ಪ್ರತಿಯೊಂದು ಜೀವಿಯನ್ನೂ ಮಾನವೀಯತೆಯಿಂದ ಕಾಣಿ

| Published : Mar 11 2025, 12:50 AM IST

ಸಾರಾಂಶ

ಜಗತ್ತಿನ ಎಲ್ಲಾ ಜೀವರಾಶಿಯಲ್ಲೂ ಮಾತೃ ವಾತ್ಸಲ್ಯ ಇರುತ್ತದೆ. ಪ್ರತಿಯೊಂದು ಜೀವಿಯನ್ನೂ ಪ್ರೀತಿಸಿ ಮಾನವೀಯತೆಯಿಂದ ಕಾಣಬೇಕು ಎಂದು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಕಾರ್ಯದರ್ಶಿ ಪರಮಾನಂದ ಸ್ವಾಮೀಜಿ ಹೇಳಿದರು

ಚಿಕ್ಕನಾಯಕನಹಳ್ಳಿ: ಜಗತ್ತಿನ ಎಲ್ಲಾ ಜೀವರಾಶಿಯಲ್ಲೂ ಮಾತೃ ವಾತ್ಸಲ್ಯ ಇರುತ್ತದೆ. ಪ್ರತಿಯೊಂದು ಜೀವಿಯನ್ನೂ ಪ್ರೀತಿಸಿ ಮಾನವೀಯತೆಯಿಂದ ಕಾಣಬೇಕು ಎಂದು ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಕಾರ್ಯದರ್ಶಿ ಪರಮಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ತರಬೇನಹಳ್ಳಿ ಬಳಿಯ ಬಸವನಗುಡಿಯಲ್ಲಿರುವ ತುಮಕೂರಿನ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಉಪಶಾಖೆಯಲ್ಲಿ ಜೀವಂತ ದುರ್ಗಾ ಪೂಜೆಯಲ್ಲಿ ಮಾತನಾಡಿದರು. ಮನುಷ್ಯನಲ್ಲಿ ಜೀವವಿದ್ದಾಗ ಶಿವನ ಸ್ವರೂಪ ಇರುತ್ತದೆ. ಜೀವ ಹೋದಾಗ ಶವನಾಗುತ್ತಾನೆ. ಜೀವ ಇರುವವರನ್ನು ಪೂಜಿಸಬೇಕು ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಬದುಕಿದ್ದ ಕಾಲದಲ್ಲಿ ಧರ್ಮಯೋಚಿತವಾಗಿ ನಡೆದುಕೊಳ್ಳಬೇಕು. ರಾಮಕೃಷ್ಣ ಪರಮಹಂಸರು ಹಾಗೂ ಸ್ವಾಮಿ ವಿವೇಕಾನಂದರು ಶಾರದಾಮಾತೆಯನ್ನೇ ಅನುಸರಿಸುತ್ತಿದ್ದರು . ಮನೆಯಲ್ಲಿನ ಸ್ತ್ರೀ ತಮ್ಮ ಪರಿಶ್ರಮದಿಂದ ಕುಟುಂಬವನ್ನು ನಿಭಾಯಿಸಿಕೊಂಡು ಹೊಗುತ್ತಾಳೆ. ಮಹಿಳೆಯ ಸಾಧನೆಗಳು ಸಮಾಜಕ್ಕೆ ಕೊಡುಗೆಯಾಗಿವೆ. ಈ ನಿಟ್ಟಿನಲ್ಲಿ ಶಾರದಾ ಮಾತೆಯು ಜನಸಾಮಾನ್ಯರು ಶಾಂತಿ, ನೆಮ್ಮದಿ ಕಾಣಲು ತತ್ವ ಆದರ್ಶಗಳನ್ನು ನೀಡಿದ್ದಾರೆ. ಮಹಿಳೆ ಎಂದರೆ ಕೇವಲ ಸ್ತ್ರೀ ಅಲ್ಲ, ದುರ್ಗೆ ಎಂದು ಕರೆದರೆ ತಪ್ಪಾಗಲಾರದು. ಮಹಿಳೆಯನ್ನು ಪೂಜಿಸಿದರೆ ಶಾರದಾ ದೇವಿಯನ್ನು ಪೂಜಿಸಿದಂತೆ, ಜೀವಂತ ದುರ್ಗಾ ಮಾತೆಯನ್ನೇ ಪೂಜಿಸಿದಂತೆ ಎಂದರು.

ವಿಶೇಷವಾಗಿ ಕೊಳಗೇರಿಯಲ್ಲಿ ವಾಸಿಸುವ ಹಾಗೂ ರಸ್ತೆಯಲ್ಲಿ ಭಿಕ್ಷೆ ಬೇಡುವ ಅಶಕ್ತ 40 ಜನ ಹಿರಿಯ ಮಹಿಳೆಯರಿಗೆ ಆತಿಥ್ಯ ನೀಡಿ ಪೂಜೆ ಸಲ್ಲಿಸಿ, ದವಸ ಧಾನ್ಯ ಇರುವ ಕಿಟ್ ಗಳನ್ನು ನೀಡಿ ಗೌರವಿಸಿದರು.

ಹಿರಿಯ ನಾಗರಿಕರಾದ ಡಾ.ನಾಗರತ್ನ ಮಾತನಾಡಿ, ಸ್ತ್ರೀಯು ಬೇರೆಯವರ ತಪ್ಪುಗಳನ್ನು ಹುಡುಕಬಾರದು, ಮೊದಲು ತಮ್ಮ ತಪ್ಪುಗಳನ್ನು ಅರಿತು ಕೊಳ್ಳಬೇಕು ಎಂದು ಶಾರದಾ ಮಾತೆ ಹೇಳಿದ್ದಾರೆ, ಮುಂದಿನ ಪೀಳಿಗೆಗೆ ಶಾರದಾ ಮಾತೆಯ ನಿದರ್ಶನಗಳ ಬಗ್ಗೆ ಪರಿಚಯಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದರು.

ಡಾ.ಶ್ರೀಪಾದಕುಮಾರ್ ಹಾಗು ಡಾ.ಚೇತನ್ ಉಚಿತ ಆರೋಗ್ಯ ತಪಾಸಣೆ ನಡೆಸಿದರು. ಆಶ್ರಮಕ್ಕೆ ಭೂದಾನ ಮಾಡಿದ ತರಬೇನಹಳ್ಳಿ ನಿವೃತ್ತ ಶಿಕ್ಷಕ ಕುಮಾರಸ್ವಾಮಿ ದೊಡ್ಡಮನೆˌ ಕೆಬಿಕ್ರಾಸ್ ಸಾನ್ವಿ ಕ್ಲಿನಿಕ್ ನ ಡಾ.ಚೇತನ್ˌ ಯೋಗೇಂದ್ರಪ್ಪ ದೊಡ್ಡಮನೆ ಸೇರಿದಂತೆ ಸ್ವಯಂ ಸೇವಕರು ಇದ್ದರು.