ಸಾರಾಂಶ
ಮಾನವ ಸಂಕುಲದ ಅತಿ ಆಸೆಯಿಂದ ಪರಿಸರ ಸಮತೋಲನ ಹದಗೆಟಿದ್ದು, ಇಂದು ಮಳೆ- ಬೆಳೆ ಸರಿಯಾಗಿ ಸಮಯಕ್ಕೆ ಆಗದೇ ಸಕಲ ಚರಾಚರ ಜೀವಿಗಳ ಬದುಕಿಗೆ ತೊಂದರೆಯಾಗುತ್ತಿದೆ.
ಕಾರವಾರ: ಪರಿಸರ ಮಾತೆಯ ಸುಸಜ್ಜಿತ ಮನೆಯಲ್ಲಿ ಬಾಡಿಗೆದಾರರಂತೆ ಜೀವಿಸುತ್ತಿದ್ದೇವೆ. ಇಲ್ಲಿ ನೀರು, ಗಾಳಿ, ಬೆಳಕು, ಆಹಾರ ಪದಾರ್ಥಗಳನ್ನು ಯಾವುದೇ ರೀತಿಯ ಹಣ ಸಂದಾಯಿಸದೇ ಬದುಕುತ್ತಿದ್ದೇವೆ. ಹಾಗಾಗಿ ಇದನ್ನು ಜೋಪಾನ ಮಾಡಬೇಕು ಎಂದು ಉಪ ಪರಿಸರ ಅಧಿಕಾರಿ ಡಾ. ಗಣಪತಿ ಹೆಗಡೆ ತಿಳಿಸಿದರು.
ಮುಂಡಗೋಡದ ಕುವೆಂಪು ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾನವ ಸಂಕುಲದ ಅತಿ ಆಸೆಯಿಂದ ಪರಿಸರ ಸಮತೋಲನ ಹದಗೆಟಿದ್ದು, ಇಂದು ಮಳೆ- ಬೆಳೆ ಸರಿಯಾಗಿ ಸಮಯಕ್ಕೆ ಆಗದೇ ಸಕಲ ಚರಾಚರ ಜೀವಿಗಳ ಬದುಕಿಗೆ ತೊಂದರೆಯಾಗುತ್ತಿದೆ. ಮನುಜ ಕುಲದಿಂದ ಪರಿಸರಕ್ಕೆ ಆಗುತ್ತಿರುವ ತೊಂದರೆಗಳನ್ನು ಸರಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಪ್ಲಾಸ್ಟಿಕ್‌ನಂತಹ ವಸ್ತುಗಳು ಪರಿಸರದಲ್ಲಿ ಕೊಳೆಯದೇ ಮಳೆಗಾಲದಲ್ಲಿ ಕಾಲುವೆಗಳ ಜತೆಗೆ ನೀರಿನ ಮೂಲಗಳನ್ನು ಸೇರಿ ಮಲಿನವಾಗುವುದರ ಜತೆಗೆ ಜಲಚರಗಳಿಗೆ ತೊಂದರೆಯುಂಟಾಗುತ್ತಿದೆ ಮತ್ತು ಪರೋಕ್ಷವಾಗಿ ಆಹಾರ ಸರಪಣಿಯ ಮೂಲಕ ಎಲ್ಲಜೀವಿಗಳ, ಪ್ರಾಣಿ ಪಕ್ಷಿಗಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಅಲ್ಲದೇ, ಘನತ್ಯಾಜ್ಯದ ಮತ್ತು ದ್ರವ ತ್ಯಾಜ್ಯಗಳ ವೈಜ್ಞಾನಿಕ ವಿಲೇವಾರಿ ಹಾಗೂ ಈ ನಿಟ್ಟಿನಲ್ಲಿ ಪ್ರತಿ ಪ್ರಜೆಯು ಜಾಗೃತನಾಗಿ ಪರಿಸರವನ್ನು ತಾಯಿಯಂತೆ ಕಂಡಲ್ಲಿ ಪರಿಸರಮಾಲಿನ್ಯ ತಡೆಗಟ್ಟಿ ಪರಿಸರವನ್ನು ಸುಂದರವಾಗಿಸಿ, ಆರೋಗ್ಯವಂತರಾಗಿ ನೆಮ್ಮದಿಯ ಜೀವನ ಸಾಗಿಸಬಹುದು ಎಂದರು.
ಮುಂಡಗೋಡ ಸರ್ಕಾರಿ ಪ್ರಥಮದರ್ಜಿ ಕಾಲೇಜಿನ ಪ್ರಾಚಾರ್ಯ ಪ್ರಸನ್ನಸಿಂಗ್ ಭೀ. ಹಜೇರಿ ಅಧ್ಯಕ್ಷತೆ ವಹಿಸಿದ್ದರು. ಅಂಕೋಲಾ ಸಂಗಮ ಸೇವಾ ಸಂಸ್ಥೆಯ ಅಧ್ಯಕ್ಷ ರವೀಂದ್ರ ಎನ್. ಶೆಟ್ಟಿ ಸ್ವಾಗತಿಸಿದರು. ಡಾ. ಮಧುಶ್ರೀ ಕೆ. ನಿರೂಪಿಸಿದರು. ನಾಗರಾಜ ಎಚ್., ಮಲ್ಲಿಕಾರ್ಜುನ ಗೌಡ ಮತ್ತಿತರರು ಇದ್ದರು.