ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಜನತೆಗೆ ಶುಭ್ರ ವಾತಾವರಣ ಮತ್ತು ಆರೋಗ್ಯ ಸಮೃದ್ಧಿಯ ಆಶಯವನ್ನು ಹೊತ್ತ ಹಸಿರು ಉದ್ಯಾನವೊಂದು ಮುದ್ದೇಬಿಹಾಳ ಕ್ಷೇತ್ರದಲ್ಲಿ ಮೈದಳೆಯಲು ಸಿದ್ಧವಾಗುತ್ತಿದೆ. ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ವಿಶೇಷ ಆಸಕ್ತಿ ಮತ್ತು ಅವರ ಅಭಿವೃದ್ಧಿ ಸಂಕಲ್ಪಕ್ಕೆ ಈ ಹಸಿರು ಉದ್ಯಾನ ಸಾಕ್ಷೀಕರಿಸಲಿದೆ.
ನಾರಾಯಣ ಮಾಯಾಚಾರಿ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳಜನತೆಗೆ ಶುಭ್ರ ವಾತಾವರಣ ಮತ್ತು ಆರೋಗ್ಯ ಸಮೃದ್ಧಿಯ ಆಶಯವನ್ನು ಹೊತ್ತ ಹಸಿರು ಉದ್ಯಾನವೊಂದು ಮುದ್ದೇಬಿಹಾಳ ಕ್ಷೇತ್ರದಲ್ಲಿ ಮೈದಳೆಯಲು ಸಿದ್ಧವಾಗುತ್ತಿದೆ. ಶಾಸಕ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ವಿಶೇಷ ಆಸಕ್ತಿ ಮತ್ತು ಅವರ ಅಭಿವೃದ್ಧಿ ಸಂಕಲ್ಪಕ್ಕೆ ಈ ಹಸಿರು ಉದ್ಯಾನ ಸಾಕ್ಷೀಕರಿಸಲಿದೆ.ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ವ್ಯಾಪ್ತಿಯ 35 ಎಕರೆ ಸರ್ಕಾರಿ ಜಾಗದಲ್ಲಿ ಕೆಐಎಡಿಬಿಯಿಂದ ಸುಮಾರು ₹3.5 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಟ್ರೀ ಪಾರ್ಕ್ ನಿರ್ಮಾಣವಾಗುತ್ತಿದೆ. ಆದರೆ, ಇಲ್ಲಿ ಕೇವಲ ಗಿಡ ಮರಗಳಿರುವುದಿಲ್ಲ. ಆರೋಗ್ಯಕ್ಕೆ ಪೂರಕವಾದ ಸಸ್ಯಗಳು ಕೂಡ ಇರಲಿವೆ. ದಕ್ಷಿಣ ಕರ್ನಾಟಕದ ಭಾಗದಲ್ಲಿ ಹೆಚ್ಚಾಗಿ ಕಾಣಸಿಗುತ್ತಿದ್ದ ಉದ್ಯಾನಗಳು ನಮ್ಮ ಭಾಗದ ಜನರಿಗೂ ಸಿಗುವಂತಾಗಲಿ ಎಂಬ ಮಹತ್ವಾಕಾಂಕ್ಷಿಯಿಂದ ಶಾಸಕ ನಾಡಗೌಡರು ಈ ಯೋಜನೆಯ ತ್ವರಿತ ಕಾಮಗಾರಿಗೆ ಸೂಚನೆಯನ್ನೂ ನೀಡಿದ್ದಾರೆ. ಕೇವಲ ಜನರಿಗೆ ಟ್ರೀ ಪಾರ್ಕ್ ಮಾಡಿ ಉದ್ಘಾಟಿಸುವುದೊಂದೆ ಇದರ ಹಿಂದಿರುವ ಉದ್ದೇಶವಲ್ಲ. ಅದನ್ನು ಪ್ರವಾಸಿ ತಾಣವಾಗಿ ಮಾಡಿ, ಜನರನ್ನು ಆಕರ್ಷಿಸುವ ಇರಾದೆ ಕೂಡ ಇದೆ.ಕೆಐಎಡಿಬಿಯಿಂದ ಸುಮಾರು ₹3.5 ಕೋಟಿ ವೆಚ್ಚದಲ್ಲಿ ಟ್ರೀ ಪಾರ್ಕ್ ನಿರ್ಮಾಣವಾಗುತ್ತಿದ್ದು, ಈಗಾಗಲೇ ₹2 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿ ನಡೆದಿದೆ. ಅರಣ್ಯವೇ ನಮ್ಮ ಸಂಪತ್ತು ಎಂದು ಬಿಂಬಿಸುವ ನಿಟ್ಟಿನಲ್ಲಿ ಈ ಪಾರ್ಕ್ ನಿರ್ಮಾಣವಾಗುತ್ತಿದ್ದು, ಇದಕ್ಕೆ ಈಗಾಗಲೇ ಶಂಕುಸ್ಥಾಪನೆ ಕೂಡ ನೆರವೇರಿದೆ.ಈ ಉದ್ಯಾನದಲ್ಲಿ ಏನೇನು ಇರಲಿದೆ?: ಅತ್ಯಾಧುನಿಕ ಮತ್ತು ಅತ್ಯಾಕರ್ಷಕ ಮಾದರಿಯ ಸಸ್ಯೋದ್ಯಾನ (ಟ್ರೀ ಪಾರ್ಕ್) ವರ್ಷಾಂತ್ಯಕ್ಕೆ ಸಾರ್ವಜನಿಕರಿಗೆ ಲಭ್ಯವಾಗುವ ಸಾಧ್ಯತೆ ಇದೆ. 35 ಎಕರೆ ಜಾಗದಲ್ಲಿ ಈ ಉದ್ಯಾನ ಅಭಿವೃದ್ಧಿಪಡಿಸಲು ಎರಡು ಹಂತದ ಕಾಮಗಾರಿಯನ್ನು ಹಮ್ಮಿಕೊಳ್ಳಲು ಪ್ರಾದೇಶಿಕ ಅರಣ್ಯ ಇಲಾಖೆಯ ಸಹಯೋಗದಲ್ಲಿ ಕೆಐಎಡಿಬಿ ನಿರ್ಧರಿಸಿದೆ. ಮೊದಲ ಹಂತದಲ್ಲಿ ₹2 ಕೋಟಿ ವೆಚ್ಚ ಮಾಡಲಾಗುತ್ತಿದೆ. ಉದ್ಯಾನದಲ್ಲಿ ಎಂಟ್ರಿ ಪ್ಲಾಜಾ, ವಾಕಿಂಗ್ ಪಾಥ್, ಮಕ್ಕಳ ಆಟದ ಮೈದಾನ, ಶೌಚಗೃಹ, ಸೈಕಲ್ ಡಾಕಿಂಗ್ ಸ್ಟೇಷನ್, ಫುಡ್ ಕೋರ್ಟ್, ಕಾಫಿ ಶಾಪ್, ಶಿಲ್ಪಕಲಾ ಕೋರ್ಟ್, ಸೈನೇಜ್ ಬೋರ್ಡ್ ಅಳವಡಿಕೆ, ವಿಶ್ರಾಂತಿ ಕೊಠಡಿ, 1.4 ಕಿ.ಮೀ ವಾಕ್ ವೇ, 200 ಮೀಟರ್ ಎಲಿವೇಟೆಡ್ ವಾಕ್ ವೇ, ಎತ್ತರ ಮತ್ತು ಉದ್ದದ ತೂಗುವ ವಾಕ್ ವೇ, ಸಾಕು ಪ್ರಾಣಿ ಪಕ್ಷಿಗಳ ವಲಯ ಸೇರಿದಂತೆ ಹಲವಾರು ಸೌಲಭ್ಯಗಳು ಇಲ್ಲಿರಲಿವೆ. ದೂರದೃಷ್ಟಿತ್ವ ಇದ್ದರೆ ಏನು ಬೇಕಾದರೂ ಅಭಿವೃದ್ಧಿಯಾಗುತ್ತದೆ ಎಂಬುವುದಕ್ಕೆ ಈ ಹಸಿರು ತಾಣವೇ ಸಾಕ್ಷಿಯಾಗಲಿದೆ. ಈಗಾಗಲೇ ಅರ್ಧ ಕಾರ್ಯ ಮುಗಿದಿದ್ದು, ಇನ್ನುಳಿದ ಕೆಲಸ ಮುಂದಿನ 6 ತಿಂಗಳಲ್ಲಿ ಮುಗಿಯುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.ಯಾಕೆ ಆಕರ್ಷಣೆ ಆಗುತ್ತೆ ಟ್ರೀ ಪಾರ್ಕ್?: ಪರಿಸರ ಬೆಳೆಸುವ ಮಹತ್ತರ ಉದ್ದೇಶದ ಜತೆಗೆ ಸಮುದಾಯ ಕೇಂದ್ರಿತ ತಾಣವಾಗಿ ಮಾಡುವುದು ಈ ಯೋಜನೆಯ ಉದ್ದೇಶಗಳಲ್ಲಿ ಒಂದು. ಹೀಗಾಗಿ ಇಲ್ಲಿ ಬೃಹದಾಕಾರದ ಎತ್ತರದ ಶಿವಮೂರ್ತಿ ನಿರ್ಮಾಣ, ಕೆಳ ಭಾಗದಲ್ಲಿ ಬಸವಾದಿ ಶರಣರ ತತ್ವಗಳು ಹಾಗೂ ಪ್ರಾಚೀನ ಪರಂಪರೆಗಳನ್ನು ಬಿಂಬಿಸುವ ಅಪರೂಪದ ಸ್ತಬ್ಧ ಚಿತ್ರಗಳು ಕೂಡ ಮೈದಳೆಯಲಿವೆ. ವಿನ್ಯಾಸದ ಸೇತುವೆ, ತೆಗ್ಗು ಪ್ರದೇಶದಲ್ಲಿ ನೀರು ನಿಲ್ಲಿಸಿ ಬೋಟಿಂಗ್ ವ್ಯವಸ್ಥೆ, ವಿವಿಧ ವಿದ್ಯುತ್ ಅಲಂಕಾರಿಕ ದೀಪಗಳನ್ನು ಜೋಡಿಸುವ ಕಾರ್ಯ ಕೂಡ ಈಗ ಭರದಿಂದ ಸಾಗಿದೆ.ಈ ಟ್ರೀ ಪಾರ್ಕ್‌ಗೆ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವೆಂದು ನಾಮಕರಣ ಮಾಡಲಾಗಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ, ಸಚಿವ ಎಚ್.ಕೆ.ಪಾಟೀಲ, ಸಂಸದ ರಮೇಶ ಜಿಗಜಿಣಗಿ ಸೇರಿ ಗಣ್ಯರು ಇತ್ತೀಚೆಗೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕ್ಷೇತ್ರದ ಜನರ ಆರೋಗ್ಯಕ್ಕಾಗಿ ಹಸಿರು ತಾಣದ ನಿರ್ಮಾಣಕ್ಕೆ ಹಾಕಿರುವ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರ ಕಾಳಜಿಗೆ ಜನತೆ ಕೂಡ ಸಾರ್ಥಕತೆ ಮಾತನ್ನಾಡುತ್ತಿದ್ದಾರೆ.------ಬಾಕ್ಸ್...1ಪಾರ್ಕ್‌ನಲ್ಲಿ ಸಿಗಲಿವೆ ಔಷಧ ಸಸ್ಯಗಳುಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನದಲ್ಲಿ ಪ್ರಾದೇಶಿಕ ಅರಣ್ಯ ಇಲಾಖೆ ಅಧಿಕಾರಿಗಳು ನೈಸರ್ಗಿಕ ಗಿಡಗಳಾದ ಮಶ್ವಾಳ, ಆಲೆ, ಬೇವು, ಬನ್ನಿ, ಕಶಾರೆ, ಕವಳಿ, ನೋಣಿ, ನೆಲ್ಲಿ, ಕಪ್ಪು ಪೇರು, ಬೆಟ್ಟದ ನೆಲ್ಲಿ, ಹುಣಸಿ, ವಾಟರ್ ಆಪಲ್, ಮಲ್ಬರಿ, ಮೊಸಂಬಿ, ಚಿಕ್ಕು, ಸೀತಾಫಲ, ನೇರಳಿ, ಹಲಸಿ ಮರ, ಅಂಜೂರು, ಮಾವಿನ ಗಿಡಗಳು, ಚಳ್ಳೆ, ಆಕಾಶ ಮಲ್ಲಿಗೆ, ಹೊಳೆದಾಶ್ವಾಳ, ಬಿಳಿ ಸಂಕೇಶ್ವರ, ಕದಂಬ ರೋಜಿಯಾ, ಸಂಪಿಗೆ ಸೇವಂತಿ, ಹೂವು ಸೇರಿದಂತೆ 20ಕ್ಕೂ ಹೆಚ್ಚು ಪ್ರಬೇದದ ಉಪಯುಕ್ತ ಔಷಧ ಗುಣವುಳ್ಳ ಸಸ್ಯಗಳನ್ನು ಬೆಳೆಸಲಾಗಿದೆ.----------ಕೋಟ್ಮನುಷ್ಯ ಸೇರಿದಂತೆ ಪಶು ಪಕ್ಷಿಗಳು ಸುಂದರವಾಗಿ ಬದುಕಬೇಕಾದರೆ ನಮ್ಮ ಸುತ್ತಲಿನ ಪರಿಸರ ಸ್ವಚ್ಛಂದವಾಗಿರಬೇಕು. ಜತೆಗೆ ಪ್ರಕೃತಿ ಅಸಮತೋಲನವನ್ನು ತಡೆಗಟ್ಟಿ ನಮ್ಮ ಸುತ್ತಲೂ ಗಿಡಗಳನ್ನು ಬೆಳೆಸಬೇಕು. ಸದ್ಯ ಮುದ್ದೇಬಿಹಾಳದಲ್ಲಿ ಶಾಸಕ ಅಪ್ಪಾಜಿ ನಾಡಗೌಡರು ಬೃಹತ್ ಕಾಡು ಬೆಳೆಸುವುದರ ಜೊತೆಗೆ ಜನಾಕರ್ಷಣೆಗೆ ಪೂರಕವಾಗಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ನಿರ್ಮಿಸುತ್ತಿದ್ದಾರೆ. ಈ ಮೂಲಕ ಪರಿಸರ ರಕ್ಷಣೆ ಜತೆಗೆ ಜನರಿಗೆ ಆರೋಗ್ಯಧಾಮ ನಿರ್ಮಿಸುವ ಕಾರ್ಯ ನಿಜಕ್ಕೂ ಶ್ಲಾಘನೀಯ.- ಈಶ್ವರ ಖಂಡ್ರೆ, ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವರು---------------ಮನುಷ್ಯ ಈಗ ಪ್ರಕೃತಿ ವಿಕೋಪಕ್ಕೆ ನಲುಗಿ ಹೋಗಿದ್ದಾನೆ. ಆರೋಗ್ಯದ ಮೇಲೆ ದುಷ್ಪರಿಣಾಮಗಳು ಹೆಚ್ಚಾಗಿವೆ. ಈ ನಿಟ್ಟಿನಲ್ಲಿ ನಮ್ಮ ಭಾಗದಲ್ಲೊಂದು ಪರಿಸರ ಧಾಮ ನಿರ್ಮಿಸುವ ಸ್ವಾಸ್ಥ ಮತ್ತು ಆರೋಗ್ಯವಂತ ವಾತಾವರಣ ನಿರ್ಮಿಸಬೇಕೆಂಬ ನನ್ನ ಬಹುದಿನದ ಕನಸಾಗಿತ್ತು. ಈಗ ನನಸಾಗುತ್ತಿದೆ. ಈ ಹಿನ್ನೆಲೆಯಲ್ಲಿ ಈ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನಕ್ಕಾಗಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಸುಮಾರು ₹ 2 ಕೋಟಿಗಳ ವಿಶೇಷ ಅನುದಾನ ನೀಡಿದ್ದಾರೆ. ಅಲ್ಲದೇ, ಇನ್ನೂ ಹೆಚ್ಚಿನ ಅನುದಾನವನ್ನು ಮುಂದಿನ ದಿನಗಳಲ್ಲಿ ನೀಡುತ್ತೇನೆ ಎಂದು ಭರವಸೆ ನೀಡಿದ್ದಾರೆ. ಜತೆಗೆ ನಮ್ಮ ಶಾಸಕರ ನಿಧಿಯಿಂದ ಸುಮಾರು ₹ 50 ಲಕ್ಷ ಹೆಚ್ಚುವರಿ ಹಣವನ್ನು ತೆಗೆದಿರಿಸುವ ಮೂಲಕ ಸುಂದರ ಪ್ರವಾಸಿ ತಾಣ ನಿರ್ಮಿಸಲಾಗುವುದು.- ಸಿ.ಎಸ್.ನಾಡಗೌಡ(ಅಪ್ಪಾಜಿ), ಶಾಸಕರು ಹಾಗೂ ಅಧ್ಯಕ್ಷರು ಕರ್ನಾಟಕ ರಾಜ್ಯ ಸಾಬೂನು ಮತ್ತು ಮಾರ್ಜಕ ನಿಗಮ