ಕಂಪ್ಲಿ : ಅಪಘಾತಕ್ಕೀಡಾಗಿ ನರಳುವ ಗೋವುಗಳಿಗೆ ಯುವಕರ ತಂಡದಿಂದ ಚಿಕಿತ್ಸೆ

| Published : Apr 04 2024, 01:09 AM IST / Updated: Apr 04 2024, 09:42 AM IST

ಕಂಪ್ಲಿ : ಅಪಘಾತಕ್ಕೀಡಾಗಿ ನರಳುವ ಗೋವುಗಳಿಗೆ ಯುವಕರ ತಂಡದಿಂದ ಚಿಕಿತ್ಸೆ
Share this Article
  • FB
  • TW
  • Linkdin
  • Email

ಸಾರಾಂಶ

ಯುವಕರ ಗುಂಪೊಂದು ಕೇಸರಿ ಗೋ ಸೇವಾ ಪಡೆ ಎನ್ನುವ ತಂಡ ಕಟ್ಟಿಕೊಂಡು ಗೋ ಸೇವೆಗೆ ಟೊಂಕ ಕಟ್ಟಿ ನಿಂತಿದೆ.

ಬಿ.ಎಚ್.ಎಂ. ಅಮರನಾಥ ಶಾಸ್ತ್ರಿ

ಕಂಪ್ಲಿ: ಪಟ್ಟಣದಲ್ಲಿ ಅಪಘಾತಕ್ಕೊಳಗಾಗಿ ನರುಳುವ ಆಕಳು, ಗೂಳಿ, ಕರುಗಳಿಗೆ ಚಿಕಿತ್ಸೆ ನೀಡುವ ಮೂಲಕ ಸ್ಥಳೀಯ ಕೇಸರಿ ಗೋ ಸೇವಾ ಪಡೆಯ ಯುವಕರು ಗೋ ಪ್ರೇಮ ಮೆರೆದಿದ್ದಾರೆ.

ಇಲ್ಲಿನ ಯುವಕರ ತಂಡವೊಂದು ನಿತ್ಯ ರಾತ್ರಿ, ರಜೆ ದಿನಗಳು ಹಾಗೂ ಬಿಡುವಿನ ಸಮಯದಲ್ಲಿ ಗಾಯಗೊಂಡ ಹಾಗೂ ಕಾಯಿಲೆಗಳಿಂದ ನರಳುವಂತಹ ಗೋವು, ಗೂಳಿ, ಎತ್ತು ಹಾಗೂ ಕರುಗಳನ್ನು ಹುಡುಕಿ ಅವುಗಳಿಗೆ ಚಿಕಿತ್ಸೆ ನೀಡುವ ಮೂಲಕ ಗೋವುಗಳ ಸಂರಕ್ಷಣೆಗೆ ಪಣತೊಟ್ಟಿದ್ದಾರೆ.

ಯುವಕರ ಗುಂಪೊಂದು ಕೇಸರಿ ಗೋ ಸೇವಾ ಪಡೆ ಎನ್ನುವ ತಂಡ ಕಟ್ಟಿಕೊಂಡು ಗೋ ಸೇವೆಗೆ ಟೊಂಕ ಕಟ್ಟಿ ನಿಂತಿದೆ. ಪಟ್ಟಣದಲ್ಲಿ ನಿತ್ಯ ಬೀಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ರಸ್ತೆ ಮಧ್ಯೆ, ನಿಲುಗಡೆ ಮಾಡಿದ ವಾಹನಗಳ ಕೆಳಗೆ ದನಗಳು ಮಲಗುತ್ತಿವೆ. ಇವುಗಳ ಹಾವಳಿಯಿಂದಾಗಿ ಸಾರ್ವಜನಿಕರಂತೂ ರೋಸಿ ಹೋಗಿ ಬಿಟ್ಟಿದ್ದಾರೆ. ಅವುಗಳ ಮಾಲೀಕರಂತೂ ಬೆಳಗ್ಗೆ ಸಂಜೆ ಆಕಳುಗಳಿಂದ ಹಾಲನ್ನು ಕರೆದುಕೊಂಡು ಅವುಗಳನ್ನ ರಸ್ತೆಗೆ ಬಿಟ್ಟುಬಿಡುತ್ತಾರೆ. ಇನ್ನು ಪುರಸಭೆಯವರು ಸಹ ಇದಕ್ಕೆ ತಲೆ ಕೆಡಿಸಿಕೊಳ್ಳುತ್ತಿಲ್ಲ. ಈ ಮಧ್ಯೆ ರಸ್ತೆಗಳಲ್ಲಿ ವೇಗವಾಗಿ ಚಲಿಸುವ ವಾಹನಗಳಿಂದ ಅಪಘಾತಕ್ಕೆ ಗುರಿಯಾಗಿ ಮೂಕ ಪ್ರಾಣಿಗಳು ಗಾಯಗೊಂಡು ನರಳಿ ಪ್ರಾಣ ಬಿಡುತ್ತಿವೆ.

ನಿತ್ಯ ಅಪಘಾತಕ್ಕೆ ಒಳಗಾಗಿ ರೋದಿಸುವ ಜಾನುವಾರು ಕಂಡಂತಹ ಯುವಕರ ಗುಂಪೊಂದು ಕೇಸರಿ ಗೋ ಸೇವಾ ಪಡೆ ಎಂಬ ತಂಡ ಕಟ್ಟಿ ಗೋ ಸೇವೆ ಆರಂಭಿಸಿದೆ. ನಿತ್ಯ ಎಲ್ಲಾದರೂ ಅಪಘಾತಕ್ಕೆ ಒಳಗಾದ ಅಥವಾ ಯಾವುದಾದರು ಕಾಯಿಲೆಯಿಂದ ನರಳುವಂತಹ ಗೋವು ಕಂಡಲ್ಲಿ ಗುರುತಿಸಿ, ಅದಕ್ಕೆ ಚಿಕಿತ್ಸೆ ನೀಡುತ್ತಾರೆ. ಗಾಯ, ಕಾಯಿಲೆ ಗುಣಮುಖವಾಗುವವರೆಗೂ ನಿತ್ಯ ಅದರ ಉಪಚಾರ ಮಾಡುತ್ತಾರೆ.

ಮೃತ ಗೋವುಗಳಿಗೆ ಅಂತ್ಯ ಸಂಸ್ಕಾರ:

ಮೃತ ಕರು, ಗೋವುಗಳಿಗೆ ಪೂಜೆ ಸಲ್ಲಿಸಿ ಅಂತಿಮ ವಿಧಿವಿಧಾನ ನೆರವೇರಿಸುವ ಕಾರ್ಯವನ್ನು ಈ ತಂಡ ಮಾಡಿಕೊಂಡು ಬಂದಿದೆ. ಈ ಮೂಲಕ ತಂಡ ಮೆಚ್ಚುಗೆಗೆ ಪಾತ್ರವಾಗಿದೆ.ಗೋ ಮಾತೆ ಮನುಷ್ಯನ ಎರಡನೇ ತಾಯಿ. ಅವುಗಳ ಸಂರಕ್ಷಣೆ ನಮ್ಮ ಹೊಣೆ. ನಿಸ್ವಾರ್ಥದಿಂದ ಗೋವುಗಳ ಚಿಕಿತ್ಸೆ, ಲಾಲನೆ-ಪಾಲನೆಗೆ ಮುಂದಾಗಿದ್ದೇವೆ. ಮುಂಬರುವ ದಿನಗಳಲ್ಲಿ ಗೋವುಗಳ ಮಹತ್ವವನ್ನು ಜನರಿಗೆ ತಿಳಿಸುವ ಕಾರ್ಯ ಕೈಗೊಳ್ಳಲಿದ್ದೇವೆ ಎನ್ನುತ್ತಾರೆ ಕೇಸರಿ ಗೋ ಸೇವಾ ಪಡೆಯ ಪದಾಧಿಕಾರಿಗಳು.