ಪರಧರ್ಮವನ್ನು ಗೌರವದಿಂದ ಕಾಣಿ: ಸುಬ್ರಹ್ಮಣ್ಯ ಸ್ವಾಮಿ

| Published : Sep 22 2024, 01:55 AM IST

ಪರಧರ್ಮವನ್ನು ಗೌರವದಿಂದ ಕಾಣಿ: ಸುಬ್ರಹ್ಮಣ್ಯ ಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ಹಳಿಯಾಳ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಂಜುಮನ್ ಇಸ್ಲಾಂ ದಿ ಇಕ್ಬಾಲ್ ಎಜ್ಯುಕೇಷನ್ ಸೊಸೈಟಿ ಹಾಗೂ ಜಾಮೀಯಾತ್ ಉಲ್ಮಾ ಇ ಹಿಂದ್ ಸಂಸ್ಥೆಯ ಸಹಯೋಗದಲ್ಲಿ ಆಧ್ಯಾತ್ಮಿಕ ಸಭೆ ಹಾಗೂ ಮುಸ್ಲಿಂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹಳಿಯಾಳ: ಧರ್ಮವು ಜೀವನದ ಪಾಠವನ್ನು ಬೋಧಿಸುತ್ತದೆ. ಪ್ರತಿಯೊಬ್ಬರೂ ನಂಬಿದ ಧರ್ಮವನ್ನು ಪಾಲಿಸುವ ಜತೆಗೆ ಬೇರೆ ಧರ್ಮಗಳನ್ನು ಗೌರವಿಸಬೇಕು. ಧರ್ಮದಲ್ಲಿ ಆಚರಣೆಗಳು ಭಿನ್ನವಾದರೂ ಕೊನೆಗೆ ಸೇರುವ ಗುರಿ ಮಾತ್ರ ಒಂದೇ ಎಂದು ಕೆ.ಕೆ. ಹಳ್ಳಿಯ ಶ್ರೀಮಠದ ಸುಬ್ರಹ್ಮಣ್ಯ ಸ್ವಾಮಿ ತಿಳಿಸಿದರು.ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಅಂಜುಮನ್ ಇಸ್ಲಾಂ ದಿ ಇಕ್ಬಾಲ್ ಎಜ್ಯುಕೇಷನ್ ಸೊಸೈಟಿ ಹಾಗೂ ಜಾಮೀಯಾತ್ ಉಲ್ಮಾ ಇ ಹಿಂದ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಆಧ್ಯಾತ್ಮಿಕ ಸಭೆ ಹಾಗೂ ಮುಸ್ಲಿಂ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು. ಸತ್ಯ, ಶುದ್ಧ ತತ್ವದ ಮೇಲೆ ಸಮಾಜವನ್ನು ಬೆಳೆಸುವುದೇ ಎಲ್ಲ ಧರ್ಮಗಳ ಮೂಲ ಗುರಿಯಾಗಿದೆ. ಧರ್ಮ ಮಾರ್ಗದಲ್ಲಿ ನಡೆಯಲು ಧಾರ್ಮಿಕ ಕಾರ್ಯಕ್ರಮಗಳು ಅಗತ್ಯವಾಗಿದ್ದು, ಇದರಿಂದ ಪ್ರತಿಯೊಬ್ಬರೂ ಸಾರ್ಥಕ ಬದುಕು ಸಾಗಿಸಲು ಮತ್ತು ಸದ್ಭಾವನೆ ಬೆಳೆಸಿಕೊಳ್ಳಲು ಸಾಧ್ಯ ಎಂದರು.ಬೆಂಗಳೂರಿನ ಮುಸ್ಲಿಂ ಧರ್ಮಗುರು ನಿಜಾಮುದ್ದೀನ ಮಾತನಾಡಿ, ಧರ್ಮವು ಪ್ರತಿಯೊಬ್ಬರನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತದೆ. ಧರ್ಮದ ಮಾರ್ಗದಲ್ಲಿ ಮುನ್ನಡೆಯಲು ಎಲ್ಲರೂ ಶ್ರಮಿಸಬೇಕಾಗಿದೆ. ಸದಾಕಾಲ ಪರೋಪಕಾರ, ಸಮಾಜಪರ ಚಿಂತನೆ, ಸತ್ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಮಾನವೀಯ ಗುಣಗಳನ್ನು ಕಲಿಸುವುದರ ಜತೆಗೆ ಪುಣ್ಯದ ಕಾರ್ಯಗಳಲ್ಲಿ ತೊಡಗಿಸುವಂತೆ ಮಾಡುವುದೇ ನಿಜವಾಧ ಧರ್ಮವಾಗಿದೆ ಎಂದರು. ಹಳಿಯಾಳ ಮಿಲಾಗ್ರಿಸ್ ಚರ್ಚ್‌ನ ಗುರುಗಳಾದ ಫ್ರಾನ್ಸಿಸ್ ಮಿರಾಂಡಾ ಮಾತನಾಡಿ, ಎಲ್ಲ ಧರ್ಮಗಳು ಶಾಂತಿಯನ್ನೇ ಸಾರುತ್ತವೆ. ಈ ಶಾಂತಿಯ ತತ್ವಗಳನ್ನು ಪಾಲಿಸಿದರೆ ಜೀವನದಲ್ಲಿ ಶಾಂತಿ ನೆಲೆಸುತ್ತದೆ. ಶತ್ರುತ್ವದ ಮನೋಭಾವಗಳು ದೂರವಾಗಿ ಉತ್ತಮ ಸಂಬಂಧಗಳು ಬೆಳೆಯುತ್ತವೆ. ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸಿದರೆ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ನಮ್ಮ ಧರ್ಮವನ್ನು ನಾವು ಹೇಗೆ ಗೌರವದಿಂದ ಕಾಣುತ್ತೆವೆಯೋ ಅಷ್ಟೇ ಪರಧರ್ಮವನ್ನು ಗೌರವದಿಂದ ಕಾಣಬೇಕು ಎಂದರು.ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಎಸ್ಎಸ್ಎಲ್‌ಸಿ, ಪಿಯುಸಿ, ಪದವಿ ಮತ್ತು ಎಂಜಿನಿಯರಿಂಗ್, ವೈದ್ಯ, ವಕೀಲ ವೃತ್ತಿ ಸೇರಿದಂತ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತರನ್ನು ಗೌರವಿಸಲಾಯಿತು.

ಅಂಜುಮನ್ ಇಸ್ಲಾಂ ಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಜಿಲ್ಲಾ ವಕ್ಫ್‌ ಸಲಹಾ ಸಮಿತಿಯ ಸದಸ್ಯ ಇಲಿಯಾಸ್ ಬಳಗಾರ, ಧರ್ಮಗುರುಗಳಾದ ನಸರುಲ್ಲಾ, ಅರ್ಷದ, ಫಯಾಜ್, ಶೌಕತ, ಮುಖಂಡ ಚಂದ್ರಕಾಂತ ಕಲಭಾವಿ, ಪಿಎಸ್‌ಐ ವಿನೋದ ರೆಡ್ಡಿ ಹಾಗೂ ಮುಸ್ಲಿಂ ಸಮುದಾಯದ ಪ್ರಮುಖರು ಇದ್ದರು.