ನಗರಸಭೆ ಆಸ್ತಿ ಸ್ವಂತ ಸ್ವತ್ತಿನಂತೆ ನೋಡಿಕೊಳ್ಳಿ; ವಾಸೀಲ್

| Published : Apr 24 2025, 12:05 AM IST

ನಗರಸಭೆ ಆಸ್ತಿ ಸ್ವಂತ ಸ್ವತ್ತಿನಂತೆ ನೋಡಿಕೊಳ್ಳಿ; ವಾಸೀಲ್
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯ ಕೆಲಸ- ಕಾರ್ಯಗಳಿಗೆ ಖಾಸಗಿ ಜೆಸಿಬಿಯನ್ನು ಬಾಡಿಗೆಗೆ ಪಡೆಯಲಾಗುತ್ತಿದ್ದು, ಇದಕ್ಕೆ ಲಕ್ಷಾಂತರ ರು. ವೆಚ್ಚ ಮಾಡಲಾಗುತ್ತಿದೆ. ನಗರಸಭೆಯ ಜೆಸಿಬಿಯನ್ನು ಜತನದಿಂದ ನೋಡಿಕೊಂಡಿದ್ದರೆ, ಇಂಥ ಪ್ರಮೇಯ ಬರುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಚನ್ನಟಪ್ಟಣ

ಸರಿಯಾಗಿ ನಿರ್ವಹಣೆ ಮಾಡದ ಕಾರಣ ನಗರಸಭೆಯ ಜೆಸಿಬಿ ಕಳೆದ ಎರಡು ವರ್ಷಗಳಿಂದ ಕೆಟ್ಟು ನಿಂತಿದೆ. ನಗರಸಭೆಯ ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡಬೇಕಾದದ್ದು ಸಿಬ್ಬಂದಿ ಕರ್ತವ್ಯ. ನಗರಸಭೆ ಆಸ್ತಿಯನ್ನು ಸ್ವಂತ ಆಸ್ತಿಯಂತೆ ನೋಡಕೊಳ್ಳಬೇಕು ಎಂದು ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್ ತಿಳಿಸಿದರು.

ಪಟ್ಟಣದ ನಗರಸಭೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶೇಷ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ನಗರಸಭೆಯ ಕೆಲಸ- ಕಾರ್ಯಗಳಿಗೆ ಖಾಸಗಿ ಜೆಸಿಬಿಯನ್ನು ಬಾಡಿಗೆಗೆ ಪಡೆಯಲಾಗುತ್ತಿದ್ದು, ಇದಕ್ಕೆ ಲಕ್ಷಾಂತರ ರು. ವೆಚ್ಚ ಮಾಡಲಾಗುತ್ತಿದೆ. ನಗರಸಭೆಯ ಜೆಸಿಬಿಯನ್ನು ಜತನದಿಂದ ನೋಡಿಕೊಂಡಿದ್ದರೆ, ಇಂಥ ಪ್ರಮೇಯ ಬರುತ್ತಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಖಾಸಗಿಯವರ ಬಳಿ ಇರುವ ಜೆಸಿಬಿಗಳು ಹತ್ತಾರು ವರ್ಷ ಬಾಳಿಕೆ ಬರುತ್ತವೆ. ಆದರೆ, ನಗರಸಭೆಯ ವಾಹನಗಳು ಬಹಳ ವರ್ಷ ಬಾಳಿಕೆ ಬರುವುದಿಲ್ಲ. ಇನ್ನು ಮುಂದಾದರೂ ಹೊಸದಾಗಿ ಖರೀದಿಸುವ ವಾಹನಗಳನ್ನು ಸರಿಯಾಗಿ ನಿರ್ವಹಣೆ ಮಾಡುವಂತೆ ತಾಕೀತು ಮಾಡಿದರು.

ನಗರದ ತಿಟ್ಟಮಾರನಹಳ್ಳಿ ರಸ್ತೆಯಲ್ಲಿ ನಿರ್ಮಿಸಿರುವ ಆಧುನಿಕ ವಿದ್ಯುತ್ ಚಿತಾಗಾರ ಉದ್ಘಾಟನೆಯಾಗಿ ಎರಡು ವರ್ಷ ಕಳೆದಿದೆಯಾದರೂ ಇನ್ನು ಚಾಲನೆಗೊಂಡಿಲ್ಲ. ಈಗ ಜನರೇಟರ್ ಅಳವಡಿಸಿದ್ದು, ಬೋರ್ ಪೈಪ್‌ಲೈನ್ ಕೆಲಸ ನಡೆಯುತ್ತಿದೆ. ಶೌಚಾಲಯ ಸೇರಿದಂತೆ ಮೂಲಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಅಲ್ಲಿ ಯಾವುದೇ ಸಿಬ್ಬಂದಿ ಇಲ್ಲ. ವಿದ್ಯುತ್ ಚಿತಾಗಾರದ ನಿರ್ವಹಣೆಯನ್ನು ಖಾಸಗಿಯವರಿಗೆ ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಚಿತಾಗಾರದ ನಿರ್ವಹಣೆಗೆ ಖಾಸಗಿ ಸಂಸ್ಥೆಯನ್ನು ಆಹ್ವಾನಿಸಿದ್ದು, ಅವರು ಸಲ್ಲಿಸುವ ಪ್ರಸ್ತಾವನೆಯ ಮೇಲೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಚಿತಾಗಾರದಲ್ಲಿ ಅಳವಡಿಸಿದ್ದ ಎರಡು ಮೋಟಾರ್‌ಗಳನ್ನು ಕಳವು ಮಾಡಲಾಗಿದೆ. ಇದಲ್ಲದೇ ಅಲ್ಲಿನ ಸ್ವಚ್ಛತೆ ಹಾಗೂ ಭದ್ರತೆಯ ಹಿನ್ನೆಲೆಯಲ್ಲಿ ಸೂಕ್ತ ಸಿಬ್ಬಂದಿಯನ್ನು ನೇಮಿಸಬೇಕಿದೆ ಎಂದು ತಿಳಿಸಿದರು.

ಸಿಸಿ ಕ್ಯಾಮೆರಾ ನಿರ್ವಹಣೆ ಪೊಲೀಸ್ ಇಲಾಖೆಯದು:

ನಗರದ ಪ್ರಮುಖ ಸಿಗ್ನಲ್‌ಗಳಲ್ಲಿ ನಗರಸಭೆಯಿಂದ ಸಿ.ಸಿ.ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದಕ್ಕಾಗಿ ಈ ಹಿಂದೆಯೇ ಹತ್ತು ಲಕ್ಷ ರು. ವೆಚ್ಚ ಮಾಡಲಾಗಿದೆ. ಆದರೆ, ಇದೀಗ ಪೊಲೀಸ್ ಇಲಾಖೆ ಕೆಟ್ಟು ನಿಂತಿರುವ ಸಿ.ಸಿ. ಕ್ಯಾಮೆರಾಗಳನ್ನು ದುರಸ್ತಿಗೊಳಿಸುವಂತೆ ನಗರಸಭೆಗೆ ಮನವಿ ಸಲ್ಲಿಸಿದ್ದು, ಸಿ.ಸಿ.ಕ್ಯಾಮೆರಾಗಳ ನಿರ್ವಹಣೆ ಪೊಲೀಸ್ ಇಲಾಖೆಯೇ ಮಾಡಲಿ ಎಂದು ತಿಳಿಸಿದರು.

ಇದೇ ವೇಳೆ ಚನ್ನಪಟ್ಟಣ ನಗರಸಭೆಯ ೨೦೨೫- ೨೬ನೇ ಸಾಲಿನ ಎಸ್.ಎಫ್.ಸಿ ಇತರೆ ಅವತರಣ ಅನುದಾನ. ಬಂಡಾವಾಳ ಆಸ್ತಿಗಳ ಸೃಜನೆಗಾಗಿ ೧೬.೦೦ ಲಕ್ಷ ರು., ಎಸ್‌ಸಿಎಸ್‌ಪಿ ಅನುದಾನ ೨೪.೦೦ ಲಕ್ಷ ರು. ಹಾಗೂ ಟಿಎಸ್‌ಪಿ ಅನುದಾನ ೧೦.೦೦ ಲಕ್ಷ ರು. ಒಟ್ಟು ೫೦.೦೦ ಲಕ್ಷ ರು.ಗಳು ಹಂಚಿಕೆಯಾಗಿದ್ದು, ಸದರಿ ಮೊತ್ತವನ್ನು ಸರ್ಕಾರಿ ಮಾರ್ಗಸೂಚಿಯ ಪ್ರಕಾರ ಕ್ರಿಯಾ ಯೋಜನೆಯನ್ನು ತಯಾರಿಸುವ ಬಗ್ಗೆ ಚರ್ಚಿಸಿ ಅನುಮೋದನೆ ಪಡೆಯಲಾಯಿತು.

ಚನ್ನಪಟ್ಟಣ ನಗರಸಭೆಯ ೨೦೨೫- ೨೬ನೇ ಸಾಲಿನ ನಗರಸಭಾ ನಿಧಿ ಅನುದಾನದ ಶೇ.೨೪.೧೦. ಶೇ.೭.೨೫ ಮತ್ತು ಶೇ.೫ ರ ಯೋಜನೆಯಡಿ ಸರ್ಕಾರಿ ಮಾರ್ಗಸೂಚಿಯ ಪ್ರಕಾರ ಕ್ರಿಯಾ ಯೋಜನೆಯನ್ನು ತಯಾರಿಸುವ ಕುರಿತು, ೨೦೨೫- ೨೬ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ಚನ್ನಪಟ್ಟಣ ನಗರಸಭೆಗೆ ಹಂಚಿಕೆಯಾಗಿರುವ ೩೩೩,೦೦ ಲಕ್ಷ ರು.ಗಳು ಕ್ರಿಯಾ ಯೋಜನೆ ತಯಾರಿಸುವ ಸಂಬಂಧ , ಚನ್ನಪಟ್ಟಣ ನಗರಸಭಾ ವ್ಯಾಪ್ತಿಯಲ್ಲಿ ಅಮೃತ್- ೨.೦ ಯೋಜನೆ ಅಮೃತ್ ಮಿತ್ರ ಕಾರ್ಯಕ್ರಮದಡಿ ಆಯ್ಕೆಯಾದ ಮಹಿಳಾ ಸ್ವ-ಸಹಾಯ ಗುಂಪುಗಳಿಂದ ಉದ್ಯಾನವನಗಳ ನಿರ್ವಹಣೆಗೆ ಅವಶ್ಯವಿರುವ ಸ್ವಚ್ಛತಾ ಪರಿಕರ, ಸ್ವಚ್ಛತಾ ಧಿರಿಸುಗಳು ಮತ್ತು ಸ್ವಚ್ಛತಾ ಯಂತ್ರಗಳನ್ನು ಖರೀದಿಸಲು ದರಪಟ್ಟಿಗಳನ್ನು ಆಹ್ವಾನಿಸಿ ಸರಬರಾಜು ಆದೇಶ ನೀಡಿ ಖರೀದಿಸಿರುವುದನ್ನು ಘಟನ್ನೋತ್ತರ ಮಂಜೂರಾತಿ ನೀಡುವ ವಿಚಾರ. ಎಸ್‌ಬಿಎಂ-೧೦ ರ ಅನುದಾನದಲ್ಲಿ ಬಾಕಿ ಇರುವ ಮತ್ತು ಉಳಿತಾಯವಾಗಿರುವ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸುವ ಬಗ್ಗೆ, ಸ್ವಚ್ಛ ಭಾರತ್ ಮಿಷನ್ ೧೦ರ ಅಡಿಯಲ್ಲಿ ಸಮಗ್ರ ಘನತ್ಯಾಜ್ಯ ವಸ್ತು ನಿರ್ವಹಣೆಗಾಗಿ ವಾಹನ/ಯಂತ್ರೋಪಕರಣಗಳನ್ನು ಖರೀದಿಸಲು ಘನತ್ಯಾಜ್ಯ ವಸ್ತು ನಿರ್ವಹಣೆಯ ವಿಸ್ತ್ರತ ಕ್ರಿಯಾ ಯೋಜನೆಯಲ್ಲಿ ಅನುಮೋದನೆಯಾಗಿದ್ದ ಯಂತ್ರೋಪಕರಣಗಳನ್ನು ೨೦೨೪- ೨೫ನೇ ಸಾಲಿನ ೧೫ನೇ ಹಣಕಾಸು ಮತ್ತು ೨೦೨೧-೨೨ನೇ ಸಾಲಿನ ೧೫ನೇ ಹಣಕಾಸು ಎನ್‌ಎಂಪಿಸಿ ಅನುದಾನದಲ್ಲಿ ಖರೀದಿಸಲು ಸ್ವಚ್ಛ ಭಾರತ್ ಮಿಷನ್ ೧.೦ರ ಅಡಿಯಲ್ಲಿ ಉಳಿತಾಯವಾಗುವ ಅನುದಾನಕ್ಕೆ ಕ್ರಿಯಾ ಯೋಜನೆ ತಯಾರಿಸುವ ಚರ್ಚಿಸಿ ಅನುಮೋದನೆ ಪಡೆಯಲಾಯಿತು.

ಸಭೆಯಲ್ಲಿ ಪೌರಾಯುಕ್ತ ಮಹೇಂದ್ರ, ನಗರಸಭೆ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಸದಸ್ಯರಾದ ರಫೀಕ್, ನಾಗೇಶ್, ಸುಮಾ ರವೀಶ್, ಮತೀನ್ ಇತರರು ಇದ್ದರು.