ ದರ ನಿರ್ಧರಣಾ ಸಮಿತಿ ಸಭೆಯು ಸಹ ನಿರ್ಣಯಿಸಿತ್ತು.ಈ ಹಣವನ್ನು ಉಪವಿಭಾಗಾಧಿಕಾರಿಗಳ ಮೂಲಕ ಜಮೀನು ಮಾಲೀಕರಿಗೆ ಕೊಡಬೇಕಿತ್ತು. ಆದರೆ, ಈ ಹಣ ಭೂ ಮಾಲೀಕರಿಗೆ ನೀಡಬೇಕೆಂದು ಖಜಾನೆ ಇಲಾಖೆ ಉಪ ನಿರ್ದೇಶಕರು ಪ್ರಸ್ತಾವನೆಯನ್ನು ತಿರಸ್ಕರಿಸಿದ ಪರಿಣಾಮ, ಅನುದಾನ ಈಗ ಮತ್ತೇ ಹಣಕಾಸು ಇಲಾಖೆಗೆ ಹೋಗಿರುವುದು ಸಮಸ್ಯೆಗೆ ಕಾರಣವಾಗಿದೆ.
ಈ ಕುರಿತು ಸದರಿ ಜಮೀನುಗಳನ್ನು ಸ್ಮಶಾನ ಸಲುವಾಗಿ ಖರೀದಿ ಕೊಡುವುದಾಗಿ ಒಪ್ಪಿಕೊಂಡ ಭೂಮಾಲಿಕರು ಪರಿಹಾರ ನೀಡುವಂತೆ ಪದೇ ಪದೇ ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ ಕಚೇರಿಗೆ ಬರುತ್ತಿದ್ದು, ಅನವಶ್ಯಕ ವಿಳಂಭವಾಗುತ್ತಿದೆ. ಆದ್ದರಿಂದ ನೇರವಾಗಿ ಕಂದಾಯ ಇಲಾಖೆಗೆ ಅನುದಾನ ಬಿಡುಗಡೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಹೋದ ಅನುದಾನ ಮತ್ತೆ ಪ್ರಯಾಸ ಪಟ್ಟು ತರಬೇಕಾದ ಸ್ಥಿತಿ ಉಂಟಾಗಿದೆ. ಇದು ಸ್ಥಳೀಯ ಶಾಸಕರ ಆಕ್ರೋಶಕ್ಕೂ ಸಹ ಕಾರಣವಾಗಿದೆ.ವೇತನ ವಿಳಂಬ: ಇದರೊಂದಿಗೆ ವಿವಿಧ ಇಲಾಖೆಗಳ ಮುಖ್ಯಸ್ಥರು ಖಜಾನೆ ಇಲಾಖೆ ವಿರುದ್ಧ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ. ಜಿಲ್ಲಾಸ್ಪತ್ರೆಯ ರಾಜ್ಯ ವಲಯದ ಹಾಗೂ ಎನ್.ಎಚ್.ಎಂ.ಅನುದಾನದ ಬಿಲ್ಲುಗಳನ್ನು ಅನುದಾನದ ಲಭ್ಯತೆಯ ಆಧಾರದ ಮೇಲೆ ತಯಾರಿಸಿ ನೀಡಿದಾಗ, ಜಿಲ್ಲಾ ಖಜಾನಾಧಿಕಾರಿಗಳು ಸ್ವೀಕರಿಸಿಲ್ಲ. ಜೊತೆಗೆ ಫೆಬ್ರುವರಿ-2025 ನೇ ವೇತನ ಬಿಲ್ಲುಗಳನ್ನು ಕೂಡಾ ನಿರಾಕರಿಸಿದ್ದಾರೆ. ಇದರಿಂದ ಅಧಿಕಾರಿ, ಸಿಬ್ಬಂದಿ ವೇತನಕ್ಕೂ ವಿಳಂಬವಾಗುತ್ತಿದೆ. ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಿಗೆ, ರೋಗಿಗಳ ಹಿತದೃಷ್ಟಿಯಿಂದ ಪ್ರಗತಿ ಸಾಧಿಸಲು ತೊಂದರೆಯಾಗುತ್ತಿದೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಇನ್ನು, ಸಮಾಜ ಕಲ್ಯಾಣ ಇಲಾಖೆಯ ವಿವಿಧ ಲೆಕ್ಕ ಶೀರ್ಷಿಕೆಗಳಡಿ ತಯಾರಿಸಿ ಖಜಾನೆಗೆ ಸಲ್ಲಿಸಿದ ಬಿಲ್‌ಗಳು ತಿರಸ್ಕೃತಗೊಂಡಿವೆ. ಇಲಾಖೆಯ ವಿದ್ಯಾರ್ಥಿ ನಿಲಯಗಳಲ್ಲಿ ಕೈಗೊಳ್ಳಲಾದ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗಳ, ಪ್ರಗತಿ ಕಾಲನಿ, ಭವನಗಳು, ಸಂಘ-ಸಂಸ್ಥೆಗಳ ಬಿಲ್‌ಗಳನ್ನು ಖಜನಾಧಿಕಾರಿಗಳು ತಿರಸ್ಕರಿಸಿದ್ದಾರೆ. ಆದ್ದರಿಂದ ಖಜಾನಾಧಿಕಾರಿಗಳಿಗೆ ಈ ಕುರಿತು ಸೂಚನೆ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕರು ಇಲಾಖೆ ಆಯುಕ್ತರಿಗೆ ಬರೆದಿರುವ ಪತ್ರದ ಪ್ರತಿ ಕನ್ನಡಪ್ರಭಕ್ಕೆ ಲಭ್ಯವಾಗಿದೆ.ನಿರೀಕ್ಷೆಗಳೇನು?:ಗ್ಯಾರಂಟಿ ಯೋಜನೆಯಿಂದ ಸರ್ಕಾರದ ವಿವಿಧ ಇಲಾಖೆಗಳಿಗೆ ಅನುದಾನದ ತೀವ್ರ ಸಮಸ್ಯೆಯಾಗಿದೆ. ಇಂತಹ ಸಮಯದಲ್ಲಿ ಸರ್ಕಾರದಿಂದ ಬಂದ ಅನುದಾನ ಇಲಾಖೆಗಳಿಗೆ ನೀಡಲು ಖಜಾನಾಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ. ಅವರ ನಿರೀಕ್ಷೆಗಳೇನು ತಿಳಿಯುತ್ತಿಲ್ಲ ಎಂದು ಸರ್ಕಾರದ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಕನ್ನಡಪ್ರಭದೊಂದಿಗೆ ಬೇಸರ ವ್ಯಕ್ತಪಡಿಸಿದರು.
ಸ್ಮಶಾನಕ್ಕೆ ಭೂಮಿ ಖರೀದಿಸಲು ಖಾಸಗಿ ಜಮೀನು ಮಾಲೀಕರಿಗೆ ಖಜಾನೆಯಿಂದ ಅನುದಾನ ನೀಡಬೇಕಾಗುತ್ತದೆ. ಆದ್ದರಿಂದ ಉಪ ವಿಭಾಗಾಧಿಕಾರಿಗಳ ಈ ಪ್ರಸ್ತಾವನೆ ತಿರಸ್ಕರಿಸಿದ್ದು, ಅದು ಸರ್ಕಾರದ ಹಂತದಲ್ಲಿದೆ. ಇನ್ನುಳಿದಂತೆ ಸರ್ಕಾರದ ವಿವಿಧ ಇಲಾಖೆಗಳು ನೀಡಿದ ಪ್ರಸ್ತಾವನೆಗಳನ್ನು ಹಂತ ಹಂತವಾಗಿ ಪರಿಶೀಲಿಸಲಾಗುತ್ತಿದೆ ಎಂದು ಖಜಾನೆ ಇಲಾಖೆ ಉಪನಿರ್ದೇಶಕ ಮೆಹಬೂಬಿ ಹೇಳಿದರು.