ಸಾರಾಂಶ
ಎಚ್‌ಐವಿ ಏಡ್ಸ್ ಸೋಂಕಿತರನ್ನು ತಾರತಮ್ಯದಿಂದ ಕಾಣದೇ ಅವರನ್ನು ಕುಟುಂಬದ ಸದಸ್ಯರಂತೆ ನೋಡುವ ಮನೋಭಾವನೆ ನಮ್ಮಲ್ಲಿ ಬರಬೇಕು.
ಕನ್ನಡಪ್ರಭ ವಾರ್ತೆ ಯಲಬುರ್ಗಾ
ಎಚ್‌ಐವಿ ಏಡ್ಸ್ ಸೋಂಕಿತರನ್ನು ತಾರತಮ್ಯದಿಂದ ಕಾಣದೇ ಅವರನ್ನು ಕುಟುಂಬದ ಸದಸ್ಯರಂತೆ ನೋಡುವ ಮನೋಭಾವನೆ ನಮ್ಮಲ್ಲಿ ಬರಬೇಕು ಎಂದು ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ.ಕೃಷ್ಣ ಹೊಟ್ಟಿ ಹೇಳಿದರು.ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಹಾಗೂ ನಾನಾ ಸಂಘ,ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವ ಜನತೆಗೆ ಎಚ್‌ಐವಿ ಹರಡದಂತೆ ಕ್ರಮಗಳನ್ನು ತಿಳಿಸುವುದರ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯವಾಗಬೇಕು ಎಂದರು.
ಇತ್ತೀಚಿನ ದಿನಗಳಲ್ಲಿ ಯುವ ಜನತೆ ದುಶ್ಚಟಗಳ ದಾಸರಾಗಿ ತಮ್ಮ ಅಮೂಲ್ಯವಾದ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಚಟಗಳಿಂದ ಮುಕ್ತರಾಗಿ ನಿಮ್ಮನ್ನು ನಂಬಿಕೊಂಡ ಕುಟುಂಬದವರೊಂದಿಗೆ ಸಮೃದ್ಧ ಜೀವನ ಕಟ್ಟಿಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಹೇಳಿದರು.ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು, ಆಶಾ ಕಾರ್ಯಕರ್ತರೆಯರು ಏಡ್ಸ್ ತಡೆಗಟ್ಟುವ ಜಾಗೃತಿ ಕಾರ್ಯಕ್ರಮಗಳನ್ನು ಹೆಚ್ಚು ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು, ಎಚ್‌ಐವಿ ಏಡ್ಸ್‌ನಿಂದ ರಕ್ಷಿಸಿಕೊಳ್ಳುವುದರೊಂದಿಗೆ ಸದೃಢ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಡಾ. ವಿವೇಕ ವಾಗಲೇ ಮಾತನಾಡಿದರು.ಈ ಸಂದರ್ಭ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ಪೂಜಾರ, ಸಹಾಯಕ ಆಡಳಿತಾಧಿಕಾರಿ ಚಂದ್ರಶೇಖರ ಅಣ್ಣಿಗೇರಿ, ಡಾ. ಸಿದ್ದಿಂಗಪ್ಪ, ಡಾ. ಮಾರುತಿ, ಇನ್ನರ್ ಕ್ಲಬ್ ತಾಲೂಕಾಧ್ಯಕ್ಷೆ ಶಕುಂತಲಾದೇವಿ ಮಾಲಿಪಾಟೀಲ, ಶರಣಮ್ಮ ಪೂಜಾರ, ಆಪ್ತ ಸಮಲೋಚಕರಾದ ಕಾಳಪ್ಪ ಬಡಿಗೇರ, ಶರಣಪ್ಪ ಉಪ್ಪಾರ, ಚಂದ್ರಶೇಖರ ನಾಯಕ ಇದ್ದರು.