ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಚಿಕಿತ್ಸೆಯ ಪ್ರಭಾವಕ್ಕೆ ಒಳಗಾಗುವವರ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಚಿಕಿತ್ಸೆ ಫಲಪ್ರದವಾಗುತ್ತಿರುವುದರಿಂದ ಹೆಚ್ಚು ಜನ ಆಯುರ್ವೇದಕ್ಕೆ ಆಕರ್ಷಿತರಾಗುತ್ತಿದ್ದಾರೆ. ಜಿಲ್ಲೆಯವರು ಮಾತ್ರವಲ್ಲದೇ, ಹೊರ ಜಿಲ್ಲೆಗಳಿಂದಲೂ ಜನರು ಚಿಕಿತ್ಸೆಗೆ ಇಲ್ಲಿಗೆ ದಾಖಲಾಗುತ್ತಿದ್ದಾರೆ. ಬಂಜೆತನ ನಿವಾರಣೆಗೂ ಉತ್ತಮ ಚಿಕಿತ್ಸೆ ನೀಡುತ್ತಿರುವುದು ಮತ್ತೊಂದು ವಿಶೇಷವಾಗಿದೆ.

- ಚಿಕಿತ್ಸೆ ಫಲಪ್ರದ; ಆಸ್ಪತ್ರೆಗೆ ಹೆಚ್ಚುತ್ತಿರುವ ಜನಸಂದಣಿ

- ಹೊರ ಜಿಲ್ಲೆಯ ಜನರೂ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು

- ಬಂಜೆತನ ನಿವಾರಣೆಗೂ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಅಡ್ಡ ಪರಿಣಾಮಗಳಿಲ್ಲದ ಆಯುರ್ವೇದ ಚಿಕಿತ್ಸೆಯ ಪ್ರಭಾವಕ್ಕೆ ಒಳಗಾಗುವವರ ಜನರ ಸಂಖ್ಯೆ ಹೆಚ್ಚುತ್ತಲೇ ಇದೆ. ಚಿಕಿತ್ಸೆ ಫಲಪ್ರದವಾಗುತ್ತಿರುವುದರಿಂದ ಹೆಚ್ಚು ಜನ ಆಯುರ್ವೇದಕ್ಕೆ ಆಕರ್ಷಿತರಾಗುತ್ತಿದ್ದಾರೆ. ಜಿಲ್ಲೆಯವರು ಮಾತ್ರವಲ್ಲದೇ, ಹೊರ ಜಿಲ್ಲೆಗಳಿಂದಲೂ ಜನರು ಚಿಕಿತ್ಸೆಗೆ ಇಲ್ಲಿಗೆ ದಾಖಲಾಗುತ್ತಿದ್ದಾರೆ. ಬಂಜೆತನ ನಿವಾರಣೆಗೂ ಉತ್ತಮ ಚಿಕಿತ್ಸೆ ನೀಡುತ್ತಿರುವುದು ಮತ್ತೊಂದು ವಿಶೇಷವಾಗಿದೆ.

ನಗರದ ಹೊಸಹಳ್ಳಿ ಬಡಾವಣೆಯಲ್ಲಿರುವ ಆಯುರ್ವೇದ ಆಸ್ಪತ್ರೆ ಜನರನ್ನು ತನ್ನತ್ತ ಸೆಳೆದುಕೊಂಡು ಉತ್ತಮ ಚಿಕಿತ್ಸೆ ನೀಡುವಲ್ಲಿ ದಾಪುಗಾಲಿಟ್ಟಿದೆ. ಮಧುಮೇಹ, ರಕ್ತದ ಒತ್ತಡ, ಕೀಲುನೋವು, ಅಲರ್ಜಿ, ಚರ್ಮರೋಗ, ಪಾರ್ಶ್ವವಾಯು, ಮೂಲವ್ಯಾಧಿ ಸೇರಿದಂತೆ ಹಲವಾರು ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆ ಮೂಲಕ ಪರಿಹಾರ ದೊರಕಿಸಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಪರಿಣಾಮ ಜನರು ಆಯುರ್ವೇದದ ಸೆಳೆತಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಒಳಗಾಗುತ್ತಿರುವುದು ಕಂಡುಬಂದಿದೆ. ನಿತ್ಯ ನೂರಾರು ಜನರು ವಿವಿಧ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುತ್ತಾರೆ. ೨೫ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯಲ್ಲಿ ಒಳರೋಗಿ ಮತ್ತು ಹೊರರೋಗಿಗಳಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಬಂಜೆತನ ನಿವಾರಣೆ:

ಕಳೆದ ನಾಲ್ಕು ವರ್ಷಗಳಿಂದ ಬಂಜೆತನ ನಿವಾರಣೆಗೆ ಇಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ೧೨೦ ರಿಂದ ೧೫೦ ಜನರಿಗೆ ಬಂಜೆತನ ನಿವಾರಣೆಗೆ ಚಿಕಿತ್ಸೆ ನೀಡಲಾಗಿದ್ದು, ಸುಮಾರು ೭೦ಕ್ಕೂ ಹೆಚ್ಚು ಮಂದಿಗೆ ಸಮಸ್ಯೆ ನಿವಾರಣೆಯಾಗಿರುವುದು ಆಸ್ಪತ್ರೆಯ ಹೆಗ್ಗಳಿಕೆಯಾಗಿದೆ. ಅಲೋಪತಿಯಲ್ಲಿ ಪುರುಷರ ಸಮಸ್ಯೆಗೆ ಇಲ್ಲದಿರುವ ಚಿಕಿತ್ಸೆ ಆಯುರ್ವೇದದಲ್ಲಿದೆ. ಸಮಸ್ಯೆ ನಿವಾರಣೆಯಾದ ಮಹಿಳೆಯರು ಮಗುವಿನ ತಾಯಿಯಾಗಿ ಸಂತೃಪ್ತ ಜೀವನ ನಡೆಸುತ್ತಿದ್ದಾರೆ ಎಂದು ವೈದ್ಯಾಧಿಕಾರಿಗಳು ‘ಕನ್ನಡಪ್ರಭ’ ಪತ್ರಿಕೆಗೆ ತಿಳಿಸಿದ್ದಾರೆ.

ಮಂಡ್ಯ ಮಾತ್ರವಲ್ಲದೆ ಬೆಂಗಳೂರು, ತುಮಕೂರು, ಕೋಲಾರ, ಚನ್ನಪಟ್ಟಣ, ಕುಣಿಗಲ್, ಚಾಮರಾಜನಗರ, ಟಿ.ನರಸೀಪುರ ಸೇರಿದಂತೆ ವಿವಿಧೆಡೆಯಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಇಲ್ಲಿಗೆ ಬರುತ್ತಿದ್ದಾರೆ.

ಬಾಡಿ ಮಸಾಜ್‌ಗೆ ಬೇಡಿಕೆ:

ಆಯುರ್ವೇದ ಆಸ್ಪತ್ರೆಗೆ ಬಾಡಿ ಮಸಾಜ್‌ಗೆ ಬರುವವರ ಸಂಖ್ಯೆ ಹೆಚ್ಚಾಗಿದೆ. ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ದೇಹವನ್ನು ಹಗುರವಾಗಿಸಿಕೊಳ್ಳುವುದಕ್ಕೆ ಇಲ್ಲಿಗೆ ಬರುವರು. ಸರ್ಕಾರಿ ಅಧಿಕಾರಿಗಳು, ನೌಕರರು ಕೂಡ ತೂಕ ಇಳಿಸಿಕೊಳ್ಳುವುದಕ್ಕೆ, ಮೈಕಾಂತಿಯನ್ನು ಹೆಚ್ಚಿಸಿಕೊಳ್ಳುವುದು ಸೇರಿದಂತೆ ವಿವಿಧ ಚಿಕಿತ್ಸೆಗಳನ್ನು ಪಡೆದುಕೊಂಡು ಹೋಗುತ್ತಿದ್ದಾರೆ.

ಪಂಚಕರ್ಮ, ಕಟಿಬಸ್ತಿ (ಸೊಂಟ ನೋವು), ಜಾನುಬಸ್ತಿ (ಮಂಡಿ ನೋವು), ಕ್ಷಾರಸೂತ್ರ, ಗ್ರೀವ ಬಸ್ತಿ, ಜಲವಾತಾವಚರಣ, ಕ್ಷೀರೋಧಾರಾ (ನಿದ್ರೆ, ಮಾನಸಿಕ ಸಮಸ್ಯೆ), ಅಗ್ನಿಕರ್ಮ, ಇಗ್ರೀವಾಕ್ಷೀರ, ಶಲ್ಯಕರ್ಮ (ಪೈಲ್ಸ್, ಪಿಸ್ತೂಲ), ಮೂತ್ರಪಿಂಡದಲ್ಲಿ ಕಲ್ಲಿನ ಸಮಸ್ಯೆಗೂ ಪರಿಹಾರ ನೀಡಲಾಗುತ್ತಿದೆ.

ಮಾಸಿಕ ೫೦ ಮಂದಿ ಒಳ ರೋಗಿಗಳಾಗಿ ಚಿಕಿತ್ಸೆ:

ಇಲ್ಲಿ ಒಳರೋಗಿಗಳಾಗಿ ತಿಂಗಳಿಗೆ ೫೦ಕ್ಕೂ ಹೆಚ್ಚು ಮಂದಿ ವಿವಿಧ ಚಿಕಿತ್ಸೆಗಳಿಗೆ ದಾಖಲಾಗುವರು. ಮಧುಮೇಹ, ರಕ್ತದೊತ್ತಡ, ಅಲರ್ಜಿ, ಚರ್ಮ ಸಮಸ್ಯೆ, ಕೀಲು ನೋವು, ಪಾರ್ಶ್ವವಾಯು ಸೇರಿದಂತೆ ಹಲವಾರು ಸಮಸ್ಯೆಗಳ ಔಷಧಗಳಿಗೆ ಹೆಚ್ಚಿನ ಬೇಡಿಕೆ ಇದೆ. ಔಷಧಗಳಿಗೆ ಕೊರತೆಯಾಗದಂತೆ ಎಚ್ಚರವಹಿಸಿ ನೀಡಲಾಗುತ್ತಿದೆ.

ಶೌಚಾಲಯ, ಥೆರಪಿಸ್ಟ್‌ಗಳ ಕೊರತೆ:

ಆಸ್ಪತ್ರೆಯಲ್ಲಿ ಐದು ಮಂದಿ ತಜ್ಞ ವೈದ್ಯರಿದ್ದಾರೆ. ಥೆರಪಿಸ್ಟ್‌ಗಳ ಕೊರತೆ ಬಹಳವಾಗಿ ಕಾಡುತ್ತಿದೆ. ವಿವಿಧ ಥೆರಪಿ ಚಿಕಿತ್ಸೆಗೆ ೧೦೦ಕ್ಕೂ ಹೆಚ್ಚು ಮಂದಿ ಬರುತ್ತಿದ್ದಾರೆ. ಆದರೆ, ಆಸ್ಪತ್ರೆಯಲ್ಲಿರುವುದು ಇಬ್ಬರು ಮಾತ್ರ ಥೆರಪಿಸ್ಟ್‌ಗಳಿದ್ದಾರೆ. ಇನ್ನೂ ಮೂರರಿಂದ ನಾಲ್ಕು ಮಂದಿ ಥೆರಪಿಗಳು ಬೇಕಿದ್ದಾರೆ. ಡಿ-ಗ್ರೂಪ್ ನೌಕರರು ಹಾಗೂ ಶೌಚಾಲಯದ ಕೊರತೆ ಇದೆ. ಆಸ್ಪತ್ರೆಯಲ್ಲಿರುವುದು ಒಂದೇ ಶೌಚಾಲಯವಿದ್ದು, ಎಲ್ಲರೂ ಅದನ್ನೇ ಬಳಸುವುದು ಅನಿವಾರ್ಯವಾಗಿದೆ. ಇದರಿಂದ ಸೋಂಕು ತಗುಲುವ ಆತಂಕವಿರುವುದರಿಂದ ಹೆಚ್ಚುವರಿ ಶೌಚಾಲಯ ನಿರ್ಮಿಸುವುದು ಅತ್ಯವಶ್ಯವಾಗಿದೆ.

ಇನ್ನುಳಿದಂತೆ ಆಯುರ್ವೇದ ಆಸ್ಪತ್ರೆಯಲ್ಲಿ ಒಳರೋಗಿಗಳಾಗಿ ದಾಖಲಾಗುವವರಿಗೆ ಅನುಕೂಲವಾಗುವಂತೆ ಬಿಸಿನೀರಿಗೆ ಸೋಲಾರ್ ವ್ಯವಸ್ಥೆ, ಗೀಜರ್ ವ್ಯವಸ್ಥೆ ಮಾಡಲಾಗಿದೆ. ನಿತ್ಯ ಬೆಳಗ್ಗೆ, ಮಧ್ಯಾಹ್ನ, ರಾತ್ರಿ ಊಟದ ವ್ಯವಸ್ಥೆಯನ್ನೂ ಮಾಡಲಾಗಿದೆ. ಪೊಂಗಲ್, ತವಾ ಅನ್ನ, ತಿಳಿಸಾರು ಅನ್ನ, ಗಂಜಿಯನ್ನು ನೀಡಲಾಗುತ್ತಿದೆ.

ಆಯುರ್ವೇದ ಚಿಕಿತ್ಸೆಯಲ್ಲಿ ಯಾವುದೇ ಅಡ್ಡಪರಿಣಾಮಗಳಿಲ್ಲ. ಚಿಕಿತ್ಸೆ ಪಡೆದು ಗುಣಮುಖರಾದವರು ಆಯುರ್ವೇದಕ್ಕೆ ಹೊಂದಿಕೊಂಡಿದ್ದಾರೆ. ಮಧುಮೇಹ, ರಕ್ತದೊತ್ತಡ, ಅಲರ್ಜಿ ಸೇರಿದಂತೆ ಅನೇಕ ಸಮಸ್ಯೆಗಳ ಔಷಧಗಳಿಗೆ ಇಲ್ಲಿಗೇ ಬರುತ್ತಾರೆ. ಚಿಕಿತ್ಸೆ ಉಚಿತವಾಗಿದ್ದು, ಪರಿಣಾಮಕಾರಿಯಾಗಿರುವುದರಿಂದ ಎಲ್ಲರೂ ಆಯುರ್ವೇದದತ್ತ ಆಕರ್ಷಿತರಾಗುತ್ತಿದ್ದಾರೆ.

- ಡಾ.ಸೀತಾಲಕ್ಷ್ಮೀ, ಆಯುಷ್ ವೈದ್ಯಾಧಿಕಾರಿ

೨೫ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆಯನ್ನು ೫೦ ಹಾಸಿಗೆ ಸಾಮರ್ಥ್ಯಕ್ಕೆ ಹೆಚ್ಚಿಸುವಂತೆ ಪ್ರಸ್ತಾವನೆ ಸಲ್ಲಿಸಿದ್ದೇನೆ. ಜಾಗಕ್ಕೇನೂ ಕೊರತೆ ಇಲ್ಲ. ಈಗಿರುವ ಆಸ್ಪತ್ರೆ ಆವರಣವನ್ನು ಬಳಸಿಕೊಂಡು ಮೇಲ್ದರ್ಜೆಗೇರಿಸಬಹುದು. ಶೌಚಾಲಯದ ಕೊರತೆ ಕಾಡುತ್ತಿದೆ. ಶುಚಿತ್ವವನ್ನು ಕಾಪಾಡುವುದಕ್ಕೆ ಸಿಬ್ಬಂದಿ ಕೊರತೆ ಇದೆ. ಥೆರಪಿಸ್ಟ್‌ಗಳು ಇನ್ನಷ್ಟು ಮಂದಿ ಬೇಕಿದೆ. ಇದರ ಬಗ್ಗೆ ಮೇಲಧಿಕಾರಿಗಳ ಗಮನಸೆಳೆದಿದ್ದೇನೆ.

- ಡಾ.ಪುಷ್ಪ, ಜಿಲ್ಲಾ ಆಯುಷ್ ಅಧಿಕಾರಿ