ಪ್ರತಾಪಸಿಂಹಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ

| Published : May 23 2025, 12:39 AM IST

ಪ್ರತಾಪಸಿಂಹಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಗುರುವಾರ ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ವಿರುದ್ಧ ಮಾಜಿ ಸಂಸದ ಪ್ರತಾಪ್ ಸಿಂಹ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಗುರುವಾರ ಇಲ್ಲಿನ ಪ್ರಧಾನ ಅಂಚೆ ಕಚೇರಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದರು.

ಅವಹೇಳನಾಕಾರಿ ಹೇಳಿಕೆ ನೀಡಿದ ಮಾಜಿ ಸಂಸದ ಪ್ರತಾಪಸಿಂಹನಿಗೆ ಹುಚ್ಚಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವಂತೆ ಆಗ್ರಹಿಸಿ ಶಿವಮೊಗ್ಗ ಯುವ ಕಾಂಗ್ರೆಸ್‌ನಿಂದ ಕೇಂದ್ರ ಆರೋಗ್ಯ ಸಚಿವ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಗೆ ಅಂಚೆ ಮೂಲಕ ಮನವಿ ಪತ್ರ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಪ್ರತಿಭಟನಾಕಾರರು, ರಾಜ್ಯದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರನ್ನು ಅನ್ಪಡ್ ಎಂದು ಅವಹೇಳನಕಾರಿ ಹೇಳಿಕೆ ನೀಡಿರುವ ಮೈಸೂರಿನ ಮಾಜಿ ಸಂಸದ, ಬಿಜೆಪಿ ಮುಖಂಡ ಪ್ರತಾಪಸಿಂಹರಿ ಅವರಿಗೆ ಹುಚ್ಚು ಹಿಡಿದಿದೆ. ಅವರಿಗೆ ಸರಿಯಾದ ಚಿಕಿತ್ಸೆ ಕೊಡಿಸಬೇಕೆಂದು ಒತ್ತಾಯಿಸಿದರು.

ಪ್ರತಾಪಸಿಂಹ ಪತ್ರಕರ್ತರಾಗಿ ಕೆಲಸ ಮಾಡಿದವರು. ಈ ದೇಶದ ಸಂವಿಧಾನ, ವ್ಯವಸ್ಥೆಯ ಬಗ್ಗೆ ಸಾಕಷ್ಟು ತಿಳಿದುಕೊಂಡಿರಬೇಕಿತ್ತು. ಆದರೆ, ಜನರಿಂದ ಆಯ್ಕೆಯಾಗಿ, ರಾಜ್ಯದ ಶಿಕ್ಷಣ ಸಚಿವರಾಗಿ ದಕ್ಷತೆಯಿಂದ ಕಾರ್ಯ ನಿರ್ವಹಿಸುತ್ತಿರುವ, ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುತ್ತಿರುವ ಮಧು ಬಂಗಾರಪ್ಪ ಅವರನ್ನು ಅನ್‌ಪಡ್ ಎಂದು ಹೇಳುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಪ್ರತಾಪ ಸಿಂಹ ಅಣಕಿಸುವ ಕೆಲಸ ಮಾಡಿದ್ದಾರೆ. ಇಂತಹ ವ್ಯಕ್ತಿ ಸಾರ್ವಜನಿಕ ಕ್ಷೇತ್ರದಲ್ಲಿ ಇರುವುದಕ್ಕೆ ಅರ್ಹರಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ವಂಚಿತರಾಗಿ ರಾಜಕೀಯವಾಗಿ ನಿರಾಶ್ರಿತರಾಗಿರುವ ಪ್ರತಾಪಸಿಂಹಗೆ ಹುಚ್ಚು ಹಿಡಿರುವುದು ಖಚಿತವಾಗಿದೆ. ಹಾಗಾಗಿ ಕಂಡ ಕಂಡವರನ್ನು ತಿಳಿಗೇಡಿ ಎನ್ನುವುದು, ಬೇಕಾಬಿಟ್ಟಿ ಟೀಕಿಸುವುದು ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಪ್ರತಾಪ ಸಿಂಹ ಸಂಸದರಾಗಿ ಮೈಸೂರು-ಕೊಡಗಿನಲ್ಲಿ ಯಾವ ಅಭಿವೃದ್ಧಿ ಮಾಡಿದ್ದಾರೆ? ಕೇವಲ ಟೀಕೆಗಳನ್ನು ಮಾಡುತ್ತಾ, ಪಕ್ಷದ ವರಿಷ್ಠರನ್ನು ಓಲೈಸುತ್ತಾ ಇದ್ದ ಪ್ರತಾಪಸಿಂಹ ರಾಜಕೀಯಕ್ಕೆ ನಾಲಾಯಕ್ ವ್ಯಕ್ತಿ ಎಂದು ಅವರ ಪಕ್ಷದ ವರಿಷ್ಠರೇ ತಿರಸ್ಕರಿಸಿದ್ದಾರೆ. ಇದರಿಂದ ಪ್ರತಾಪಸಿಂಹ ತನ್ನ ಅಸ್ತಿತ್ವಕ್ಕಾಗಿ ಬೇಕಾಬಿಟ್ಟಿಯಾಗಿ ನಾಲಿಗೆ ಹರಿಬಿಡುತ್ತಿದ್ದಾರೆ ಎಂದು ದೂರಿದರು.

ಈ ದೇಶದ ಸಂವಿಧಾನದಲ್ಲಿರುವ ಅವಕಾಶದಿಂದಾಗಿಯೇ ಇಂದು ಮಧು ಬಂಗಾರಪ್ಪನವರು ಶಾಸಕರಾಗಿ, ಶಿಕ್ಷಣ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಶಿಕ್ಷಣ ಸಚಿವರಾದ ಮೇಲೆ ಎಸ್ಎಸ್ಎಲ್‌ಸಿ ಮತ್ತು ಪಿಯುಸಿ ಫಲಿತಾಂಶದಲ್ಲಿ ಆಗಿರುವ ಗಣನೀಯ ಹೆಚ್ಚಳವೇ ಅವರ ಕಾರ್ಯವೈಖರಿಗೆ ಹಿಡಿದ ಕನ್ನಡಿಯಾಗಿದೆ ಎಂದರು.

ಆದರೆ, ಪ್ರತಾಪಸಿಂಹ ಅಧಿಕಾರದಲ್ಲಿದ್ದಾಗ ಮಾಡಿಕೊಂಡಂತಹ ಆವಾಂತರವೇನು ಎನ್ನುವುದು ಇಡೀ ಜಗತ್ತಿಗೆ ಗೊತ್ತಿದೆ. ರಾಜಕೀಯವಾಗಿ ನಿರಾಶ್ರಿತರಾಗಿ ಹುಚ್ಚುಚ್ಚಾಗಿ ಹೇಳಿಕೆ ನೀಡುತ್ತಿರುವ ಪ್ರತಾಪಸಿಂಹ ಅವರು, ಕೂಡಲೇ ಸಚಿವ ಮಧು ಬಂಗಾರಪ್ಪನವರ ಮತ್ತು ಈ ನಾಡಿನ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.

ಪ್ರತಾಪಸಿಂಹನನ್ನು ಆಸ್ಪತ್ರೆಗೆ ಸೇರಿಸಲು ಯುವ ಕಾಂಗ್ರೆಸ್‌ನಿಂದಲೇ ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿದ್ದು, ಇದರ ಸದ್ಬಳಕೆ ಆಗುವಂತೆ ಬಿಜೆಪಿ ವರಿಷ್ಠರು ನೋಡಿಕೊಳ್ಳಬೇಕಿದೆ ಎಂದರು.

ಬಿಜೆಪಿ ವರಿಷ್ಠರು ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇಲ್ಲವಾದರೆ ಅವರ ಹುಚ್ಚು ಹೇಳಿಕೆಗೆ ಜನತೆಯೇ ಸೂಕ್ತ ರೀತಿಯಲ್ಲಿ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಾಪ್ಕಾಮ್ಸ್ ಅಧ್ಯಕ್ಷ ವಿಜಯ್ ಕುಮಾರ್, ಆಸಿಫ್, ಚೇತನ್, ಮಧುಸೂದನ್, ಗಿರೀಶ್ ಬುಕ್ಕಳಾಪುರ, ಹರ್ಷಿತ್ ಗೌಡ , ಚರಣ್ ಶೆಟ್ಟಿ, ಪ್ರವೀಣ್ ಕುಮಾರ್ ಮತ್ತಿತರರು ಇದ್ದರು.