ಸಾರಾಂಶ
ಕನ್ನಡಪ್ರಭ ವಾರ್ತೆ ಕುಶಾಲನಗರ
ಕುಶಾಲನಗರ ಸಮೀಪದ ಕೊಡಗರಹಳ್ಳಿ ಬಳಿ ಕಾಫಿ ತೋಟವೊಂದರಲ್ಲಿ ಶುಂಠಿ ಬೆಳೆಯುವುದಾಗಿ ನಡೆದ ಸಾವಿರಾರು ಮರಗಳ ಮಾರಣಹೋಮ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆ ನಡೆಸಲಾಗುವುದು ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಿ. ಭಾಸ್ಕರ್ ತಿಳಿಸಿದ್ದಾರೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಫಿ ತೋಟದ ಮಾಲಕರ ಮತ್ತು ಮೂರು ಮಂದಿ ಆರೋಪಿಗಳ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ. ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡಿರುವ ಶಂಕೆ ವ್ಯಕ್ತಗೊಂಡಿದ್ದು ಈ ಸಂಬಂಧ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ಎ. ಗೋಪಾಲ್ ಅವರ ನೇತೃತ್ವದಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ವರದಿಯನ್ನು ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಭಾಸ್ಕರ್ ಹೇಳಿದ್ದಾರೆ.
ಇದರೊಂದಿಗೆ ಕರ್ತವ್ಯ ಲೋಪ ಎಸಗಿದ ಅಧಿಕಾರಿ, ಸಿಬ್ಬಂದಿಗೆ ಇಲಾಖೆ ಮೂಲಕ ಶಿಸ್ತು ಕ್ರಮ ಕೈಗೊಳ್ಳಲಾಗುವುದು, ಈಗಾಗಲೇ ಕರ್ತವಲೋಪದ ಸಮಜಾಯಿಷಿ ಕೇಳಿ ನೋಟಿಸ್ ನೀಡಲಾಗಿದೆ ಎಂದು ಅವರು ಹೇಳಿದರು.ಕೊಡಗು ಜಿಲ್ಲೆಯಲ್ಲಿ ಶುಂಠಿ ಬೆಳೆಯುವ ಹೆಸರಿನಲ್ಲಿ ಕಾಫಿ ತೋಟಗಳಲ್ಲಿ ಅಕ್ರಮವಾಗಿ ಮರಗಳನ್ನು ನಾಶ ಮಾಡುವುದು ತಡೆಗಟ್ಟುವ ಸಂಬಂಧ ಅಧಿಕಾರಿ, ಸಿಬ್ಬಂದಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದು ಅವರು ಹೇಳಿದರು.
ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಗೋಪಾಲ್ ಅವರು ಕಳೆದ ಎರಡು ದಿನಗಳಿಂದ ಮರಹನನ ನಡೆದಿರುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳೀಯ ಅಧಿಕಾರಿ, ಸಿಬ್ಬಂದಿಯಿಂದ ಮಾಹಿತಿ ಸಂಗ್ರಹಿಸುತ್ತಿದ್ದು ಸಮಗ್ರ ತನಿಖೆ ನಡೆಸಲಾಗುತ್ತಿದೆ.ಸಾವಿರಾರು ಮರಗಳ ಹನನಕುಶಾಲನಗರ ತಾಲೂಕಿನ ಕೊಡಗರಹಳ್ಳಿ ಬಳಿ ಕಾಫಿ ಎಸ್ಟೇಟ್ ಒಂದರಲ್ಲಿ ಶುಂಠಿ ಬೆಳೆಗೆ ಜಾಗ ಸಮತಟ್ಟು ಮಾಡುವ ನೆಪದಲ್ಲಿ ಸಾವಿರಾರು ಮರಗಳ ಹನನ ಮಾಡಲಾಗಿತ್ತು.ಆನೆಕಾಡು ಮೀಸಲು ಅರಣ್ಯಕ್ಕೆ ಸಮೀಪದಲ್ಲಿರುವ ಕೊಡಗರಹಳ್ಳಿ ಬಳಿಯ ಎಸ್ಟೇಟ್ ಒಳಭಾಗದಲ್ಲಿ ಸುಮಾರು 35 ಎಕರೆಗೂ ಮೀರಿ ವ್ಯಾಪ್ತಿಯ ಕಾಫಿ ತೋಟವನ್ನು ನೆಲಸಮ ಮಾಡಿ ಈ ಪ್ರದೇಶದಲ್ಲಿರುವ ಸಾವಿರಾರು ಮರಗಳಿಗೆ ಹಾನಿ ಮಾಡುವವರೊಂದಿಗೆ ಹಲವು ಬೆಲೆ ಬಾಳುವ ಮರಗಳನ್ನು ಅಕ್ರಮವಾಗಿ ಬೀಳಿಸಿದ್ದು ಗೋಚರಿತ್ತು.ಶುಂಠಿ ಬೆಳೆಯುವ ಉದ್ದೇಶದಲ್ಲಿ ಕಳೆದ ಕೆಲವು ಸಮಯದಿಂದ ತೋಟದಲ್ಲಿರುವ ಕಾಫಿ ಗಿಡಗಳನ್ನು ಸೇರಿದಂತೆ ಬೃಹತ್ ಮರಗಳನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಲಾಗಿತ್ತು.ಹಲವು ಬೆಲೆ ಬಾಳುವ ಮೌಲ್ಯದ ಮರಗಳನ್ನು ಕಡಿದಿರುವ ಶಂಕೆ ವ್ಯಕ್ತಗೊಂಡಿದೆ. ನೂರಾರು ಲೋಡ್‌ಗಳಷ್ಟು ಟಿಂಬರ್ ಕೂಡ ಸಾಗಾಟವಾಗಿರುವ ಶಂಕೆ ಸ್ಥಳೀಯರಿಂದ ವ್ಯಕ್ತವಾಗಿದೆ. ಎದುರು ಭಾಗದಲ್ಲಿರುವ ಕಾಫಿ ತೋಟದಲ್ಲಿ ಹಲವು ಲೋಡುಗಳಷ್ಟು ಮರದ ದಿಮ್ಮಿ ಮತ್ತು ಸಣ್ಣ ಪುಟ್ಟ ಕೊಂಬೆಗಳನ್ನು ಸಾಗಿಸಲಾಗಿದೆ.ಹಲಸು, ಮತ್ತಿ ಮತ್ತಿತರ ಜಾತಿಗಳ ಮರಗಳನ್ನು ಕಡಿದಿರುವ ಸುಳಿವು ಗೋಚರಿಸಿದೆ. ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದಲ್ಲಿ ಬೀಟೆ ಮತ್ತಿತರ ಮರಗಳ ತೆರವು ಮಾಡಿರುವ ಬಗ್ಗೆ ಕೂಡ ಸುಳಿವು ಲಭಿಸಬಹುದು ಎನ್ನುತ್ತಾರೆ ಸ್ಥಳೀಯರು.ಈ ಕಾಫಿ ತೋಟದ ಒಳಗೆ ಕಳೆದ ಹಲವಾರು ವರ್ಷಗಳಿಂದ ಕಾಡಾನೆಗಳು ಓಡಾಡುವ ದೃಶ್ಯ ಸಾಮಾನ್ಯವಾಗಿದ್ದು, ಇದು ಆನೆ ಕಾರಿಡಾರ್ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.