ಸಮಾಜದಲ್ಲಿ ಹಿರಿಯ ನಾಗರಿಕರು ತಮ್ಮದೇ ಆದ ಸ್ಥಾನ ಹೊಂದಿದ್ದು, ಅವರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.
ಕನ್ನಡಪ್ರಭ ವಾರ್ತೆ ಉಡುಪಿ
ಸಮಾಜದಲ್ಲಿ ಹಿರಿಯ ನಾಗರಿಕರು ತಮ್ಮದೇ ಆದ ಸ್ಥಾನ ಹೊಂದಿದ್ದು, ಅವರನ್ನು ಗೌರವಯುತವಾಗಿ ನೋಡಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ.ಗಫೂರ್ ಹೇಳಿದರು.ಅವರು ನಗರದ ಬನ್ನಂಜೆ ಶ್ರೀ ನಾರಾಯಣಗುರು ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ
ಪ್ರಾಧಿಕಾರ, ವಕೀಲರ ಸಂಘ, ಹಿರಿಯ ನಾಗರಿಕರ ಸಂಸ್ಥೆ, ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟ ಹಾಗೂ ಕೆನರಾ ಬ್ಯಾಂಕ್ ಪ್ರಾದೇಶಿಕ ಕಚೇರಿ 1 ಮತ್ತು 2 ಆಶ್ರಯದಲ್ಲಿ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಮತ್ತು ಕೇಂದ್ರ ಪ್ರಾಯೋಜಿತ ಅಟಲ್ ವಯೋ ಅಭ್ಯುದಯ ಯೋಜನೆಯ ಉಪಯೋಜನೆಯಡಿ ಅಂತರ್ -ಪೀಳಿಗೆಯ ಬಾಂಧವ್ಯ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಒಂಟಿ ಜೀವನ: ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯಕ್ ಮಾತನಾಡಿ, ನಗರೀಕರಣದಿಂದಾಗಿ ಹಿರಿಯ ನಾಗರಿಕರು ಮಕ್ಕಳು, ಕುಟುಂಬಿಕರು, ಬಂದು ಬಾಂಧವರಿಲ್ಲದೆ ಒಂಟಿಯಾಗಿ ಬದುಕುತ್ತಿದ್ದು ಇವರಿಗೆ ಅಭದ್ರತೆ ಕಾಡುತ್ತಿರುವುದನ್ನು ಮನಗಂಡು ಪೊಲೀಸ್ ಇಲಾಖೆಯ ಮಹಾ ನಿರ್ದೇಶಕರ ಆದೇಶದ ಮೇರೆಗೆ ಪೊಲೀಸ್ ಬೀಟ್ ನಡೆಸಿ ಹಿರಿಯ ನಾಗರಿಕರ ಮಾಹಿತಿ ಕಲೆ ಹಾಕಿ ಅವರ ಮನೆಗೆ ತೆರಳಿ ಅವರಿಗೇನಾದರೂ ಸಮಸ್ಯೆಗಳಿದ್ದಲ್ಲಿ ಪೊಲೀಸ್ ಇಲಾಖೆ ಹಾಗೂ ಇತರ ಇಲಾಖೆಗಳ ಮೂಲಕ ಅದನ್ನು ಬಗೆಹರಿಸುವ ಕಾರ್ಯ ನಡೆಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಒಟ್ಟು 1184 ಹಿರಿಯ ನಾಗರಿಕರನ್ನು ಗುರುತಿಸಿ ಅವರ ಮನೆಗಳಿಗೆ ನಿಯಮಿತ ಭೇಟಿ ನೀಡಲಾಗುತ್ತಿದೆ. ಒಂಟಿಯಾಗಿರುವ ಹಿರಿಯ ನಾಗರಿಕರು ಭಯಪಡಬೇಕಾಗಿಲ್ಲ ಇಲಾಖೆ ಅವರ ಬೆಂಬಲಕ್ಕೆ ಇದೆ ಎಂದರು. ಇಂಚರ ಕ್ಲಿನಿಕ್‌ನ ಜನರಲ್ ಫಿಸಿಶಿಯನ್ ಡಾ.ವೈ.ಸುದರ್ಶನ್ ರಾವ್ ವಿಶೇಷ ಉಪನ್ಯಾಸ ನೀಡಿದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹಿರಿಯ ನಾಗರಿಕರ ದಿನಾಚರಣೆ ಅಂಗವಾಗಿ ನಡೆದ ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮಕ್ಕೂ ಮುನ್ನ ಆರೋಗ್ಯ ಇಲಾಖೆ ವತಿಯಿಂದ ಹಿರಿಯ ನಾಗರಿಕರಿಗೆ ವೈದ್ಯಕೀಯ ತಪಾಸಣೆ ನಡೆಸಲಾಯಿತು.ಕಾರ್ಯಕ್ರಮದಲ್ಲಿ ಜಿಪಂ ಉಪಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಹರೀಶ್ ಬಿ, ಕೆನರಾ ಬ್ಯಾಂಕ್ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಟಿ. ಎಸ್.ಎನ್ ಪೂರ್ಣಾನಂದ, ಹಿರಿಯ ನಾಗರಿಕರ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಕೆ. ಸದಾನಂದ ಹೆಗಡೆ, ಮಹಿಳಾ ಮಂಡಲಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷೆ ವಸಂತಿ ರಾವ್ ಕೊರಡ್ಕಲ್, ಹಿರಿಯ ನಾಗರಿಕರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರೇಮಮೂರ್ತಿ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾ ಹಿರಿಯ ನಾಗರಿಕರ ಹಾಗೂ ಅಂಗವಿಕಲರ ಕಲ್ಯಾಣಾಧಿಕಾರಿ ರತ್ನ ಸ್ವಾಗತಿಸಿ, ಹೆಚ್. ರವೀಂದ್ರ ಮತ್ತು ಕಾಂತಿ ಹರೀಶ್ ನಿರೂಪಿಸಿ, ಯೋಜನಾ ಸಹಾಯಕ ಶಿವಾಜಿ ವಂದಿಸಿದರು.