ಶೃಂಗೇರಿ: ತಾಲೂಕಿನಾದ್ಯಂತ ಭಾನುವಾರ ಸುರಿದ ಗಾಳಿ ಮಳೆಯಿಂದಾಗಿ ಮಂಗಳೂರು ಶಿವಮೊಗ್ಗ ರಾಷ್ಟ್ರೀಯ ಹೆದ್ದಾರಿ ಶೃಂಗೇರಿ ತ್ಯಾವಣ ಬಳಿ ಸಂಜೆ ಬೃಹತ್ ಮರವೊಂದು ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ಕೆಲ ಹೊತ್ತು ಮಂಗಳೂರು ಶೃಂಗೇರಿ ಸಂಪರ್ಕ ಬಂದ್ ಆಗಿತ್ತು.
ಗಾಳಿಯ ಆರ್ಭಟಕ್ಕೆ ಮರ ರಸ್ತೆಗೆ ಉರುಳಿ 11 ಕೆ.ವಿ. ವಿದ್ಯುತ್ ಲೈನ್ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಕಂಬಗಳು, ಲೈನ್ ತುಂಡಾಗಿ ಹಾನಿಯಾಗಿದೆ. ಮರ ಬೀಳುವ ವೇಳೆ ರಸ್ತೆಯಲ್ಲಿ ವಾಹನ ಸಂಚಾರವಿರದ ಕಾರಣ ಹಾಗೂ ಕಳೆದು ಮೂರು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಭಾರೀ ಅನಾಹುತ ತಪ್ಪಿದೆ.ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿದ್ದರಿಂದ ಶೃಂಗೇರಿ ಕಡೆಯಿಂದ ಮಂಗಳೂರು,ಉಡುಪಿ, ಧರ್ಮಸ್ಥಳ ಕಡೆಗಳಿಗೆ, ಮಂಗಳೂರು ಕಡೆಯಿಂದ ಶೃಂಗೇರಿಯತ್ತ ಸಂಚರಿಸುತ್ತಿದ್ದ ಬಸ್ ಸಹಿತ ನೂರಾರು ವಾಹನಗಳು ಸಾಲು ಗಟ್ಟಿ ನಿಂತಿದ್ದು, ಪ್ರಯಾಣಿಕರ ಪರದಾಡಬೇಕಾಯಿತು. ಕೂಡಲೇ ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ, ಹೆದ್ದಾರಿ ಇಲಾಖೆ, ಮೆಸ್ಕಾಂ ಇಲಾಖೆ ಅಧಿಕಾರಿ, ಸಿಬ್ಬಂದಿ ಧಾವಿಸಿ ಕೆಲ ಹೊತ್ತು ಕಾರ್ಯಾಚರಣೆ ನಡೆಸಿದ ನಂತರ ಮರವನ್ನು ತೆರವುಗೊಳಿಸಿದರು. ನಂತರ ರಸ್ತೆ ಸಂಚಾರ ಪುನಾರಂಭಗೊಂಡಿತು.
ಸಮೀಪದಲ್ಲಿಯೇ ಕಸ ವಿಲೇವಾರಿ ಘಟಕವನ್ನು ನಿರ್ಮಿಸಲು ಜೆಸಿಬಿ ಬಳಸಿ ಗುಡ್ಡದ ಮಣ್ಣನ್ನು ತೆಗೆಯುವಾಗ ರಸ್ತೆ ಬದಿಯಲ್ಲಿನ ಬೃಹತ್ ಮರಗಳನ್ನು ತೆರವುಗೊಳಿಸದೇ ಅವೈಜ್ಞಾನಿಕ ರೀತಿಯಲ್ಲಿ ಬಡಲಾಗಿತ್ತು. ಇನ್ನು ಕೆಲ ಮರಗಳಿದ್ದು ರಸ್ತೆ ಮೇಲೆ ಉರುಳಿ ಬೀಳುವ ಸ್ಥಿತಿಯಲ್ಲಿದೆ. ದುರ್ಗಾ ದೇವಸ್ಥಾನ, ತ್ಯಾವಣ ಬಳಿ ಹೆದ್ದಾರಿ ರಸ್ತೆ ಅಗಲೀಕರಣ ಮಾಡುವಾಗ ಮಣ್ಣು ತೆಗೆದು ಬೃಹತ್ ಮರಗಳನ್ನು ಹಾಗೆಯೇ ಬಿಡಲಾಗಿದೆ. ಮಳೆ ಗಾಳಿ ಆರಂಭಗೊಂಡಿರುವುದರಿಂದ ಮರಗಳು ರಸ್ತೆಗುರುಳಿ ಬೀಳುತ್ತಿರುವುದರ ಜೊತೆ ರಸ್ತೆ ಸಂಪರ್ಕ ಬಂದ್, ವಿದ್ಯುತ್ ಕಂಬಗಳು, ಲೈನ್ ಗಳು ತುಂಡಾಗಿ ಹಾನಿ ತೊಂದರೆಗಳುಂಟಾಗುತ್ತಿದೆ. ಇದಕ್ಕೆ ಹೆದ್ದಾರಿ ಇಲಾಖೆ, ಅರಣ್ಯಇಲಾಖೆ, ಮೆಸ್ಕಾಂ ಇಲಾಖೆಯವರೋ ಯಾರ ನಿರ್ಲಕ್ಷ್ಯವೋ, ಯಾರು ಹೊಣೆಯೋ.ಒಟ್ಟಾರೆ ಗಾಳಿ ಮಳೆಗೆ ಮರಗಳು ಮಾತ್ರ ರಸ್ತೆಗುರುಳುತ್ತಿವೆ.5 ಶ್ರೀ ಚಿತ್ರ 4-ಶೃಂಗೇರಿ ರಾಷ್ಟ್ರೀಯ ಹೆದ್ದಾರಿ 169 ರ ತ್ಯಾವಣ ಬಳಿ ಗಾಳಿ ಮಳೆಗೆ ಬೃಹತ್ ಮರ ರಸ್ತೆಗುರುಳಿ ಬಿದ್ದಿರುವುದು.
5 ಶ್ರೀ ಚಿತ್ರ 5-ಶೃಂಗೇರಿ ತ್ಯಾವಣ ಬಳಿ ರಸ್ತೆಗುರುಳಿದ ಮರವನ್ನು ತೆರವುಗೊಳಿಸುತ್ತಿರುವುದು.