ರೋಗಿಗಳ ನಿಸ್ವಾರ್ಥದಿಂದ ಉಪಚರಿಸಿ

| Published : May 16 2025, 01:54 AM IST

ಸಾರಾಂಶ

ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆಯ ಮದರ್ ತರೆಸಾ ನರ್ಸಿಂಗ್ ಸ್ಕೂಲ್‍ನಲ್ಲಿ ನಡೆದ ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆಯನ್ನು ಎಸ್.ಸಂದೀಪ್ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ನಿಸ್ವಾರ್ಥ ಮನಸ್ಸಿನಿಂದ ಸೇವೆ ಸಲ್ಲಿಸಿ ಎಂದು ಜಿಲ್ಲಾ ಮದಕರಿ ನಾಯಕ ವಿದ್ಯಾಸಂಸ್ಥೆಯ ಅಧ್ಯಕ್ಷ ಎಸ್.ಸಂದೀಪ್ ನರ್ಸಿಂಗ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕೋಟೆ ಮುಂಭಾಗವಿರುವ ಮದಕರಿನಾಯಕ ವಿದ್ಯಾಸಂಸ್ಥೆಯ ಮದರ್ ತೆರೆಸಾ ನರ್ಸಿಂಗ್ ಸ್ಕೂಲ್‍ನಲ್ಲಿ ನಡೆದ ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ನರ್ಸ್‍ಗಳನ್ನು ಸಮಾಜದಲ್ಲಿ ದೇವರಂತೆ ಕಾಣಲಾಗುವುದು. ನರ್ಸಿಂಗ್ ವೃತ್ತಿ ಅತ್ಯಂತ ಪವಿತ್ರವಾದುದು. ಪ್ಲೊರೆಂನ್ಸ್ ನೈಟಿಂಗೇಲ್‍ರವರ ಆದರ್ಶ, ತತ್ವ ಹಾಗೂ ಅವರಲ್ಲಿದ್ದ ಸೇವಾ ಮನೋಭಾವನೆಯನ್ನು ಜೀವನದಲ್ಲಿ ರೂಢಿಸಿಕೊಂಡಾಗ ಮಾತ್ರ ಅಂತರಾಷ್ಟ್ರೀಯ ಶುಶ್ರೂಷಕಿಯರ ದಿನಾಚರಣೆಗೆ ಗೌರವ ಕೊಟ್ಟಂತಾಗುತ್ತದೆ. ನರ್ಸಿಂಗ್ ವೃತ್ತಿಯಲ್ಲಿ ಅಪ್ಪಿ ತಪ್ಪಿಯೂ ತಪ್ಪು ಮಾಡಬೇಡಿ. ಆತ್ಮವಿಶ್ವಾಸ ಮೂಡಿಸಿಕೊಳ್ಳಿ. ನಮ್ಮ ನರ್ಸಿಂಗ್ ಕಾಲೇಜಿನಲ್ಲಿ ಓದಿದವರು ದೇಶ-ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆಂದು ಹೇಳಿದರು.

ಮದರ್ ತೆರೆಸಾ ಸ್ಕೂಲ್ ಆಫ್ ನರ್ಸಿಂಗ್ ಪ್ರಾಂಶುಪಾಲ ಮಂಜುಳ ಆರ್ ಮಾತನಾಡಿ, ಪ್ಲೋರೆನ್ಸ್ ನೈಟಿಂಗೇಲ್‍ರನ್ನು ಸ್ಮರಿಸುವುದರ ಜೊತೆ ಅವರ ತತ್ವ, ಆದರ್ಶದ ಹಾದಿಯಲ್ಲಿ ನರ್ಸ್‍ಗಳು ಸಾಗಬೇಕು. ನರ್ಸಿಂಗ್ ಶಿಕ್ಷಣ ಮುಗಿಸಿದ ನಂತರ ಕೆಲಸ ಮಾಡಿ ವೇತನ ಪಡೆಯುವುದು ಮುಖ್ಯವಲ್ಲ. ನರ್ಸಿಂಗ್ ಪದದ ಪ್ರಾಮುಖ್ಯತೆಯನ್ನು ಅರಿತು ರೋಗಿಗಳ ಸೇವೆ ಸಲ್ಲಿಸಬೇಕು. ನರ್ಸ್‍ಗಳು ಮಾಡುವ ಕೆಲಸವನ್ನು ಕೆಲವು ಕಡೆ ಅಟೆಂಡರ್ ಗಳು ಮಾಡುತ್ತಿರುವುದು ನೋವಿನ ಸಂಗತಿ. ಪ್ಲೋರೆನ್ಸ್ ನೈಟಿಂಗೇಲ್‍ರವರು ಕತ್ತಲಲ್ಲಿ ಲ್ಯಾಂಪ್ ಹಿಡಿದು ರೋಗಿಗಳ ಆರೈಕೆ ಮಾಡುತ್ತಿದ್ದರು. ಹಾಗಾಗಿ ನಿಮಗೆ ಸಿಕ್ಕಿರುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಿ ಎಂದು ಸಲಹೆ ನೀಡಿದರು. ಮದರ್ ತೆರೆಸಾ ಸ್ಕೂಲ್ ಆಫ್ ನರ್ಸಿಂಗ್‍ನ ಉಪನ್ಯಾಸಕಕರಾದ ಕೆ.ಪೂಜಾ, ವಿದ್ಯಾ ಎನ್. ವಿ.ಎಸ್.ಪೋತದಾರ್, ರೂಪ ಎಂ.ಎನ್, ಜಿಲ್ಲಾ ಮದಕರಿನಾಯಕ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಎಸ್.ಸಾಗರ್ ಇದ್ದರು.